ಸೇವೆ ಮುಂದುವರಿಕೆಗೆ ಅರೆ ವೈದ್ಯಕೀಯ ಸಿಬ್ಬಂದಿ ಒತ್ತಾಯ

500

Get real time updates directly on you device, subscribe now.

ತುಮಕೂರು: ಕೋವಿಡ್ -೧೯ ರ ತುರ್ತು ಪರಿಸ್ಥಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಮಾರ್ಚ್ ೩೧ ರ ನಂತರವೂ ಸೇವೆಯಲ್ಲೆ ಮುಂದುವರೆಸುವಂತೆ ಎಲ್ಲಾ ಕೋವಿಡ್-೧೯ ಗುತ್ತಿಗೆ ಅರೆ ವೈದ್ಯಕೀಯ ಸಿಬ್ಬಂದಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕೋವಿಡ್ -೧೯ರ ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು (ಫಾರ್ಮಸಿ ಅಧಿಕಾರಿಗಳು, ಲ್ಯಾಬ್ ಟೆಕ್ನಿಶಿಯನ್, ಪಿಎಚ್ಸಿಓ, ಗ್ರೂಪ್ – ಡಿ, ಸ್ವಾಬ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರ ಸಿಬ್ಬಂದಿ) ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ನಮ್ಮ ಕುಟುಂಬ, ಮನೆ ಮಠ ಬಿಟ್ಟು, ನಮ್ಮ ಪ್ರಾಣದ ಹಂಗನ್ನು ತೊರೆದು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದೇವೆ, ನಮ್ಮ ಜತೆಯಲ್ಲಿಯೇ ಸೇರಿದ ಕೆಲವು ಆರೋಗ್ಯ ಸಿಬ್ಬಂದಿ ಪ್ರಾಣ ಭಯದಿಂದ ಹಾಗೂ ಕೊರೊನಾ ಮಹಾಮಾರಿಗೆ ಹೆದರಿ ಅರ್ಧಕ್ಕೆ ಕೆಲಸ ಬಿಟ್ಟು ಹೋದರು, ಆದರೆ ನಮ್ಮಲ್ಲಿ ಹಲವರಿಗೆ ಹಲವು ಬಾರಿ ಕೊರೊನಾ ಸೋಂಕು ತಗುಲಿ ಸಾವಿನ ಕದ ತಟ್ಟಿ ಸಾವಿನ ಸೋಲನ್ನು ಒಪ್ಪದೆ ಪುನಃ ಕರ್ತವ್ಯಕ್ಕೆ ಮರಳಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಅರೆಕಾಲಿಕ ಸಿಬ್ಬಂದಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಕೋರಿದ್ದಾರೆ.
ಕೊರೊನಾ ಲಸಿಕಾ ಅಭಿಯಾನದಲ್ಲಿ ಭಾರತದ ಐತಿಹಾಸಿಕ ಮೈಲುಗಲ್ಲಿನ ಸಾಧನೆಯಲ್ಲಿ ನಾವು ಸಹಭಾಗಿಯಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ಕಷ್ಟ ಕಾಲದಲ್ಲಿ ನಾವು ಸರ್ಕಾರದ ಜತೆಯಾಗಿ ನಿಂತು ದುಡಿಯುತ್ತಿದ್ದೇವೆ. ಮುಂದೆಯೂ ಸಹ ದುಡಿಯಲು ಸಿದ್ದರಿದ್ದೇವೆ. ಆದರೆ ಈ ಹಂತದಲ್ಲಿ ಕೊರೊನಾ ಹೆಚ್ಚಾಗುವುದರಿಂದಲೇ ಕೊರೊನಾ ವಾರಿಯರ್ಸ್ಗಳ ಕೆಲಸ ಉಳಿಯುತ್ತಿದೆ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ, ಕೊರೊನಾ ಕಡಿಮೆಯಾದ ಮೇಲೆ ನಮ್ಮನ್ನು ಕೆಲಸದಿಂದ ತೆಗೆದರೆ ಕೊರೊನಾ ವಾರಿಯರ್ಸ್ಗಳಾದ ಫಾರ್ಮಸಿ ಅಧಿಕಾರಿಗಳು, ಲ್ಯಾಬ್ಟೆಕ್ನಿಶಿಯನ್, ಪಿಎಚ್ಸಿಓ, ಗ್ರೂಪ್-ಡಿ, ಸ್ವಾಬ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಮತ್ತಿತರ ಕೊರೊನಾ ವಾರಿಯರ್ಸ್ಗಳು ನಿರ್ಗತಿಕರಾಗಿ, ನಿರುದ್ಯೋಗಿಗಳಾಗಿ ಬೀದಿಗೆ ಬಂದು ಕೆಲಸಕ್ಕಾಗಿ ಅಲೆಯಬೇಕಾಗುತ್ತದೆ ಮತ್ತು ನಮ್ಮ ಜೀವನ ಅಸ್ತವ್ಯಸ್ಥವಾಗುತ್ತದೆ. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವಾರಿಯರ್ಸ್ ಆಗಿ ೧೦೦ ದಿನಗಳ ಕಾಲ ಸೇವೆ ಸಲ್ಲಿಸಿದವರಿಗೆ ಸೇವಾ ಭದ್ರತೆಯನ್ನು ಒದಗಿಸಿ ಮುಂಬರುವ ಸರ್ಕಾರಿ ಕೆಲಸಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದರೆ ಸುಮಾರು ೪೦೦೦ ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ಗಳಿಗೆ ಮತ್ತು ಅವರ ಕುಟುಂಬದವರಿಗೆ ಆಧಾರವಾಗುತ್ತದೆ. ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿದ್ದು, ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಅಂಕಿ ಸಂಖ್ಯೆ ಸಮೇತ ಪತ್ರಿಕೆ, ಅಂತರ್ಜಾಲ ಹಾಗೂ ಮಾಧ್ಯಮದಲ್ಲಿ ವರದಿಯಾಗಿರುವುದರಿಂದ ತಾವು ಇದನ್ನು ಪರಿಶೀಲಿಸಿ ಖಾಲಿ ಇರುವ ಸ್ಥಳಗಳಿಗೆ, ಅಸ್ಪತ್ರೆಗಳಿಗೆ ನಮ್ಮ ಸೇವಾ ಕಾರ್ಯ ಹಾಗೂ ಅನುಭವ ಪರಿಗಣಿಸಿ ಮಾನವೀಯತೆ ದೃಷ್ಟಿಯಿಂದ ನಮ್ಮನ್ನು ಖಾಲಿ ಇರುವ ಸ್ಥಳಗಳಿಗೆ ನೇಮಿಸಿದರೆ ನಮಗೂ ಉದ್ಯೋಗ ದೊರಕಿಸಿದರೆ ನಮ್ಮೆಲ್ಲರ ಕುಟುಂಬಗಳಿಗೆ ಭದ್ರತೆ ದೊರಕಿದಂತಾಗುತ್ತದೆ. ಈಗಾಗಲೇ ಹಲವಾರು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ತರಬೇತಿ ಮತ್ತು ಯೋಜನೆಗಳ ಬಗ್ಗೆ ಅರಿವು ಇರುವುದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ನಮ್ಮ ಜೀವನಕ್ಕೆ ಭದ್ರತೆ ಒದಗಿಸಬೇಕು ಎಂದು ಅರೆಕಾಲಿಕ ಆರೋಗ್ಯ ಸಿಬ್ಬಂದಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅರೆಕಾಲಿಕ ಸಿಬ್ಬಂದಿ ಪ್ರಸನ್ನ, ಮಂಜುನಾಥ್, ಶಿಲ್ಪ ಹೆಚ್, ಶೈಲಮೇರಿ, ಲಕ್ಷ್ಮಿ, ಸುಮ, ವೀರನಾಗಪ್ಪ, ಬಾಲರಾಜು, ರವಿ, ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!