ಕ್ಷಯರೋಗ ನಿರ್ಮೂಲನೆ ಜಿಲ್ಲೆಗೆ ಬಹುಮಾನ: ಸಿಇಓ

204

Get real time updates directly on you device, subscribe now.

ತುಮಕೂರು: ರಾಷ್ಟ್ರ ಮಟ್ಟದ ಕ್ಷಯ ಸೋಲಿಸಿ ದೇಶ ಗೆಲ್ಲಿಸಿ ಅಭಿಯಾನದಡಿ ಜಿಲ್ಲೆಯು ಕಂಚಿನ ಪದಕ ಪಡೆದು ದೇಶದಲ್ಲಿಯೇ ೩ನೇ ಸ್ಥಾನ ಗಳಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ನಗರದ ಟೌನ್ ಹಾಲ್ ವೃತ್ತದಲ್ಲಿ ವಿಶ್ವ ಕ್ಷಯ ರೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿ, ಕ್ಷಯ ಕೊನೆಗೊಳಿಸಲು ಹೂಡಿಕೆ ಮಾಡಿ, ಜೀವಗಳನ್ನು ಉಳಿಸಿ ಎಂಬುದು ೨೦೨೨ರ ಘೋಷವಾಕ್ಯವಾಗಿದ್ದು, ಕ್ಷಯ ನಿರ್ಮೂಲನೆಗಾಗಿ ಶ್ರಮ ಹೂಡಿಕೆ ಮಾಡುವ ಅಗತ್ಯವಿದೆ, ಪ್ರತಿಯೊಬ್ಬ ನಾಗರಿಕನು ರೋಗ ನಿರ್ಮೂಲನೆಗಾಗಿ ಜವಾಬ್ದಾರಿ ಹೊಂದಿರಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ ಮಾತನಾಡಿ ೨೦೨೧ರಲ್ಲಿ ೨೭೦೩ ಕ್ಷಯ ರೋಗಿಗಳನ್ನು ಪತ್ತೆಹಚ್ಚಿ ಡಾಟ್ಸ್ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದ ಅವರು ಜಿಲ್ಲೆಯಲ್ಲಿ ಟಿಬಿ, ಎಚ್ಐವಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಕ್ಷಯ ರೋಗಿಗಳನ್ನು ಎಚ್ಐವಿ ಪರೀಕ್ಷೆಗೊಳಪಡಿಸಿದಾಗ ೨೪೭ ಮಂದಿ ಎರಡೂ ರೋಗಗಳಿಂದಲೂ ಬಳಲುತ್ತಿರುವುದು ಖಚಿತವಾಗಿದೆ ಎಂದು ತಿಳಿಸಿದರು.
ಗುಣಮಟ್ಟದ ಪೌಷ್ಠಿಕಾಹಾರ ಸೇವಿಸುವ ಸಲುವಾಗಿ ಕ್ಷಯ ರೋಗಿಗಳಿಗೆ ಪ್ರತಿ ಮಾಹೆ ೫೦೦ ರೂ. ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ, ಕ್ಷಯ ರೋಗ ಲಕ್ಷಣಗಳಾದ ೩ ವಾರಕ್ಕಿಂತಲೂ ಅಧಿಕ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಬೇಕು ಎಂದರಲ್ಲದೆ ೨೦೨೫ರ ವೇಳೆಗೆ ಕ್ಷಯ ರೋಗ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ನಗರದ ಟೌನ್ಹಾಲ್ ವೃತ್ತದಿಂದ ಆರಂಭವಾದ ಜಾಥಾ ಕಾರ್ಯಕ್ರಮ ಅಶೋಕ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ತಲುಪಿತು, ನಗರದ ಕೆಎಸ್ಆರ್ಟಿಸಿ ಖಾಸಗಿ ಬಸ್ ನಿಲ್ದಾಣ, ವಿಶ್ವವಿದ್ಯಾನಿಲಯ, ಅಂತರಸನಹಳ್ಳಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಮಳಿಗೆಗಳನ್ನು ತೆರೆದು ಕ್ಷಯರೋಗದ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಯರ್ ಬಿ.ಜಿ ಕೃಷ್ಣಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಆರ್ಸಿಎಚ್ ಅಧಿಕಾರಿ ಡಾ.ಕೇಶವ್ ರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್, ಸಹಾಯಕ ಡ್ರಗ್ ಕಂಟ್ರೋಲರ್ ಮಮತಾ, ಡೆಪ್ಯುಟಿ ಡ್ರಗ್ ಕಂಟ್ರೋಲರ್ ಬಸವರಾಜು ಆಸಂಗಿ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!