ತುಮಕೂರು: ರಾಜ್ಯದಲ್ಲಿ ಎಲ್ಲೆಲ್ಲಿ ಸಾರಿಗೆ ಬಸ್ ಗಳ ಹೆಚ್ಚಿನ ಅಗತ್ಯ ಇದೆಯೋ ಅಂತಹ ಕಡೆಗಳಿಗೆ ಬಸ್ ವ್ಯವಸ್ಥೆ ಮಾಡಲು ಸರ್ಕಾರ ಬದ್ಧವಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ರಾಜ್ಯದಲ್ಲಿ ಮತ್ತೆ ಪಾವಗಡದಂತಹ ಬಸ್ ಅಪಘಾತ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಬಸ್ ಕೊರತೆ ಇರುವ ಸ್ಥಳಗಳನ್ನು ಗುರುತಿಸಿ ಅಗತ್ಯ ಬಸ್ ಸೇವೆ ಒದಗಿಸಲಾಗುವುದು ಎಂದು ಹೇಳಿದರು.
ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪಾವಗಡ ಬಸ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ, ಯೋಗ ಕ್ಷೇಮ ವಿಚಾರಿಸಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು ಅಗತ್ಯ ಬಸ್ ಸೇವೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದರು.
ಅಪಘಾತವಾದ ಬಸ್ ನಲ್ಲಿ ೧೦೦ಕ್ಕೂ ಅಧಿಕ ಪ್ರಯಾಣಿಕರು ಇದ್ದರು ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ, ನಿಖರವಾಗಿ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳ ತನಿಖೆಯಿಂದ ತಿಳಿಯಬೇಕಿದೆ, ಪಾವಗಡ ತಾಲ್ಲೂಕಿನ ಗಡಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳನ್ನು ನಿಯೋಜಿಸಬೇಕಿತ್ತು, ಸಮಯಕ್ಕೆ ಸರಿಯಾಗಿ ಬಸ್ಗಳ ಸಂಚಾರ ಇಲ್ಲದೇ ಇರುವುದು ಸಹ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ, ಈ ಕುರಿತು ಸಾರಿಗೆ ಸಚಿವರು ಕ್ರಮ ವಹಿಸುತ್ತಾರೆ ಎಂದರು.
ಪಾವಗಡ ಭೀಕರ ಬಸ್ ಅಪಘಾತದಲ್ಲಿ ಈಗಾಗಲೇ ೬ ಜನ ಮೃತಪಟ್ಟಿದ್ದಾರೆ, ಗಾಯಗೊಂಡಿರುವವರ ಪೈಕಿ ಮೂವರು ವಿಕ್ಟೋರಿಯಾ ಟ್ರಾಮಾ ಸೆಂಟರ್ ನಲ್ಲಿ ದಾಖಲಾಗಿದ್ದು, ಇವರಲ್ಲಿ ಒಬ್ಬರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಒಟ್ಟು ೬ ಜನ ಗಾಯಾಳು ಚಿಕಿತ್ಸೆಗಾಗಿ ದಾಖಲಾಗದ್ದು, ಒಬ್ಬರು ಬೆನ್ನು ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿರುವುದರಿಂದ ಅವರನ್ನು ವಿಕ್ಟೋರಿಯಾ ಟ್ರಾಮಾ ಸೆಂಟರ್ ನಲ್ಲಿ ದಾಖಲಿಸಿ ವೆಂಟಿಲೇಟರ್ನಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ೧೮ ಮಂದಿ ಗಾಯಾಳುಗಳು ದಾಖಲಾಗಿದ್ದು, ಇವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಉಳಿದ ೧೫ ಜನರಿಗೆ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ, ಈ ಗಾಯಾಳುಗಳಿಗೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶೇ.೯೮ ರಷ್ಟು ವೈದ್ಯರ ನೇಮಕಾತಿ ಆಗಿದೆ, ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ, ತುಮಕೂರು ಜಿಲ್ಲೆಯ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ, ಅಂತಹ ಕಡೆ ನಿಯೋಜಿಸಲು ಡಿಹೆಚ್ಓ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರಕ್ಕೆ ಅಭಿನಂದನೆ
ಉಕ್ರೇನ್ ನಲ್ಲಿ ನಡೆದ ಯುದ್ಧದಲ್ಲಿ ಮೃತಪಟ್ಟಿದ್ದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಪಾರ್ಥೀವ ಶರೀರ ರಾಜ್ಯಕ್ಕೆ ಬಂದಿದೆ. ಇದು ಪೋಷಕರು ಮತ್ತು ರಾಜ್ಯ ಸರ್ಕಾರಕ್ಕೆ ಒಂದು ರೀತಿಯ ಸಮಾಧಾನ ತಂದಿದೆ, ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನವೀನ್ ಪಾರ್ಥೀವ ಶರೀರ ತಂದು ಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಹೇಗಾದರೂ ಮಾಡಿ ವಿದ್ಯಾರ್ಥಿ ನವೀನ್ ಪಾರ್ಥೀವ ಶರೀರ ತಂದುಕೊಡುವAತೆ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿಗಳಿಗೆ ಮನವಿ ಮಾಡಿದ್ದರು, ಅದೇ ರೀತಿ ಪ್ರಧಾನ ಮಂತ್ರಿಗಳು ಮುತುವರ್ಜಿ ವಹಿಸ ನವೀನ್ ಪಾರ್ಥೀವ ಶರೀರ ತಂದುಕೊಟ್ಟಿದ್ದಾರೆ ಎಂದರು.
ಉಕ್ರೇನ್ ನಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದ ರಾಜ್ಯದ ೫೭೨ ಮಕ್ಕಳು ಕ್ಷೇಮವಾಗಿ ಹಿಂತಿರುಗಿದ್ದಾರೆ, ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯವಾಗಿದೆ, ನಮ್ಮ ದೇಶದ ಒಟ್ಟು ೧೯ ಸಾವಿರ ಮಕ್ಕಳು ಕ್ಷೇಮವಾಗಿ ಮನೆಗಳಿಗೆ ತೆರಳಿದ್ದಾರೆ, ಆದರೆ ಬೇರೆ ದೇಶಗಳು ನಮ್ಮ ಕೇಂದ್ರ ಸರ್ಕಾರದಂತೆ ಜವಾಬ್ದಾರಿ ತೆಗೆದುಕೊಂಡು ಅವರ ಜನರನ್ನು ತಾಯ್ನಾಡಿಗೆ ಕರೆದೊಯ್ಯುವ ಕೆಲಸ ಮಾಡಿಲ್ಲ, ನಮ್ಮ ಕೇಂದ್ರ ಸರ್ಕಾರ ಈ ಕಾರ್ಯ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ, ಆರ್ಎಂಓ ಡಾ.ವೀಣಾ ಮತ್ತಿತರರು ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.