ಪಳವಳ್ಳಿ ಕಟ್ಟೆ ಬಳಿ ಭೀಕರ ಅಪಘಾತ

ಐವರ ದುರ್ಮರಣ- ೬೦ಕ್ಕೂ ಹೆಚ್ಚು ಮಂದಿಗೆ ಗಾಯ- ಚಾಲಕನ ಅತೀ ವೇಗ ದುರಂತಕ್ಕೆ ಕಾರಣ

247

Get real time updates directly on you device, subscribe now.

ಪಾವಗಡ: ಚಾಲಕನ ಅಜಾಗರುಕತೆಯಿಂದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಐವರು ದುರ್ಮರಣ ಹೊಂದಿದ ದುರಂತ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ಬೆಳಗ್ಗೆ ೮.೩೦ ಸುಮಾರಿಗೆ ನಡೆದಿದೆ, ಓವರ್ ಲೋಡ್ ಮತ್ತು ಚಾಲಕ ಬಸ್ನ್ನು ಅತಿ ವೇಗವಾಗಿ ಓಡಿಸಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.

ಪೋತಗಾನಹಳ್ಳಿಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಮೂಲ್ಯ (೨೦), ಸೂಲನಾಯಕನಹಳ್ಳಿಯ ಖಾಸಗಿ ಕಂಪನಿ ಉದ್ಯೋಗಿ ಅಜಿತ್ ಕುಮಾರ್ (೨೨), ವೈ.ಎನ್ ಹೊಸಕೋಟೆಯ ವಿದ್ಯಾರ್ಥಿ ಕಲ್ಯಾಣ್ ಕುಮಾರ್ (೨೨), ಆಂಧ್ರ ಪ್ರದೇಶದ ಬೆಸ್ತರಹಳ್ಳಿಯ ಮೆಕಾನಿಕ್ ಕೆಲಸ ನಿರ್ವಹಿಸುತ್ತಿದ್ದ ಶ್ಯಾನವಾಜ್ (೧೮), ನೀಲಮ್ಮನಹಳ್ಳಿಯ ವಿದ್ಯಾರ್ಥಿ ದಾದವುಲಿ (೧೮) ಮೃತ ದುರ್ದೈವಿಗಳು.
ಸುಮಾರು ೬೦ ಜನರಿಗೆ ಗಾಯಗಳಾಗಿದ್ದು, ಸುಮಾರು ಹದಿನೆಂಟು ಮಂದಿಯ ಸ್ಥಿತಿ ಗಂಭೀರ ಎನ್ನಲಾಗಿದೆ. ಅಪಘಾತವಾಗುತ್ತಿದ್ದಂತೆ ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಪಾವಗಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


ಘಟನೆ ವಿವರ
ಎಸ್ವಿಟಿ ಖಾಸಗಿ ಬಸ್ ಶನಿವಾರ ಬೆಳಗ್ಗೆ ವೈ.ಎನ್.ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದಾಗ ೮.೪೫ ರ ವೇಳೆ ಅಪಘಾತ ವಲಯ ಪಳವಳ್ಳಿ ಕಟ್ಟೆಯ ಬಳಿ ತಿರುವಿನಲ್ಲಿ ಚಾಲನೆ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ, ಬಸ್ ಚಾಲಕ ರಘು, ನಿರ್ವಾಹಕ ಮುರುಳಿ ಸ್ಥಳದಿಂದ ಪರಾರಿಯಾದರು.
ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದರೆ ಹೆಚ್ವಿನ ಚಿಕಿತ್ಸೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಮೂವರು ಸಾವನ್ನಪ್ಪಿದ್ದಾರೆ, ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ ೬೦ ಮಂದಿಯಲ್ಲಿ ಗಂಭೀರತೆಯಿಂದ ಕೂಡಿದ್ದ ೧೮ ಜನರನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ, ಇನ್ನು ಐವರ ಸ್ಥಿತಿ ಗಂಭೀರತೆ ಹಿನ್ನೆಲೆ ಬೆಂಗಳೂರಿಗೆ ಕಳುಹಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾದವರಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಓವರ್ ಲೋಡ್ ಕಾರಣನಾ?
ಈ ರಸ್ತೆಯಲ್ಲಿ ಪ್ರತಿದಿನವೂ ಪ್ರಯಾಣಿಸುವ ಬಸ್ಸುಗಳಲ್ಲಿ ಕಿಕ್ಕಿರಿದು ಪ್ರಯಾಣಿಕರು ಪ್ರಯಾಣಿಸುತ್ತಾರೆ, ಸುರಕ್ಷಿತ ನಿಯಮಗಳನ್ನು ಅನುಸರಿಸದೆ ಕಾನೂನು ಉಲ್ಲಂಘನೆ ಮಾಡುತ್ತ ಖಾಸಗಿ ಬಸ್ನ ಚಾಲಕರು ಅಜಾಗರುಕತೆಯಿಂದ ಚಾಲನೆ ಮಾಡುತ್ತ, ಜನರನ್ನ ಹತ್ತಿಸುವುದನ್ನ ನಿಯಂತ್ರಿಸದೆ ಬಸ್ ತುಂಬ ತುಂಬಿಕೊಂಡು ಬೇಕಾಬಿಟ್ಟಿ ಚಲಾಸುತ್ತಾರೆ, ಇದರಿಂದ ಈ ರೀತಿ ದುರಂತ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸರ್ಕಾರಿ ಬಸ್ ವ್ಯವಸ್ಥೆಯಿಲ್ಲ

ಪಾವಗಡ ದಿಂದ ವೈ.ಎನ್.ಹೊಸಕೋಟೆಗೆ ತಲುಪುವ ಸರ್ಕಾರಿ ಬಸ್ಗಳ ನಿಲುಗಡೆ ಇಲ್ಲ, ಈ ರಸ್ತೆಯಲ್ಲಿ ನೂರಾರು ಗ್ರಾಮೀಣ ವಿದ್ಯಾರ್ಥಿಗಳು, ರೈತರು ಬಂದು ಹೋಗುತ್ತಾರೆ, ಸರ್ಕಾರಿ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಖಾಸಗಿ ಬಸ್ಗಳನ್ನ ಹಳ್ಳಿ ಜನರು ಅವಲಂಬಿಸಿದ್ದಾರೆ. ದಿನ ಬೆಳಗಾದರೆ ಖಾಸಗಿ ಬಸ್ಸುಗಳ ಮೇಲೂ, ಒಳಗೂ ಕಿಕ್ಕಿರಿದು ಪ್ರಯಾಣಿಕರು ತುಂಬುತ್ತಾರೆ, ಇದರಿಂದ ಇಂತಹ ಘಟನೆ ಮರುಕಳಿಸುತ್ತಿವೆ ಎಂದು ಸಾರ್ವಜನಿಕರು ದೂರಿದರು.
ಕೇಂದ್ರ ಸಚಿವ ನಾರಾಯಣಸ್ವಾಮಿ, ಶಾಸಕ ವೆಂಕಟರವಣಪ್ಪ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಎಸಿ ಸೋಮಪ್ಪ ಕಡಕೋಳ ಆಸ್ಪತ್ರೆಗೆ ಭೇಟಿ ನೀಡಿ ನೊಂದ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ನಂತರ ಶಾಸಕ ವೆಂಕಟರವಣಪ್ಪ ಬೆಳಗ್ಗೆಯೇ ಈ ಸುದ್ದಿ ಕೇಳಿ ತುಂಬಾ ನೋವಾಯಿತು, ಈ ಭಾಗದಲ್ಲಿ ಸರ್ಕಾರಿ ಬಸ್ಗಳಿಗೆ ಜನರು ಹತ್ತುವುದಿಲ್ಲ, ಹಾಗಾಗಿ ಖಾಸಗಿ ಬಸ್ಸುಗಳ ಮೊರೆ ಹೋಗುತ್ತಾರೆ, ಈ ಬಸ್ಸಿನ ಹಿಂದೆ ಬರಬೇಕಾಗಿದ್ದ ಎರಡು ಬಸ್ಗಳು ಬಂದಿಲ್ಲವಾದ್ದರಿಂದ ಎಲ್ಲರೂ ಒಂದೇ ಬಸ್ಸಿಗೆ ಹತ್ತಿದರೆ ಆಗ ಈ ಅವಘಡ ಸಂಭವಿಸಿದೆ, ಸಂಬಂಧಿಸಿದ ಅಧಿಕಾರಿ ವರ್ಗದವರೊಂದಿಗೆ ಚರ್ಚಿಸಿ ಪರಿಹಾರ ಕೊಡಿಸುವ ಕಾರ್ಯ ಮಾಡುತ್ತೇನೆ.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ತುರ್ತುಸ್ಥಿತಿಯಲ್ಲಿರುವವರನ್ನು, ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ ನಂತರ ಮಾತನಾಡಿ, ಇಂತಹ ಘಟನೆಗಳಿಗೆ ಚಾಲಕರ ಅಜಾಗರುಕತೆಯೇ ಕಾರಣ ಎಂಬ ಮಾಹಿತಿಯಿದೆ, ಸಂಬಂಧಿಸಿದ ಸಾರಿಗೆ ಇಲಾಖೆಯವರೊಂದಿಗೆ ಚರ್ಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತೇವೆ, ಸಾವಿಗೀಡಾದ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಘಟನಾ ಸುದ್ದಿ ತಿಳಿದ ಕೂಡಲೆ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮುಂದೆ ಜಮಾಯಿಸಿದ್ದರು, ಬಸ್ ನಲ್ಲಿದ್ದ ಕುಟುಂಬಸ್ಥರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಮೃತ ಕುಟುಂಬಕ್ಕೆ ೬ ಲಕ್ಷ ಪರಿಹಾರ
ಸಾರಿಗೆ ಸಚಿವ ಶ್ರೀರಾಮುಲು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರಿ ಆಸ್ಪತ್ರೆಯಲ್ಲಿನ ಗಾಯಾಳುಗಳಿಗೆ ಧೈರ್ಯ ತುಂಬಿದರು. ಅನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ ತುಂಬಾ ನೋವಾಗಿದೆ, ಇಲ್ಲಿಯವರೆಗೂ ಐವರು ಸಾವಿಗೀಡಾಗಿದ್ದು ದುರ್ದೇವದ ಸಂಗತಿ, ಓವರ್ ಲೋಡ್ ನಿಂದ ವೇಗವಾಗಿ ಬಂದ ಹಿನ್ನೆಲೆ ಘಟನೆ ನಡೆದಿದೆ, ತಪ್ಪಿತಸ್ಥರನ್ನು ಶಿಕ್ಷಿಸಬೇಕು, ತುಮಕೂರು ಭಾಗದಲ್ಲಿ ಖಾಸಗಿ ಬಸ್ಸುಗಳ ಪರವಾನಗಿ ರದ್ದುಗೊಳಿಸಿ, ತಾಲ್ಲೂಕಿನ ಪ್ರತಿ ಹಳ್ಳಿಗಳಿಗೂ ಸರ್ಕಾರಿ ಬಸ್ ಗಳನ್ನು ಕಲ್ಪಿಸುತ್ತೇನೆ ಎಂದು ತಿಳಿಸಿದರು.
ಅಪಘಡದಲ್ಲಿ ಮೃತರಿಗೆ ಸರ್ಕಾರದಿಂದ ತಲಾ ೫ ಲಕ್ಷ, ನನ್ನ ವೈಯಕ್ತಿಕವಾಗಿ ೧ ಲಕ್ಷ ಹಾಗೂ ಗಾಯಾಳುಗಳಿಗೆ ೫೦ ಸಾವಿರ ಹಣ ನೀಡುತ್ತೇನೆ ಎಂದರು.
ಈ ಸ್ಥಳವನ್ನು ಬ್ಲಾಕ್ ಸ್ಪಾಟ್ ಎಂದು ನಿರ್ಧಾರಿಸಲಾಗುತ್ತದೆ, ಸಂಬಂಧಿಸಿದ ಇಲಾಖೆಯವರು ಸುರಕ್ಷತೆ ಅನುಸರಿಸದಿದ್ದರೆ ನಮ್ಮ ಸಾರಿಗೆ ಇಲಾಖೆಯ ಅನುದಾನವನ್ನೇ ಬಳಸಿಕೊಂಡು ಸುರಕ್ಷತಾ ನಿಯಮಗಳನ್ನು ಅನುಸರಿಸುವ ಕಾರ್ಯ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Get real time updates directly on you device, subscribe now.

Comments are closed.

error: Content is protected !!