ನಮ್ಮ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಿ

ಉಕ್ರೇನ್ ನಿಂದ ವಾಪಸಾದ ವಿದ್ಯಾರ್ಥಿಗಳಿಂದ ಸರ್ಕಾರಕ್ಕೆ ಮನವಿ

1,112

Get real time updates directly on you device, subscribe now.

ತುಮಕೂರು: ಯುದ್ಧ ಪೀಡಿತ ಉಕ್ರೇನ್ ದೇಶದಿಂದ ರಾಜ್ಯಕ್ಕೆ ಮರಳಿ ಬಂದಿರುವ ವಿದ್ಯಾರ್ಥಿಗಳಿಗೆ ದೇಶ ಮತ್ತು ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಸೆಮಿಸ್ಟರ್ಗೆ ಅನುಗುಣವಾಗಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಉಕ್ರೇನ್ ನಿಂದ ವಾಪಸ್ಸಾಗಿರುವ ಜಿಲ್ಲೆಯ ೨೬ ವಿದ್ಯಾರ್ಥಿಗಳು ಹಾಗೂ ಪಾಲಕರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರ ಮುಖೇನ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಉಕ್ರೇನ್ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದು, ಸದ್ಯ ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಈ ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಮಾನವೀಯ ಆಧಾರದ ಮೇಲೆ ರಾಜ್ಯ ಮತ್ತು ದೇಶದ ಯಾವುದಾದರೂ ವೈದ್ಯಕೀಯ ಕಾಲೇಜಿನಲ್ಲಿ ಸೆಮಿಸ್ಟರ್ ಗೆ ಅನುಗುಣವಾಗಿ ದಾಖಲಾತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಭವಿಷ್ಯದ ಹಿತದೃಷ್ಟಿಯಿಂದ ಮಾನವೀಯ ಹಿನ್ನೆಲೆಯಲ್ಲಿ ಉಕ್ರೇನ್ ದೇಶದಿಂದ ಮರಳಿ ಬಂದಿರುವ ನಮಗೆಲ್ಲ ಮುಂದಿನ ವಿದ್ಯಾಭ್ಯಾಸವನ್ನು ರಾಜ್ಯದಲ್ಲಿ ಮುಂದುವರೆಸಲು ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಅತಂತ್ರ ಸ್ಥಿತಿಯಯಲ್ಲಿರುವ ನಾವುಗಳು ಮೊದಲನೇ ವರ್ಷದಿಂದ ಆರನೇ ವರ್ಷದವರೆಗೂ ವ್ಯಾಸಂಗ ಮಾಡುತ್ತಿರುವುದರಿಂದ ನಮಗೆ ಆಯಾ ವರ್ಷಕ್ಕೆ ಅನುಗುಣವಾಗಿ ವಿದ್ಯಾಭ್ಯಾಸಕ್ಕೆ ಅನುಮತಿ ಮಾಡಿಕೊಡಬೇಕು. ನಮಗೆ ಪ್ರಮಾಣ ಪತ್ರ ಒದಗಿಸಿ ವಿಶೇಷ ಸೌಲಭ್ಯದ ಅಡಿಯಲ್ಲಿ ಪ್ರವೇಶಾತಿಗೆ ಅವಕಾಶ ಮಾಡಿಕೊಡಬೇಕು ಎಂದು ಉಕ್ರೇನ್ ದೇಶದಿಂದ ಮರಳಿ ಬಂದಿರುವ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ಕೋರಿದರು.
ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಜಿಲ್ಲೆಯ ೨೬ ವಿದ್ಯಾರ್ಥಿಗಳು ಉಕ್ರೇನ್ ನಿಂದ ವಾಪಸ್ ಬಂದಿದ್ದು, ಈ ವಿದ್ಯಾರ್ಥಿಗಳು ಮತ್ತು ಪೋಷಕರು ಸೆಮಿಸ್ಟರ್ ಗೆ ತಕ್ಕಂತೆ ಕರ್ನಾಟಕದ ಯಾವುದಾದರೂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇವರ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ, ಸರ್ಕಾರದ ಬರುವ ಮಾಹಿತಿಯನ್ನು ವಿದ್ಯಾರ್ಥಿಗಳು ಪೋಷಕರಿಗೆ ರವಾನಿಸುವುದಾಗಿ ಹೇಳಿದರು.
ಜಿಲ್ಲೆಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಪಾಲಕರು ಸಂಯಮದಿಂದ ವರ್ತಿಸುತ್ತಾ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದಾರೆ. ಇವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ರಾಜ್ಯದ ಯಾವುದಾದರೂ ಮೆಡಿಕಲ್ ಕಾಲೇಜಿನಲ್ಲಿ ಸೆಮಿಸ್ಟರ್ ಗೆ ತಕ್ಕಂತೆ ದಾಖಲಾತಿ ನೀಡಬೇಕು ಎಂಬುದು ಈ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದೆ. ಇವರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಕಷ್ಟದಲ್ಲಿದ್ದಾಗ ಜಿಲ್ಲಾಡಳಿತ ಸದಾ ಅವರ ಪರವಾಗಿ ಇರಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅಮೃತ, ಅಜಯಕುಮಾರ್, ದಾಸ್ ನಚಿಕೇತ್, ಗಣೇಶ್, ಗೋಕುಲ್, ಹಾಲ್ ಕುರ್, ಮೇಘ, ನಿಹಾರಿಕ, ಪ್ರಜ್ವಲ್, ಪವಿತ್ರ ಸೇರಿದಂತೆ ೨೬ ಮಂದಿ ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!