ಬೇಲಿ ನಿರ್ಮಿಸಿ ಪಾರ್ಕ್ ಗಳ ರಕ್ಷಣೆ ಮಾಡಿ

ಟೂಡ, ಪಾಲಿಕೆ ಆಯುಕ್ತರಿಗೆ ಸಂಸದ ಜಿ.ಎಸ್.ಬಸವರಾಜು ಸೂಚನೆ

153

Get real time updates directly on you device, subscribe now.

ತುಮಕೂರು: ನಗರದಲ್ಲಿರುವ ಈಗಾಗಲೇ ಗುರುತಿಸಿರುವ ಪಾರ್ಕ್ ಗಳನ್ನು ಶೀಘ್ರದಲ್ಲಿಯೇ ಹದ್ದುಬಸ್ತು ಮಾಡಿಸಿ, ಬೇಲಿ ನಿರ್ಮಿಸುವಂತೆ ನಗರಪಾಲಿಕೆ ಮತ್ತು ಟೂಡಾ ಆಯುಕ್ತರಿಗೆ ಸಂಸದ ಜಿ.ಎಸ್.ಬಸವರಾಜು ತಾಕೀತು ಮಾಡಿದ್ದಾರೆ.

ಟೌನ್ಹಾಲ್ ಕಟ್ಟಡದಲ್ಲಿ ನಡೆದ ಜನತಾ ಜೀವ ವೈವಿದ್ಯ ದಾಖಲಾತಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದಿನ ಕೆಲ ಅಧಿಕಾರಗಳು ಪಾರ್ಕ್ ಗಳನ್ನು ಕೆಲವರಿಗೆ ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ, ಅವುಗಳನ್ನು ಪತ್ತೆ ಮಾಡುವುದರ ಜೊತೆಗೆ ಹಾಲಿ ಗುರುತಿಸಿರುವ ಪಾರ್ಕ್ ಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಯೋ ಟ್ಯಾಗ್ ಮಾಡುವ ಕೆಲಸ ಆರಂಭಿಸುವಂತೆ ಸಭೆಯಲ್ಲಿ ಹಾಜರಿದ್ದ ನಗರಪಾಲಿಕೆಯ ಆಯುಕ್ತೆ ರೇಣುಕಾ, ಟೂಡಾ ಆಯುಕ್ತ ಯೋಗಾನಂದ ಕುಮಾರ್ ಅವರಿಗೆ ಸೂಚಿಸಿದ ಸಂಸದರು, ಮುಂದಿನ ಸಭೆಯಲ್ಲಿ ಅವುಗಳ ಅಂಕಿ ಅಂಶದೊಂದಿಗೆ ಹಾಜರಾಗಬೇಕೆಂದರು.
ಸಭೆಗೆ ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಆಯುಕ್ತೆ ರೇಣುಕಾ, ನಗರದಲ್ಲಿ ಸುಮಾರು ೫೨೧ ಪಾರ್ಕ್ ಗಳಿದ್ದು, ಇವುಗಳಲ್ಲಿ ೩೭೦ ಪಾರ್ಕ್ ಳನ್ನು ಈಗಾಗಲೇ ಗುರುತಿಸಿ, ಹದ್ದುಬಸ್ತು ಮಾಡಿಸಿ ಜಿಪಿಎಸ್ ಗೆ ಅಳವಡಿಸಲಾಗಿದೆ, ಉಳಿದವುಗಳ ಒತ್ತುವರಿ ತೆರೆವು, ಗಡಿ ಗುರುತಿಸುವ ಕಾರ್ಯ ಚಾಲನೆಯಲ್ಲಿದೆ, ಕೆಲ ದಿನಗಳಿಂದ ಸರ್ವೆಯರ್ ಗಳ ಮುಷ್ಕರವಿದ್ದ ಪರಿಣಾಮ ಕುಂಠಿತವಾಗಿತ್ತು, ಮುಂದಿನ ನಾಲ್ಕು ತಿಂಗಳಲ್ಲಿ ನಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಪಾರ್ಕ್ ಗಳನ್ನು ವಶಕ್ಕೆ ಪಡೆದು, ಪೆನ್ಸಿಂಗ್ ಮಾಡಿಸುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.
ಪ್ರಸ್ತುತ ನಗರದಲ್ಲಿರುವ ಪಾರ್ಕ್ ಗಳ ಒತ್ತುವರಿ ಸೇರಿದಂತೆ ಇನ್ನಿತರ ವಿಚಾರಗಳಿಗಾಗಿ ೩೩೦ ಜಾಗಗಳ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ, ೧೨೫ ಜಾಗಗಳ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ, ೮೦ ಜಾಗಗಳ ಬಗ್ಗೆ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ವ್ಯಾಜ್ಯ ನಡೆಯುತ್ತಿದೆ, ಇವುಗಳನ್ನು ೧೫೦ಕ್ಕೂ ಹೆಚ್ಚು ಪ್ರಕರಣಗಳು ಖುಲ್ಲಾ ಆಗಿವೆ, ಈ ಬಗ್ಗೆ ೨೨ರ ಮಂಗಳವಾರದ ವಿಶೇಷ ಸಭೆಯನ್ನು ಪಾಲಿಕೆಯ ಪರ ವಕೀಲರೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆಯುಕ್ತರು ವಿವರ ನೀಡಿದರು.
ನಗರ ಪಾಲಿಕೆಯ ೧೫ನೇ ವಾರ್ಡ್ನ ಸದಸ್ಯೆ ಗಿರಿಜಾ ಧನಿಯಕುಮಾರ್ ಮಾತನಾಡಿ, ನಮ್ಮ ವಾರ್ಡ್ ನಲ್ಲಿ ಎರಡು ಪಾರ್ಕ್ ಗಳನ್ನು ಸ್ಮಾರ್ಟಿಸಿಟಿ ಅನುದಾನದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಅಭಿವೃದ್ಧಿ ಪಡಿಸಲಾಗಿದೆ, ಆದರೆ ನಿರ್ವಹಣೆಗೆ ಅನುದಾನ ನೀಡದ ಕಾರಣ ಪಾರ್ಕ್ ಗಳು ಹಾಳಾಗಿವೆ, ಸರಕಾರಿ ಜೂನಿಯರ್ ಕಾಲೇಜಿನ ಆಲದ ಮರದ ಪಾರ್ಕ್, ಎನ್ಇಪಿಎಸ್ ಪೊಲೀಸ್ ಠಾಣೆ ಹಿಂದಿನ ಆಜಾದ್ ಪಾರ್ಕ್ ಗಳು ಹಾಳಾಗುತ್ತಿದ್ದು, ಜನರು ಹಿಡಿಶಾಪ ಹಾಕುತ್ತಿದ್ದಾರೆ, ಹಾಗಾಗಿ ನಿರ್ವಹಣೆಗೆ ಪಾಲಿಕೆ ವತಿಯಿಂದ ಅನುದಾನ ನೀಡುವಂತೆ ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸಂಸದರು, ಬೆಂಗಳೂರು ಸೇರಿದಂತೆ ಎಲ್ಲಾ ಪಾಲಿಕೆಗಳಲ್ಲಿಯೂ ಪಾರ್ಕ್ ಗಳ ನಿರ್ವಹಣೆಗೆ ಅನುದಾನ ನೀಡಲಾಗುತ್ತಿದೆ, ಹಾಗಾಗಿ ತುಮಕೂರು ಪಾಲಿಕೆಯಲ್ಲಿಯೂ ಅನುದಾನ ಮೀಸಲಿಡುವಂತೆ ಸಲಹೆ ನೀಡಿದ ಸಂಸದರು, ಜನರ ತೆರಿಗೆ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ತುಮಕೂರು ಹೊರವಲಯದ ಮಲ್ಲಸಂದ್ರ ಸಮೀಪ ರಾಷ್ಟ್ರೀಯ ಹೆದ್ದಾರಿ ೨೦೬ರ ನಾಲ್ಕು ಪಥದ ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿರುವ ಬಿಎಸ್ಎನ್ಎಲ್ ಟವರ್ ನ್ನು ಸ್ಥಳಾಂತರಿಸುವ ಕುರಿತು ಎನ್ಹೆಚ್ಎಐನ ಅಧಿಕಾರಿ ಹಾಗೂ ಬಿಎಸ್ಎನ್ಎಲ್ ಪ್ರಬಂಧಕರೊಂದಿಗೆ ಮಾತುಕತೆ ನಡೆಸಿದ ಸಂಸದ ಜಿ.ಎಸ್.ಬಸವರಾಜು, ರಸ್ತೆ ಅಭಿವೃದ್ಧಿಗೆ ಅಡ್ಡವಾಗಿರುವ ಮೊಬೈಲ್ ಟವರ್ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ನಗರದಲ್ಲಿ ರಾಜಗಾಲುವೆ ಒತ್ತುವರಿ ಕುರಿತಂತೆ ಚರ್ಚೆಯಲ್ಲಿ ಮಾಹಿತಿ ನೀಡಿದ ಪಾಲಿಕೆ ಆಯುಕ್ತರು, ರಾಜಗಾಲುವೆ ಒತ್ತುವರಿ ತೆರೆವಿಗೆ ಸಂಬಂಧಿಸಿದಂತೆ ಇನ್ನೂ ೨೫ ಕಿ.ಮೀ ಮಾತ್ರ ಸರ್ವೆಗೆ ಬಾಕಿ ಇದೆ, ಉಳಿದವುಗಳನ್ನು ಈಗಾಗಲೇ ಅಳತೆ ಮಾಡಿ, ತೆರವು ಮಾಡಲು ಆದೇಶ ನೀಡಲಾಗಿದೆ, ನಗರದಲ್ಲಿ ಒಂದೇ ಬಾರಿ, ರಾಜಗಾಲುವೆ, ಪಾರ್ಕ್ ಒತ್ತುವರಿ, ಸರಕಾರಿ ಜಾಗಗಳ ಗುರುತಿಸುವ ನಡೆಯುತ್ತಿದ್ದು, ಇರುವ ನಾಲ್ವರು ಸರ್ವೆಯರ್ಗಳನ್ನೇ ಎಲ್ಲದಕ್ಕೂ ಬಳಸಿಕೊಳ್ಳಲಾಗುತ್ತಿದೆ, ಮುಂದಿನ ಮೂರು ತಿಂಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಿ, ತೆರವಿಗೆ ಚಾಲನೆ ನೀಡಲಾಗುವುದು ಎಂದರು.
ನಗರದಲ್ಲಿ ರಾತ್ರೋರಾತ್ರಿ ಬಿ.ಹೆಚ್.ರಸ್ತೆಯ ಡಿವೈಡರ್ ನಲ್ಲಿ ಹಾಕಿದ್ದ ಬೇವಿನ ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಂಸದರು, ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ಆಯುಕ್ತರಾದ ರೇಣುಕಾ ಮತ್ತು ರಮೇಶ್ ಅವರು, ಈಗಾಗಲೇ ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ, ಆದರೆ ಮರ ಕಡಿದ ದಿನ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ, ಮರ ಕಡಿದವನ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ, ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಗರದಲ್ಲಿ ಕುಡಿಯುವ ನೀರು, ಯುಜಿಡಿ, ಮರ, ಗಿಡಗಳನ್ನು ನೆಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ನಾಗಣ್ಣ, ಪಾಲಿಕೆಯ ವೈದ್ಯಾಧಿಕಾರಿ ಡಾ.ರಕ್ಷಿತ್, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಅರಣ್ಯ ಇಲಾಖೆ, ಆಯುಷ್ಮಾನ್, ಟೂಡಾ, ಪಾಲಿಕೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!