ಕುಣಿಗಲ್: ಹೆಚ್ವಿಡಿಎಸ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಇನ್ನು ಸಂಪರ್ಕ ಪಡೆಯದಿರುವ ತಾಲೂಕಿನ ರೈತರು ಅರ್ಜಿಗಳೊಂದಿಗೆ ತಮ್ಮ ಕಚೇರಿ ಸಂಪರ್ಕಿಸುವಂತೆ ಶಾಸಕ ಡಾ.ರಂಗನಾಥ್ ಹೇಳಿದರು.
ಶನಿವಾರ ಶಾಸಕರ ಕಚೇರಿಯಲ್ಲಿ ಬೆಸ್ಕಾಂಗೆ ಸಂಬಂಧಿಸಿದಂತೆ ದೂರವಾಣಿ ಮೂಲಕ, ನೇರವಾಗಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ತಾಲೂಕಿನ ಬಹುತೇಕ ಜನರು ಹೆಚ್ವಿಡಿಎಸ್ ಗೆ ಅರ್ಜಿ ಸಲ್ಲಿಸಿದ್ದರೂ ಸಂಪರ್ಕ ಸಿಕ್ಕಿಲ್ಲ ಎಂದು ಹೇಳಿದ್ದಾರೆ, ಈ ಹಿಂದೆ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ರೈತರ ಅನುಕೂಲಕ್ಕೆ ಉತ್ತಮ ವೋಲ್ಟೇಜ್ ನೀಡಲು ಜಾರಿತಂದ ಯೋಜನೆ ಇದಾಗಿದೆ, ತಾಲೂಕಿನಲ್ಲಿ ಸುಮಾರು ಒಂದುವರೆ ಸಾವಿರ ಅರ್ಜಿ ಬಾಕಿ ಇದ್ದು ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಸೌಲಭ್ಯ ಕಲ್ಪಿಸಬೇಕಿದೆ, ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಸಮಪರ್ಕವಾಗಿ ಸ್ಪಂದಿಸುತ್ತಿಲ್ಲ, ತಾಲೂಕಿನ ಜನರ ಅನುಕೂಲಕ್ಕೆ ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಂಡು ಶೀಘ್ರ ಟಿಸಿ ಅಳವಡಿಸಲು ಶ್ರಮಿಸಲಾಗುವುದು, ಸುಮಾರು ಒಂದುವರೆ ಸಾವಿರ ಮುರಿದ, ಶಿಥಿಲಾವಸ್ಥೆಯಲ್ಲಿರುವ ಕಂಬಗಳ ಬದಲಿಗೆ ಸರ್ಕಾರದ ಮೇಲೆ ಸತತ ಒತ್ತಡ ಹೇರಿ ಅನುದಾನ ತರಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ, ವಿದ್ಯುತ್ ಸಮರ್ಪಕ ಪೂರೈಕೆ ನಿಟ್ಟಿನಲ್ಲಿ ಹುಲಿಯೂರು ದುರ್ಗದಲ್ಲಿ 600 ಕೋಟಿ ವೆಚ್ಚದಲ್ಲಿ ವಿದ್ಯುತ್ ಸ್ವೀಕರಣೆ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದ್ದರೆ, ಮಡಿಕೆಹಳ್ಳಿ, ಸಣಬಘಟ್ಟದಲ್ಲಿ ಜಮೀನು ಗುರುತಿಸಿ ವಿತರಣೆ ಕೇಂದ್ರ ಕಾಮಗಾರಿ ಪ್ರಗತಿಯಲ್ಲಿದೆ, ದಾಸನಪುರ ಗ್ರಾಮದಲ್ಲಿ ಜಾಗ ಗುರುತಿಸಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಈ ವಿತರಣೆ ಕೇಂದ್ರಗಳ ಕಾಮಗಾರಿ ಪೂರ್ಣಗೊಂಡಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ವಿತರಣೆ ಕಾರ್ಯ ಸುಗಮವಾಗಲಿದೆ, ಗ್ರಾಮಾಂತರ ಪ್ರದೇಶದಿಂದ ಇಂದು 150 ದೂರು ಸ್ವೀಕರಿಸಿದ್ದು ಬಹುತೇಕರು ದಿನಕ್ಕೆ 7 ಗಂಟೆ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಕೋರಿದ್ದಾರೆ ಎಂದರು.
ಇಪ್ಪಾಡಿ ಸಮೀಪದ ಗೋವಿಂದಯ್ಯನಪಾಳ್ಯದ ಅರಿವಮ್ಮ ಎಂಬಾಕೆ ತಮ್ಮ ಮನೆಗೆ ಭಾಗ್ಯಜ್ಯೋತಿ ಸಂಪರ್ಕ ಇತ್ತು, ಯಾರೋ ಲೈನ್ಮನ್ ಬಂದು ಏಕಾಏಕಿ ಮೀಟರ್ ಹಾಕಿದ್ದಾರೆ, ಮೀಟರ್ ಓಡುತ್ತಿಲ್ಲ, ಇದೀಗ ಒಟ್ಟಾರೆ ಹತ್ತು ಸಾವಿರ ಬಿಲ್ ಬಂದಿದೆ, ಎರಡು ಲೈಟ್ ಬಳಸುವ ನಾನು ಹತ್ತು ಸಾವಿರ ಎಲ್ಲಿಂದ ತರಲಿ ಎಂದು ಅವಲತ್ತುಕೊಂಡರು. ಶಾಸಕರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ, ಬಿಲ್ ಪಾವತಿಸುವುದಾಗಿ ಹೇಳಿದರು.
ಹಂದಲಗೆರೆಯ ರೈತನಾರಾಯಣಪ್ಪ 63 ಸಾವಿರ ದುಡ್ಡುಕಟ್ಟಿ, ಕಂಬವನ್ನು ಹಾಕಿಸಿಕೊಂಡಿದ್ದರೂ ಇನ್ನು ಟಿಸಿ ನೀಡಿಲ್ಲ, ಒಂದು ವರ್ಷವಾಗಿದೆ ಇಲಾಖೆಯಲ್ಲಿ ಯಾರೂ ಸ್ಪಂದಿಸುತ್ತಿಲ್ಲ ಅಡಿಕೆ ಬೆಳೆ ಇಟ್ಟಿದ್ದು ನೀರುಣಿಸಲು ಪರದಾಡಬೇಕಿದೆ, ಹಣ ನೀಡಿದರೂ ಸವಲತ್ತು ನೀಡುತ್ತಿಲ್ಲ ಎಂದರು, ಸ್ಥಳದಲ್ಲಿದ್ದ ಬೆಸ್ಕಾಂ ಇಇ ಸೋಮವಾರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಬೆಸ್ಕಾಂ ಇಇ ಪುರುಷೋತ್ತಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಪುರಸಭಾಧ್ಯಕ್ಷ ರಂಗಸ್ವಾಮಿ, ಮುಖಂಡರಾದ ನಗುತ ರಂಗನಾಥ, ಗೋವಿಂದರಾಜ, ಗಿರಿ, ಚಂದ್ರು, ನಾಗೇಶ ಇತರರು ಇದ್ದರು.
ಕಳುವು ತಡೆಯಲು ನಾನೇ ಬರುತ್ತೇನೆ
ಫೊನ್ ಇನ್ ಕಾರ್ಯಕ್ರಮದ ನಂತರ ಗ್ರಾಮಾಂತರ ಪ್ರದೇಶದಲ್ಲಿ ಜಾನುವಾರು, ಪಂಪ್ಸೆಟ್, ವೈರ್ ಕಳುವು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಗ್ರಾಮಾಂತರ ಪ್ರದೇಶದ ರೈತರೆ ಗಸ್ತು ತಿರುಗಬೇಕು, ಪೆÇಲೀಸರಿಗೆ ಸಹಕಾರ ನೀಡಬೇಕು, ಗ್ರಾಮದಲ್ಲಿ ರಾತ್ರಿ ಕಾವಲು ಪಾಳಿ ವ್ಯವಸ್ಥೆ ಮಾಡಿಕೊಳ್ಳಬೇಕು, ಗ್ರಾಮಸ್ಥರು ಗಸ್ತಿಗೆ ಮುಂದಾದರೆ ತಾವು ಸಹ ಗ್ರಾಮಸ್ಥರೊಂದಿಗೆ ರಾತ್ರಿ ಗಸ್ತಿಗೆ ಬರುತ್ತೇನೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
Comments are closed.