ತಾಲೂಕು ಕಚೇರಿಗೆ ನ್ಯಾಯಾಧೀಶರ ಭೇಟಿ

222

Get real time updates directly on you device, subscribe now.

ತುರುವೇಕೆರೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ತುರುವೇಕೆರೆ ಪಟ್ಟಣದ ತಾಲೂಕು ಕಚೇರಿ, ಅಂಗನವಾಡಿ ಕೇಂದ್ರ ಹಾಗೂ ಪೌಷ್ಟಿಕ ಆಹಾರ ಉತ್ಪಾದನಾ ಘಟಕಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಶ್ವ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಮನವಿ ಮೇರೆಗೆ ತಾಲೂಕಿಗೆ ಭೇಟಿ ನೀಡಿದ ಹಿರಿಯ ನ್ಯಾಯಾಧೀಶ ರಾಘವೇಂದ್ರ ಶೆಟ್ಟಿಗಾರ್ ಅವರು ತಾಲೂಕು ಕಚೇರಿ, ಅಂಗನವಾಡಿ ಕೇಂದ್ರ, ಹಾಗೂ ಪೌಷ್ಟಿಕ ಆಹಾರ ಉತ್ಪಾದನಾ ಘಟಕಕ್ಕೆ ಖುದ್ದು ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ಕಂದಾಯ ಇಲಾಖೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯಿಂದ ಇಲಾಖಾ ಮಾಹಿತಿ ಪಡೆದರು. ಸಕಾಲ ಯೋಜನೆ, ಸಾಮಾಜಿಕ ಭದ್ರತಾ ಯೋಜನೆ ಕುರಿತಂತೆ ಶಿರಸ್ತೇದಾರ್ ಸುನಿಲ್ ಕುಮಾರ್ ಅವರಿಂದ ಮಾಹಿತಿ ಪಡೆದರು. ಕಚೇರಿಗೆ ಬರುವ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯ ಕೊರತೆಯಾಗದಂತೆ ನಿಗಾ ವಹಿಸುವಂತೆ ಸಲಹೆ ನೀಡಿದರು.
ಕಚೇರಿ ಆವರಣದಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿ ಕಚೇರಿಗೆ ಬಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಆನಂತರ ಭೂಮಾಪನ ಇಲಾಖೆಗೆ ಭೇಟಿ ನೀಡಿ ತಮ್ಮ ಇಲಾಖಾ ಕೆಲಸ ಕಾರ್ಯಗಳಲ್ಲಿ ದಕ್ಷತೆ ತೋರುವಂತೆ ಅಲ್ಲಿನ ಸಿಬ್ಬಂದಿಗೆ ತಿಳಿಸಿದರು.
ಪಟ್ಟಣದ ಸುಬ್ರಹ್ಮಣ್ಯ ನಗರದ ಅಂಗನವಾಡಿ ಕೇಂದ್ರವೊಂದಕ್ಕೆ ಭೇಟಿ ನೀಡಿ ಅಲ್ಲಿನ ಪುಟಾಣಿ ಮಕ್ಕಳನ್ನು ಅಕ್ಕರೆಯಿಂದ ಮಾತನಾಡಿಸಿದರು. ಅಂಗನವಾಡಿ ಕೇಂದ್ರ ಸ್ಥಳಾಂತರಿಸಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸುವುದು ಅತ್ಯಗತ್ಯ, ಪಟ್ಟಣದಲ್ಲಿ ೧೩ ಅಂಗನವಾಡಿ ಕಟ್ಟಡ ನಿರ್ಮಾಣವನ್ನು ತ್ವರಿತವಾಗಿ ಕೈಗೊಳ್ಳಲು ಸೂಚಿಸಿ, ಮಕ್ಕಳ ಸ್ನೇಹಿಯಾಗಿ ನಿರ್ಮಿಸುವಂತೆ ಸಲಹೆ ನೀಡಿದರು.
ಪೌಷ್ಟಿಕ ಆಹಾರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಮಕ್ಕಳು ಹಾಗೂ ಗರ್ಭಿಣಿಯವರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಲು ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಈ ವೇಳೆ ವಿಶ್ವಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್, ಕಂದಾಯ ಇಲಾಖಾ ಶಿರಸ್ತೇದಾರ್ ಸುನಿಲ್ಕುಮಾರ್, ಎಸಿಡಿಪಿಓ ಅರುಣ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಇದ್ದರು.

Get real time updates directly on you device, subscribe now.

Comments are closed.

error: Content is protected !!