ತುಮಕೂರು: ಗಣರಾಜೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ ನ್ಯಾ.ಮಲ್ಲಿಕಾರ್ಜುನ ಗೌಡ ಪಾಟೀಲ್ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಮೂಲ ನಿವಾಸಿಗಳ ಮಹಾ ಒಕ್ಕೂಟ ಮತ್ತು ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಟೌನ್ಹಾಲ್ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹತ್ತಾರು ಮೂಲನಿವಾಸಿಗಳ ಮಹಾ ಒಕ್ಕೂಟದ ಸದಸ್ಯರು, ಪ್ರಜಾವಿಮೋಚನ ಚಳವಳಿ ಸ್ವಾಭಿಮಾನಿಯ ಹಾಗೂ ದಲಿತ ಸಾಮ್ರಾಜ್ಯ ಸ್ಥಾಪನೆ ಸಂಘಟನೆಗಳ ಮುಖಂಡರು, ಅಂಬೇಡ್ಕರ್ಗೆ ಅಪಮಾನ ಮಾಡುವ ಮೂಲಕ ಇಡೀ ದೇಶದ ಜನರಿಗೆ ಅಪಮಾನ ಮಾಡಿದ ನ್ಯಾ.ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ಅಮಾನತುಗೊಳಿಸದ ಸರಕಾರ ಕ್ರಮದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿ ಮೂಲ ನಿವಾಸಿಗಳ ಮಹಾಒಕ್ಕೂಟದ ಜಿಗಣಿ ಶಂಕರ್, ಮೊದಲಿಗೆ Éಬ್ರವರಿ ೦೪ ರಂದು ಹೋರಾಟ ನಡಸಲಾಗಿತ್ತು, ಆ ವೇಳೆ ಹಲವಾರು ಜನರನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಕೆಲಸವನ್ನು ಸರಕಾರ ಮಾಡಿತ್ತು, ಜಗ್ಗದೆ ೧೮-೦೨-೨೦೨೨ ರಂದು ಬೃಹತ್ ಹೋರಾಟ ರೂಪಿಸಿದ ಪರಿಣಾಮ ಸರಕಾರ ಸಂವಿಧಾನಕ್ಕೆ ಅಪಮಾನ ಮಾಡಿದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ, ಕಣ್ಣೋರೆಸುವ ನಾಟಕ ಮಾಡುತ್ತಿದೆ, ಹಾಗಾಗಿ ಮೂರನೇ ಹಂತದ ಹೋರಾಟ ಆರಂಭಿಸಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಮೂಲಕ ಮುಖ್ಯ ನ್ಯಾಯಾಮೂರ್ತಿಗೆ ಪತ್ರಚಳವಳಿ ನಡೆಸಿ ನ್ಯಾ.ಮಲ್ಲಿಕಾರ್ಜುನಗೌಡ ಪಾಟೀಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದು, ಏಪ್ರಿಲ್ ೧೪ರೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಗೂ ಅವಕಾಶ ನೀಡುವುದಿಲ್ಲ ಎಂದರು.
ಪ್ರಜಾ ವಿಮೋಚನಾ ಚಳವಳಿ ಸ್ವಾಭಿಮಾನಿದ ಅಧ್ಯಕ್ಷ ಬಂಡೆ ಕುಮಾರ್ ಮಾತನಾಡಿ, ಸರಕಾರ ಈ ಹಿಂದಿನ ಎರಡು ಹೋರಾಟಗಳ ಸಂದರ್ಭದಲ್ಲಿ ಸಣ್ಣ, ಪುಟ್ಟ ಆದೇಶಗಳನ್ನು ಮಾಡಿ, ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದೆ, ಫೆಬ್ರವರಿ ೦೪ ರಂದು ನಡೆದ ಹೋರಾಟದ ಸಂದರ್ಭದಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿಯೂ ಅಂಬೇಡ್ಕರ್ ಅವರ ಭಾವಚಿತ್ರ ಹಾಕಲು ಆದೇಶ ಮಾಡಿದರೆ, ಫೆಬ್ರವರಿ ೧೯ ರ ಹೋರಾಟ ವೇಳೆ ಸಂವಿಧಾನಕ್ಕೆ ಅವಮಾನ ಮಾಡಿದ ನ್ಯಾಯಾಧೀಶರನ್ನು ಬೇರೆಡೆಗೆ ವರ್ಗಾವಣೆಗೊಳಿಸಿದೆ, ಈ ಎರಡು ಆದೇಶಗಳಿಂದ ಯಾವುದೇ ಉಪಯೋಗವಿಲ್ಲ, ಸರಕಾರ ಕೂಡಲೇ ನ್ಯಾ.ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂಬುದು ಪ್ರಜಾ ವಿಮೋಚನಾ ಚಳವಳಿಯ ಆಗ್ರಹವಾಗಿದೆ ಎಂದರು.
ಮಾದಿಗ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೋಡಿಯಾಲ ಮಹದೇವ್ ಮಾತನಾಡಿ, ಬಹುಸಂಸ್ಕೃತಿ, ಪರಂಪರೆ ಹೊಂದಿರುವ ಭಾರತದಂತಹ ರಾಷ್ಟ್ರಕ್ಕೆ ಹೊಂದುವ ಸಂವಿಧಾನ ಬರೆದುಕೊಟ್ಟು ಅಂಬೇಡ್ಕರ್ ಅವರನ್ನು ಅಪಮಾನಿಸುವುದೆಂದರೆ ಅದು ಇಡೀ ಭಾರತೀಯರನ್ನು ಅಪಮಾನಿಸಿದಂತೆ, ಆದರೆ ಅವಮಾನ ಮಾಡಿದ ವ್ಯಕ್ತಿ ಲಿಂಗಾಯಿತ ಸಮುದಾಯದವನೆಂಬ ಕಾರಣಕ್ಕೆ ಸರಕಾರಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದು ಮುಂದು ನೋಡುತ್ತಿವೆ, ಇದು ಸರಿಯಲ್ಲ, ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಲೇಬೇಕು, ಹಾಗಾಗಿ ಸರಕಾರ ಮುಂದಿನ ಅಂಬೇಡ್ಕರ್ ಜಯಂತಿ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾದಿಗ ದಂಡೋರದ ಗೂಳರಿವೆ ನಾಗರಾಜು, ದಲಿತ ಸಾಮ್ರಾಜ್ಯ ಸ್ಥಾಪನೆಯ ನಾಗೇಶ್, ಮೂಲನಿವಾಸಿಗಳ ಮಹಾ ಒಕ್ಕೂಟದ ಮಹಿಳಾ ಘಟಕದ ನಾಗರತ್ನ, ಚಳವಳಿ ರಾಜಣ್ಣ, ಸಂಪತ್.ಕೆ, ಎ.ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅಂಬೇಡ್ಕರ್ ಗೆ ಅಪಮಾನ- ನ್ಯಾಯಾಧೀಶರ ವಜಾಕ್ಕೆ ಆಗ್ರಹ
Get real time updates directly on you device, subscribe now.
Prev Post
Comments are closed.