ತುಮಕೂರು: ೨೦೨೨- ೨೩ ನೇ ಸಾಲಿನ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆದಿದೆ, ತುಮಕೂರು ಶೈಕ್ಷಣಿಕ ಜಿಲ್ಲೆಗಳಲ್ಲಿ ೪ ಖಾಸಗಿ ಕೇಂದ್ರಗಳನ್ನೊಳಗೊಂಡಂತೆ ಒಟ್ಟು ೯೧ ಪರೀಕ್ಷಾ ಕೇಂದ್ರಗಳಿದ್ದು, ೨೨,೮೫೮ ವಿದ್ಯಾರ್ಥಿಗಳ ಪೈಕಿ ೧೨೩೬೬ ವಿದ್ಯಾರ್ಥಿಗಳು, ೧೦೪೯೨ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುತ್ತಿದ್ದಾರೆ.
ಇನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು- ೬೨೮೦, ವಿದ್ಯಾರ್ಥಿನಿಯರು- ೬೭೮೭ ಸೇರಿ ಒಟ್ಟು ೧೩೦೬೭ ವಿದ್ಯಾರ್ಥಿಗಳು ೬೫ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಗಳ ಅವಧಿ ಸಮೀಪಿಸುತ್ತಿದ್ದಂತೆ ಮಕ್ಕಳಲ್ಲಿ ಎಲ್ಲಿಲ್ಲದ ಭಯ, ಆತಂಕ, ಗೊಂದಲ ಕೂಡ ಮೂಡಿದ್ದು, ಕಳೆದ ಮೂರು ವರ್ಷಗಳಿಂದ ಕೊರೊನಾ ಭೀತಿಯ ಕರಿಛಾಯೆ ಮಧ್ಯೆ ಇದೀಗ ಕರುನಾಡಿಗೆ ತುಸು ರಿಲೀಫ್ ಸಿಕ್ಕಂತಾಗಿದೆ. ಆದರೂ ಮಕ್ಕಳಲ್ಲಿ ಆತಂಕ ಕಾಡುವುದರ ನಡುವೆ ಪರೀಕ್ಷೆ ಎದುರಿಸುವ ಭಯವಂತೂ ಇದ್ದೇ ಇದೆ.
ಮೂಲಭೂತ ವ್ಯವಸ್ಥೆಯ ಸಿದ್ಧತೆ
ಪರೀಕ್ಷೆ ಬರೆಯಲು ಉತ್ತಮ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದೆ, ಮಕ್ಕಳಿಗೆ ಪರೀಕ್ಷೆ ವೇಳೆ ಯಾವುದೇ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ, ಸಿಸಿ ಕ್ಯಾಮೆರಾ ಹಾಗೂ ಸ್ಯಾನಿಟೇಷನ್ ಮಾಡುವ ಮೂಲಕ ಕೊಠಡಿಗಳನ್ನ ಸ್ವಚ್ಛಗೊಳಿಸಲಾಗಿದೆ.
ಗುಣಮಟ್ಟದ ಫಲಿತಾಂಶಕ್ಕೆ ಒತ್ತು
ಮಕ್ಕಳಿಗೆ ಮುಂದಿನ ಭವಿಷತ್ತಿಗೆ ಯಾವ ಭಕ್ಕೆಯಾಗದಂತೆ ಶಿಕ್ಷಕರು ನಿಗಾ ವಹಿಸಿ ಅಧ್ಯಯನದ ತಯಾರಿಯ ಪಟ್ಟುಗಳನ್ನು ಮಕ್ಕಳಿಗೆ ತಿಳಿಸಿದ್ದಾರೆ, ವಿಶೇಷ ತರಗತಿ ಆಯೋಜಿಸುವ ಮೂಲಕ ಗೊಂದಲಮಯ ವಿಷಯಗಳಿಗೆ ವಿಷಯವಾರು ಅಧ್ಯಾಪಕ ವೃಂದ ಗೊಂದಲ ದೂರ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ, ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ವಿದ್ಯಾ ತಂಡದ ಮೂಲಕ ಶಿಕ್ಷಕರಿಗೆ ತರಬೇತಿ ನೀಡಿ ಫಲಿತಾಂಶ ಕುಂಠಿತ ಮಕ್ಕಳಿಗೆ ಮಾರ್ಗಸೂಚಿ ಕೊಡಿಸಲಾಗಿದೆ. ವಿಷಯಾನುಸಾರ ರಸ ಪ್ರಶ್ನೆ ಕಾರ್ಯಕ್ರಮ, ಪೋನ್ ಇನ್ ಕಾರ್ಯಕ್ರಮ, ಆನ್ ಲೈನ್ ಕ್ಲಾಸ್ಗಳ ಮೂಲಕ ಮಕ್ಕಳಿಗೆ ಪಾಠ ಮಾಡಿ ಉತ್ತಮ ಫಲಿತಾಂಶಕ್ಕೆ ಒತ್ತು ನೀಡಿದ್ದಾರೆ.
ಸಿಬ್ಬಂದಿ ನೇಮಕದ ಸಿದ್ಧತೆ
ಪರೀಕ್ಷೆ ಸುಸೂತ್ರವಾಗಿ ನಡೆಯಬೇಕಾದರೆ ಸಿಬ್ಬಂದಿ ಪಾರದರ್ಶಕ ವೃತ್ತಿಪರತೆ ಬಹುಮುಖ್ಯ ಪಾತ್ರವಹಿಸುತ್ತದೆ, ಅದರಲ್ಲಿ ಸುಮಾರು ಇನ್ನೂರು ತೊಂಭತ್ತಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಇನ್ನೂರು ತೊಂಭತ್ತು ಆರೋಗ್ಯ ಇಲಾಖಾ ಸಿಬ್ಬಂದಿ, ಸುಮಾರು ಮುನ್ನೂರ ಎಂಭತ್ತಕ್ಕೂ ಅಧಿಕ ಸ್ವಯಂ ಸೇವಕರು ನಿಯೋಜನೆಗೊಂಡಿದ್ದಾರೆ, ಇನ್ನು ಕೊಠಡಿ ಮೇಲ್ವಿಚಾರಕರು, ಮುಖ್ಯ ಅಧೀಕ್ಷಕರು ಹಾಜರಾಗಲಿದ್ದು, ಪರೀಕ್ಷೆ ಸುಗಮವಾಗಿ ನಡೆಯಲೆಂದು ಸುರಕ್ಷತಾ ಕ್ರಮ ಅನುಸರಿಸಲಾಗಿದೆ.
ಪರೀಕ್ಷೆ ಎದುರಿಸುವುದು ಹೇಗೆ?
ಪರೀಕ್ಷೆಯೆಂದರೆ ಮಕ್ಕಳಿಗೆ ಯುದ್ಧವೆ ಸರಿ, ಇಲ್ಲಿ ಸೋಲುವವರ ಸಂಖ್ಯೆಯೂ ಹೆಚ್ಚು, ಕಾರಣ ಅವರು ಸಮರ್ಪಕ ಪೂರ್ವ ತಯಾರಿ ನಡೆಸದೆ ಇರುವುದು, ಹಾಗಾಗಿ ಏಕಾಗ್ರ ಚಿತ್ತದಿಂದ ಅಧ್ಯಯನ ನಡೆಸಬೇಕು, ಏಕಕಾಲಕ್ಕೆ ಎಲ್ಲಾ ವಿಷಯಗಳನ್ನು ಓದುವ ದುಸ್ಸಾಹಸಕ್ಕೆ ಕೈ ಹಾಕಬಾರದು, ಬೆಳಗ್ಗೆ ಎದ್ದ ಕೂಡಲೇ ನಿತ್ಯ ಕರ್ಮ ಮುಗಿಸಿ ಓದಲು ಕೂರಬೇಕು, ಒಂದು ಗಂಟೆವರೆಗೂ ಒಂದೇ ವಿಷಯದ ಅಧ್ಯಯನದಲ್ಲಿ ಮಗ್ನರಾಗಬೇಕು, ವೇಳಾಪಟ್ಟಿಯಂತೆ ಶಾಲೆಗಳಲ್ಲಿ ಮಾಡಿದ ಪಾಠಗಳನ್ನ ಮನನ ಮಾಡಬೇಕು, ನಾಳೆ ಓದಿದರಾಯಿತೇಳು ಎನ್ನುವ ಅಸಡ್ಡೆ ಭಾವನೆಯಿಂದ ಹೊರಬರಬೇಕು, ಹಿತಮಿತ ಆಹಾರ ಸೇವಿಸಬೇಕು, ಎಲ್ಲಾ ವಿಷಯವನ್ನ ಬಯ್ಪಾಟ ಮಾಡದೆ ಹಂತ ಹಂತವಾಗಿ ವಿಚಾರ ಅರಿತು, ನಕಾರಾತ್ಮಕ ಆಲೋಚನೆ ವರ್ಜಿಸಿ ಪರೀಕ್ಷೆಗೆ ಕೂರಬೇಕು ಎಂಬುದು ತಜ್ಞರ ಸಲಹೆಯಾಗಿದೆ.
ಯಾವ ಅಭ್ಯಾಸಗಳಿಂದ ದೂರವಿರಬೇಕು
ಟಿವಿ, ಮೊಬೈಲ್, ತಿರುಗಾಟ, ದುಶ್ಚಟ, ಹರಟೆ ಹೊಡೆಯುವುದು, ಕರಿದ ಖಾದ್ಯಗಳ ಚಟ, ಪ್ರೇಮ ವಿಚಾರಗಳಿಂದ ದೂರ ಉಳಿದು ಪೋಷಕರ ಕಷ್ಟ ಕಾರ್ಪಣ್ಯ ಅರಿತು ಓದಬೇಕು ಎಂಬುದು ಕೂಡ ತಜ್ಞರ ಅಭಿಪ್ರಾಯ.
ಒಟ್ಟಾರೆ ಎಸ್ಎಸ್ಎಲ್ಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ, ಮಾರ್ಚ್ ೨೮ ರಂದು ಪರೀಕ್ಷೆ ಆರಂಭವಾಗಿದೆ, ವಿದ್ಯಾರ್ಥಿಗಳು ಇರುವ ಅಲ್ಪ ಅಮೂಲ್ಯ ಸಮಯ ಬಳಸಿಕೊಂಡು ಹೆಚ್ಚು ಓದುವ ಮೂಲಕ ಪರೀಕ್ಷೆ ಎದುರಿಸಲಿ, ಮುಖ್ಯವಾಗಿ ಭಯ, ಆತಂಕ ದೂರ ಮಾಡಿ ಧೈರ್ಯವಾಗಿ ಪರೀಕ್ಷೆ ಬರೆಯಬೇಕಿದೆ, ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್…
ಪರೀಕ್ಷೆ ಸಿದ್ಧತೆಗೆ ಸಂಬಂಧಿಸಿದಂತೆ ತುಂಬಾ ಎಚ್ಚರವಾಗಿ ಮಕ್ಕಳಿಗೆ ಹಾಗೂ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಎಸಿ ಮತ್ತು ಅಧಿಕಾರಿಗಳೊಳಗೊಂಡ ಸಭೆ ನಡೆಸಿ ಸೂಚಿಸಲಾಗಿದೆ, ಮಕ್ಕಳು ಆತಂಕ ಪಡದೆ ಪರೀಕ್ಷೆಯಲ್ಲಿ ಭಾಗವಹಿಸಿ, ಕೋವಿಡ್ ನಿಯಮ ಪಾಲಿಸಿ ಸುರಕ್ಷತೆ ಕ್ರಮ ಅನುಸರಿಸಿ ಧೈರ್ಯವಾಗಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯಲಿ.
-ವೈ.ಎಸ್.ಪಾಟೀಲ್, ಜಿಲ್ಲಾಧಿಕಾರಿ.
ಕಳೆದ ಎರಡು ವರ್ಷಗಳ ಕಾಲ ಕೋವಿಡ್ನಿಂದ ವಿದ್ಯಾರ್ಥಿಗಳಲ್ಲಿ ಆಂತಕವಿತ್ತು, ಈಗ ಆತಂಕ ದೂರವಾಘಗಿದೆ, ನಿರ್ಭೀತಿಯಿಂದ ಶಾಂತಚಿತ್ತದಿಂದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬಹುದು, ಅದಕ್ಕೆ ಎಲ್ಲಾ ಸಿದ್ಧತೆ ನಡೆದಿದೆ.
-ರೇವಣ್ಣ ಸಿದ್ದಪ್ಪ, ಡಿಡಿಪಿಐ, ಮಧುಗಿರಿ ಶೈಕ್ಷಣಿಕ ಜಿಲ್ಲೆ .
ಮಕ್ಕಳು ಸತತ ಅಭ್ಯಾಸದಿಂದ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದರೆ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಲು ಸಾಧ್ಯವಿದೆ, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಲಿ, ಹೆದರದೆ ಪರೀಕ್ಷೆ ಎದುರಿಸಲಿ.
-ಸಿ.ನಂಜಯ್ಯ, ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ
೧೪೪ ಸೆಕ್ಷನ್ ಜಾರಿಯಿದೆ, ಆ ಹಿನ್ನೆಲೆ ಪರೀಕ್ಷಾ ಕೇಂದ್ರದಿಂದ ೨೦೦ ಮೀಟರ್ ಪ್ರತಿಯೊಬ್ಬರೂ ಅಂತರ ಕಾಯಬೇಕಿದೆ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪರೀಕ್ಷೆಗೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿ ಜೊತೆ ಸಭೆ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಾಲ್ಲೂಕು ತಹಶೀಲ್ದಾರ್ಗೆ ಎಚ್ಚರಿಕೆ ಕ್ರಮ ಅನುಸರಿಸುವಂತೆ ಸೂಚಿಸಲಾಗಿದೆ.
-ಸೋಮಪ್ಪ ಕಡಕೋಳ, ಎಸಿ, ಮಧುಗಿರಿ.
Comments are closed.