ದಯಾಭವನ ಮಕ್ಕಳ ಪಾಲನಾ ಸಂಸ್ಥೆಗೆ ಡೀಸಿ ಭೇಟಿ

242

Get real time updates directly on you device, subscribe now.

ತುಮಕೂರು: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರು ಕುಣಿಗಲ್ ತಾಲ್ಲೂಕು ಭಕ್ತರಹಳ್ಳಿಯಲ್ಲಿರುವ ದಯಾಕಿರಣ ದತ್ತು ಕೇಂದ್ರ ಹಾಗೂ ದಯಾಭವನ ಮಕ್ಕಳ ಪಾಲನಾ ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಸ್ಥಿತಿ ಗತಿಗಳ ಬಗ್ಗೆ ವಿಚಾರಿಸಿದರು.

ದತ್ತು ಕೇಂದ್ರದಲ್ಲಿರುವ ಒಂದು ತಿಂಗಳಿನಿಂದ ೬ ವರ್ಷದೊಳಗಿನ ೧೯ ಮಕ್ಕಳ ಹಿನ್ನೆಲೆ ಹಾಗೂ ಅವರನ್ನು ಮುಂದಿನ ದಿನಗಳಲ್ಲಿ ಪುನರ್ವಸತಿಗೊಳಿಸಲಾಗುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರಲ್ಲದೆ ಕಾರಣಾಂತರಗಳಿಂದ ಮಾರಣಾಂತಿಕ ಕಾಯಿಲೆ ಹಾಗೂ ಅಂಗವಿಕಲತೆಯಿಂದ ಬಳಲುತ್ತಿರುವ ಮಕ್ಕಳನ್ನು ದತ್ತು ಕೇಂದ್ರದಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ದಯಾಭವನ ಮಕ್ಕಳ ಪಾಲನಾ ಕೇಂದ್ರದಲ್ಲಿ ಸಂಕಷ್ಟಕ್ಕೊಳಗಾದ ಕುಟುಂಬಕ್ಕೆ ಸೇರಿದ ೭೨ ಮಕ್ಕಳನ್ನು ಭೇಟಿ ಮಾಡಿ ಮಕ್ಕಳು ಅತ್ಯಂತ ಚಟುವಟಿಕೆಯಿಂದ ಕೂಡಿರುವುದನ್ನು ಮತ್ತು ದಯಾಭವನ ಸಂಸ್ಥೆಯು ಮಕ್ಕಳ ಶಿಕ್ಷಣ ಹಾಗೂ ಅವರ ಭವಿಷ್ಯ ರೂಪಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸವಿವರ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಬಸವಣ್ಣನವರು ಹೇಳಿದಂತೆ ದಯೆಯೇ ಧರ್ಮದ ಮೂಲವಯ್ಯ ಎಂಬ ಮಾತನ್ನು ದಯಾಭವನ ಸಂಸ್ಥೆಯಲ್ಲಿ ಅಕ್ಷರಶಃ ಅನುಷ್ಠಾನ ಮಾಡುತ್ತಿರುವುದು ಸಂತೋಷದ ವಿಷಯವಾಗಿದ್ದು, ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ದೇಶದ ಉತ್ತಮ ನಾಗರಿಕನಾಗಿ ಹಾಗೂ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಮುಖ್ಯವೇ ಹೊರತು ಕೇವಲ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವುದು ಮುಖ್ಯವಲ್ಲ ಎಂದು ಹೇಳಿದರು.
ಸಂಸ್ಥೆಯಲ್ಲಿನ ಮಕ್ಕಳು ಭ್ರಾತೃತ್ವ ಪ್ರೇಮದಿಂದ ಎಲ್ಲರೊಂದಿಗೆ ಬೆರೆತು ಅಡೆ-ತಡೆಗಳನ್ನು ಮೀರಿ ಸಾಧನೆಗೈದು ಗುರಿ ತಲುಪಬೇಕೆಂದು ಕಿವಿಮಾತು ಹೇಳಿದರು. ಸಂಸ್ಥೆಯ ಮಕ್ಕಳು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಅವರು ನಟಿಸಿದ ಚಿತ್ರಗಳ ಹಾಡುಗಳಿಗೆ ಹೆಜ್ಜೆ ಹಾಕಿ ನೃತ್ಯ ಮಾಡಿ ಎಲ್ಲರ ಮನಸೂರೆಗೊಂಡರು.
ದಯಾಭವನ ಸಂಸ್ಥೆಯ ಆವರಣದಲ್ಲಿ ಸಾಕಿರುವ ವಿವಿಧ ರೀತಿಯ ಪ್ರಾಣಿ- ಪಕ್ಷಿಗಳನ್ನು ವೀಕ್ಷಿಸಿದ ಅವರು ಅಲ್ಲಿ ಸಾಕಿರುವ ಯಾವುದೇ ಪ್ರಾಣಿ-ಪಕ್ಷಿಯನ್ನು ಆಹಾರಕ್ಕಾಗಿ ಕೊಲ್ಲದೇ ಇರುವ ಸಂಸ್ಥೆಯ ನಿಯಮವನ್ನು ಪ್ರಶಂಸಿಸಿದರು. ಭೇಟಿಯ ಸಮಯದಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ದಯಾಭವನ ಸಂಸ್ಥೆಯ ಕಾರ್ಯದರ್ಶಿ ದಿನೇಶ್ ವರ್ಕಿ, ದತ್ತುಕೇಂದ್ರದ ಸಂಯೋಜಕ ರಮೇಶ್, ರಕ್ಷಣಾಧಿಕಾರಿ ಶಿವಣ್ಣ, ವೈದ್ಯಾಧಿಕಾರಿಗಳಾದ ಡಾ.ಲಿಸ್ಸಿ ಚೆರಿಯನ್ ಹಾಗೂ ಡಾ.ಪುಷ್ಪ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!