ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಆಕ್ರೋಶ

360

Get real time updates directly on you device, subscribe now.

ಗುಬ್ಬಿ: ಗ್ರಾಮಾಂತರ ಭಾಗದ ಸಮಸ್ಯೆಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟನೆಯ ನಂತರ ಸುಮಾರು ೧ ಗಂಟೆಗಳ ಕಾಲ ಪ್ರತಿಭಟನೆಯ ಬಿಸಿಯನ್ನು ಅಧಿಕಾರಿಗಳು ಎದುರಿಸಬೇಕಾಯಿತು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ನೇರಲೆಕೆರೆ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿಲ್ಲ, ಹಾಗಾಗಿ ಕಾರ್ಯಕ್ರಮ ಮಾಡಲೇ ಕೂಡದು ಎಂದು ಗ್ರಾಮಸ್ಥರು ಪಟ್ಟುಹಿಡಿದು ನಮ್ಮ ಸಮಸ್ಯೆ ಬಗೆಹರಿಸುವವರು ಯಾರು ಎಂದು ಗ್ರೇಡ್ ೨ ತಹಶೀಲ್ದಾರ್ ಶಶಿಕಲಾ ಅವರು ಸೇರಿದಂತೆ ಎಲ್ಲಾ ಅಧಿಕಾರಿಗಳ ವಿರುದ್ಧ ಮುಗಿಬಿದ್ದರು.
ನಂತರ ಪೊಲೀಸ್ ಪ್ರವೇಶದ ನಂತರ ಕಾರ್ಯಕ್ರಮ ಪೊಲೀಸರ ಮಧ್ಯಸ್ಥಿಕೆಯಲ್ಲೇ ಆರಂಭವಾಯಿತು.
ದೊಡ್ಡಗುಣಿ ಗ್ರಾಮದಿಂದ ನೇರಳೆಕೆರೆ ಗ್ರಾಮಕ್ಕೆ ರಸ್ತೆ ಸರಿಯಿಲ್ಲದ ಇರುವುದರಿಂದ ಈ ಭಾಗದ ಜನರು ಓಡಾಡುವುದೇ ದುಸ್ತರವಾಗಿದೆ, ಅದನ್ನು ಮೊದಲು ಮಾಡಿಸಿ ಎಂದು ಬಹುತೇಕ ಗ್ರಾಮಸ್ಥರು ಮನವಿ ಸಲ್ಲಿಸಿದರು, ಮನವಿಗೆ ಸಂಬಂಧಪಟ್ಟ ಪಿಡಬ್ಲ್ಯೂಡಿ ಅಧಿಕಾರಿ ವಿಜಯ್ ಕುಮಾರ್ ಉತ್ತರಿಸಿ ಏಪ್ರಿಲ್ ತಿಂಗಳಿನಲ್ಲಿ ಅನುದಾನ ಒದಗಲಿದ್ದು ಆಗ ಮಾಡಿಸಲಾಗುತ್ತದೆ, ಸದ್ಯಕ್ಕೆ ರಸ್ತೆಯ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಇನ್ನೂ ನೇರಲಕೆರೆ ಪ್ರೌಢಶಾಲೆಗೆ ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಜೂಜು ಅಡ್ಡೆ ಆಗಿದ್ದು, ಅದಕ್ಕೆ ಕೂಡಲೇ ಕಾಂಪೌಂಡ್ ನಿರ್ಮಾಣ ಮಾಡಬೇಕು, ದೊಡ್ಡಗುಣಿಯಿಂದ ತಗ್ಗಿಹಳ್ಳಿ ಗ್ರಾಮಕ್ಕೆ ಬಸ್ನ ವ್ಯವಸ್ಥೆ ಮಾಡಬೇಕು, ರೈತರು ಟಿಸಿ ತೆಗೆದುಕೊಳ್ಳಲು ಹೋದರೆ ಸುಮಾರು ೧.೨೦ ಲಕ್ಷ ಹಣ ನೀಡುವಂತಹ ಪರಿಸ್ಥಿತಿ ರೈತರದ್ದಾಗಿತ್ತು, ಪಕ್ಕದ ಬೇರೆ ತಾಲ್ಲೂಕುಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ ಎಂದು ಬೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಗರಂ ಆದರು.
ಇಡೀ ಗ್ರಾಮದಲ್ಲಿ ಮದ್ಯ ಮಾರಾಟ ಅತ್ಯಧಿಕವಾಗಿ ನಡೆಯುತ್ತಿದ್ದು ಅದನ್ನು ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯಾಧಿಕಾರಿ ಕಚೇರಿ ನೇರಲೆಕೆರೆ ಗ್ರಾಮದಲ್ಲಿ ಇದ್ದರೂ ಇಲ್ಲಿ ಯಾವುದೇ ಆರೋಗ್ಯ ಸಿಬ್ಬಂದಿ ಇಲ್ಲದೇ ಇರುವುದರಿಂದ ಸಾಕಷ್ಟು ಸಮಸ್ಯೆಯಾಗಿದ್ದು ಕೂಡಲೇ ಅಲ್ಲಿಗೆ ಆರೋಗ್ಯ ಸಹಾಯಕಿಯನ್ನು ಕೊಡಬೇಕು ಎಂದು ಮನವಿ ಮಾಡಿದರು.
ಇನ್ನೂ ಈ ಗ್ರಾಮದಲ್ಲಿ ಅತ್ಯಧಿಕವಾದ ನೀರಿನ ಸಮಸ್ಯೆ ಇದ್ದು ಅದನ್ನು ಸರಿಪಡಿಸಬೇಕು, ೧೩೦೦ ಅಡಿ ಕೊಳವೆಬಾವಿ ಕೊರೆಸಿದರೂ ನೀರಿಲ್ಲದೆ ಇರುವುದರಿಂದ ಎತ್ತಿನಹೊಳೆ ಯೋಜನೆ ಮೂಲಕ ಇಲ್ಲಿಗೆ ನೀರು ಹರಿಸಲು ಎಸ್ಕೇಪ್ ಇಡಬೇಕು ಎಂದು ಬಹುತೇಕ ರೈತರ ಮನವಿಯಾಗಿತ್ತು.
ಪೋಡಿ ಮುಕ್ತ ಗ್ರಾಮ ಎಂದು ಹೆಸರಿಗೆ ಮುಗಿಸಿದ್ದಾರೆ, ಆದರೆ ಇದುವರೆಗೂ ಸಂಪೂರ್ಣವಾಗಿ ಪೋಡಿಮುಕ್ತ ಗ್ರಾಮವನ್ನಾಗಿ ಅಧಿಕಾರಿಗಳು ಮಾಡಿಲ್ಲ, ಅದನ್ನು ಸರಿಪಡಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ದಾಖಲೆಗಳು ಇಡುವಂತಹ ಸ್ಟೋರ್ ರೂಂ ಕುರಿ ತುಂಬುವ ದೊಡ್ಡಿಯಾಗಿದ್ದು ಯಾರು ಬೇಕಾದರೂ ಅಲ್ಲಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ, ಅದನ್ನು ತಪ್ಪಿಸಿ ನಮ್ಮ ರೆಕಾರ್ಡ್ಗಳನ್ನು ಉಳಿಸಬೇಕು ಎಂದು ರೈತರು ಮನವಿ ಮಾಡಿದರು.
ಇನ್ನೂ ನೇರಲಕೆರೆ ಗ್ರಾಮದ ಸರ್ವೆ ನಂಬರ್ ೩೧ ರಲ್ಲಿ ೩ ಎಕರೆ ಗೋಮಾಳದ ಜಾಗವನ್ನು ಉಳ್ಳವರು ರಾಜಕೀಯ ಹಿಂಬಾಲಕರು ಕಬಳಿಸಲು ಯತ್ನಿಸುತ್ತಿದ್ದು ಅದನ್ನು ಕೂಡಲೇ ಸರ್ಕಾರ ತನ್ನ ಹತೋಟಿಗೆ ತೆಗೆದುಕೊಳ್ಳಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಒಟ್ಟಾರೆ ಹತ್ತು ಹಲವು ಸಮಸ್ಯೆ ಕೇಳಿಕೊಂಡು ನಂತಹ ಗ್ರಾಮಸ್ಥರಿಗೆ ಸಂಬಂಧ ಪಟ್ಟಂತಹ ಕೆಲವು ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಶಿವಾನಂದ, ಸದಸ್ಯರಾದ ನರಸಿಂಹಮೂರ್ತಿ, ರಾಜಣ್ಣ, ಗ್ರೇಡ್ ೨ ತಹಸೀಲ್ದಾರ್ ಶಶಿಕಲಾ, ಕಾರ್ಯ ನಿರ್ವಾಹಕ ಅಧಿಕಾರಿ ನರಸಿಂಹಯ್ಯ, ಸಿಡಿಪಿಓ ಮಂಜುನಾಥ, ಪಿಡಬ್ಲ್ಯೂಡಿ ಅಧಿಕಾರಿ ವಿಜಯಕುಮಾರ್, ಆರೋಗ್ಯಾಧಿಕಾರಿ ಜಯಣ್ಣ, ಕೃಷಿ ಇಲಾಖೆಯ ಜಗನ್ನಾಥ್, ಬೆಸ್ಕಾಂ ಅಧಿಕಾರಿ ಅನಿಲ್ ಕುಮಾರ್, ಕಂದಾಯ ಇಲಾಖೆ ಅಧಿಕಾರಿ ನಾರಾಯಣ್, ಅಬಕಾರಿ ಇಲಾಖೆ ಅಧಿಕಾರಿ ವನಜಾಕ್ಷಿ, ಸಮಾಜ ಕಲ್ಯಾಣ ಇಲಾಖೆಯ ರಾಮಣ್ಣ, ಪಂಚಾಯತ್ ರಾಜ್ ಇಲಾಖೆಯ ಲಿಂಗರಾಜ ಶೆಟ್ಟಿ, ಸಿಪಿಐ ನದಾಫ್, ಪಿಎಸ್ಐ ನಟರಾಜು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!