ಶೇಂಗಾ ಅಭಿವೃದ್ಧಿ ಮಂಡಳಿ ಸ್ಥಾಪಿಸಿ: ಚಿದಾನಂದ್

241

Get real time updates directly on you device, subscribe now.

ತುಮಕೂರು: ಬಯಲು ಸೀಮೆ ಪ್ರದೇಶದ ಶೇಂಗಾ ಬೆಳೆಗಾರರು ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದು, ಶೇಂಗಾ ಬೆಳೆಗೆ ಸೂಕ್ತ ಬೆಲೆ ಒದಗಿಸುವ ಸಂಬಂಧ ಶೇಂಗಾ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಅವರು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಪರಿಷತ್ನ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಬಯಲು ಸೀಮೆ ಪ್ರದೇಶದ ವ್ಯಾಪ್ತಿಯ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇಂಗಾ ಬೆಳೆಯುವ ಪ್ರದೇಶದ ವಿಸ್ತೀರ್ಣ ಕುರಿತು ಜಿಲ್ಲಾ ವಾರು ಮತ್ತು ತಾಲ್ಲೂಕುವಾರು ಮಾಹಿತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಒಂದು ಎಕರೆ ಪ್ರದೇಶದಲ್ಲಿ ಶೇಂಗಾ ಬೆಳೆಯಲು ರೈತನಿಗೆ ತಗುಲುವ ವೆಚ್ಚ ಮತ್ತು ಪ್ರತಿ ಎಕರೆಗೆ ಎಷ್ಟು ಕ್ವಿಂಟಾಲ್ ಶೇಂಗಾ ಬೆಳೆಯಬಹುದು ಹಾಗೂ ಸಿರಾ ತಾಲ್ಲೂಕಿನಲ್ಲಿ ಕಳೆದ ೫ ವರ್ಷಗಳಲ್ಲಿ ಶೇಂಗಾ ಬಿತ್ತನೆ ಮಾಡಿದ ಅಥವಾ ಶೇಂಗಾ ಬೆಳೆಯುವ ರೈತರ ಸಂಖ್ಯೆ ಹಾಗೂ ಎಷ್ಟು ಎಕರೆ ವಿಸ್ತೀರ್ಣದಲ್ಲ ಶೇಂಗಾ ಬೆಳೆ ಬೆಳೆಯಲಾಗಿದೆ ಎಂಬ ಬಗ್ಗೆ ವಿವರ ನೀಡುವಂತೆ ಆಗ್ರಹಿಸಿದರು.
ಕಳೆದ ೫ ವರ್ಷಗಳಿಂದಲೂ ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರಿಂದ ಶೇಂಗಾ ಬೆಳೆ ಉತ್ಪಾದನೆಯು ಕನಿಷ್ಠ ಮಟ್ಟಕ್ಕೆ ಇಳಿದಿರುವುದರಿಂದ ರೈತರು ನಿರಂತರವಾಗಿ ಸಮಸ್ಯೆ ಎದುರಿಸುವಂತಾಗಿದೆ. ಇದರ ಪರಿಹಾರಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟಪಡಿಸುವಂತೆ ಅವರು ಆಗ್ರಹಿಸಿದರು.
೫ ವರ್ಷಗಳಿಂದ ಬಯಲುಸೀಮೆ ಪ್ರದೇಶದ ಜಿಲ್ಲೆಗಳಲ್ಲಿ ಶೇಂಗಾ ಬೆಳೆಗೆ ವಿಮೆ ಮಾಡಿಸಿದ ರೈತರ ಸಂಖ್ಯೆಯನ್ನು ವರ್ಷವಾರು ವಿವರ ನೀಡುವುದು ಹಾಗೂ ವಿಮೆ ಮಾಡಿಸಿದ ರೈತರಿಗೆ ವಿಮಾನ ಕಂಪೆನಿಗಳಿಂದ ಪಾವತಿಯಾಗಿರುವ ಮೊತ್ತದ ವಿವರಗಳನ್ನು ವರ್ಷವಾರು ನೀಡುವಂತೆಯೂ ಅವರು ಮನವಿ ಮಾಡಿದರು.
ಅನರಕ್ಷತೆ, ಅಜ್ಞಾನ, ಸಂಪರ್ಕದ ಕೊರತೆ ಹಾಗೂ ಹಣಕಾಸಿನ ಸಮಸ್ಯೆಯಿಂದ ಬೆಳೆ ವಿಮೆ ಮಾಡಿಸದೆ ನಷ್ಟಕ್ಕೊಳಗಾದ ರೈತರಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಬಯಲು ಸೀಮೆ ಪ್ರದೇಶದ ಜಿಲ್ಲೆಗಳಲ್ಲಿ ಕಳೆದ ೪೦ ವರ್ಷಗಳಿಂದಲೂ ಶೇಂಗಾ ಬೆಳೆಯನ್ನು ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯುತ್ತಿದ್ದು, ಈ ಬೆಳೆಯನ್ನು ಸದೃಢಗೊಳಿಸಲು ವೈಜ್ಞಾನಿಕ ವಿಧಾನಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.
ಶೇಂಗಾ ಬೆಳೆಗೆ ಸೂಕ್ತ ಬೆಲೆ ಒದಗಿಸುವ ಸಂಬಂಧ ಶೇಂಗಾ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆಯೂ ಅವರು ಸರ್ಕಾರವನ್ನು ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!