ತುಮಕೂರು: ಒಂದು ವಾರದ ಹಿಂದೆ ಅಂದರೆ ಮಾ.19ರ ಶನಿವಾರ ಇಡೀ ಪಾವಗಡ ತಾಲ್ಲೂಕಿನಲ್ಲಿ ಅಕ್ಷರಶಃ ಕರಾಳ ದಿನದ ಛಾಯೆ ಆವರಿಸಿತ್ತು, ತಾಲ್ಲೂಕಿನ ಪಳವಳ್ಳಿ ಕಟ್ಟೆ ಮೇಲೆ ಬಸ್ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರೆ, ಹೆಚ್ಚಿನ ಚಿಕಿತ್ಸೆಗೆ ಸಾಗಿಸುವ ಮಾರ್ಗದ ನಡುವೆ ಇನ್ನು ಇಬ್ಬರು ಇಹಲೋಕ ತ್ಯಜಿಸಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವಿಗೀಡಾದ ದುರ್ಘಟನೆ ಇಡಿ ಜಿಲ್ಲೆÉಯ ಜನರನ್ನ ಕಣ್ಣೀರ ಕಡಲಲ್ಲಿ ತೇಲಿಸಿ ಮರುಕ ಪಡುವಂತೆ ಮಾಡಿತ್ತು, ಈ ದುರ್ಘಟನೆ ರಾಜ್ಯದ ಜನರ ಗಮನ ಸೆಳೆದಿತ್ತು.
ಅದರ ಬೆನ್ನಲ್ಲೆ ಸ್ಪೆನಲ್ ಕಾರ್ಡ್ ಹಾಗೂ ತಲೆಗೆ ಬಲವಾದ ಪೆಟ್ಟು ತಿಂದು ಸತತವಾಗಿ ಒಂದು ವಾರ ಮಹೇಂದ್ರ ಎಂಬ ವಿದ್ಯಾರ್ಥಿ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಗ್ಗೆ 7.15 ರ ಸುಮಾರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಣ್ಣು ಮುಚ್ಚಿದ್ದಾನೆ ಎಂಬ ಸುದ್ದಿ ಬೆಳ್ಳಂಬೆಳಗ್ಗೆಯೇ ಬರಸಿಡಿಲು ಬಡಿದಂತಾಗಿತ್ತು.
ಚಿಕಿತ್ಸೆ ಪಡೆಯಲು ಪರದಾಟ
ಅಂದು ಬಸ್ ದುರಂತದ ವೇಳೆ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದಾಗ ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ, ಇದು ತುಂಬಾ ಗಂಭೀರವಾಗಿದ್ದು ಬೆಂಗಳೂರಿನ ನಿಮ್ಹಾನ್ಸ್ ಗೆ ತುರ್ತಾಗಿ ಹೋಗಬೇಕಿದೆ ಎಂದು ತಿಳಿಸಿದ ಹಿನ್ನೆಲೆ ನಿಮ್ಹಾನ್ಸ್ ಗೆ ಗಾಯಾಳು ಮಹೇಂದ್ರನನ್ನು ಕೊಂಡೊಯ್ದಾಗ ದುರಾದೃಷ್ಟವಶಾತ್ ಅಲ್ಲಿ ಬೆಡ್ನ ಕೊರತೆ ಜೊತೆಗೆ ಉಸಿರಾಟದ ವೆಂಟಿಲೇಟರ್ ಅಭಾವದಿಂದ ಬೇರೆ ಯಾವುದಾದರೂ ಖಾಸಗಿ ಆಸ್ಪತ್ರೆಗೆ ಹೋಗಿ ಎಂದಿದ್ದಾರೆ, ದಿಕ್ಕು ತೋಚದ ಕುಟುಂಬಸ್ಥರು ವಿವಿ ಡಸ್ ಎಂಬ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಹೋಗಿದ್ದಾರೆ, ಆದರೆ ಅಲ್ಲಿ ಪ್ರತಿದಿನ 50 ಸಾವಿರ ಹಣ ವೆಚ್ಚ ತಗುಲುತ್ತದೆ, ಆದರೂ ಬದುಕುಳಿಯುವ ಗ್ಯಾರಂಟಿ ಕೊಡಲಿಕ್ಕೆ ಸಾಧ್ಯವಿಲ್ಲ ಎಂದೇಳಿ ಕೈ ತೊಳೆದುಕೊಂಡಿದ್ದಾರೆ. ಅಂದು ರಾತ್ರಿ ಅಲ್ಲೆ ಉಳಿದು, ಸ್ಥಳೀಯ ಶಾಸಕ ವೆಂಕಟರಮಣಪ್ಪ ಸಲಹೆಯಂತೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದಾರೆ, ಆದರೆ ಅಲ್ಲಿ ಚಿಕಿತ್ಸೆ ವೆಚ್ಚ ಸುಮಾರು 10 ರಿಂದ 15 ಲಕ್ಷ ಹಣ ಖರ್ಚಾಗುತ್ತದೆ ಎಂದಿದ್ದಾರೆ, ಅಷ್ಟು ಶಕ್ತಿಯಿಲ್ಲದ ಕುಟುಂಬ ದುರಂತದ ಮಾರನೇ ದಿನ ಭಾನುವಾರ ಟ್ರೋಮೊ ಕೇರ್ಸೆಂರ್ಟ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದಾರೆ. ತಲೆಗೆ ಬಲವಾದ ಪೆಟ್ಟು ತಿಂದಿದ್ದ ಮತ್ತು ಬೆನ್ನು ಮೂಳೆ ಮುರಿದಿದ್ದ ಮಹೇಂದ್ರನ ಆಪರೇಷನ್ ಮಾಡುವ ಅನಿವಾರ್ಯವಿತ್ತು, ಅದಕ್ಕೆ ಬಿಪಿ ನಾರ್ಮಲ್ಗೆ ಬರುವವರೆಗೂ ಕಾಯೋಣ ಎಂಬ ವೈದ್ಯರ ಸಲಹೆ ಮೇರೆಗೆ ಮೃತನಾಗುವ ದಿನದವರೆಗೂ ಕಾದು ಕೂತಿದ್ದರೂ, ಬಿಪಿ ನಾರ್ಮಲ್ಗೆ ಬರದೆ ಶನಿವಾರ ಬೆಳಗ್ಗೆಯೇ ಮೃತನಾಗಿದ್ದಾನೆ.
Comments are closed.