ರಸ್ತೆ ಅಪಘಾತ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ

ಅಧಿಕಾರಿಗಳಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೂಚನೆ

272

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಗುರುತಿಸಿರುವ 59 ರಸ್ತೆ ಬ್ಲ್ಯಾಕ್ಸ್ಪಾಟ್ಸ್ಗಳಲ್ಲಿ ಪದೇ ಪದೆ ಅಪಘಾತಗಳಾಗುತ್ತಿದ್ದು, ಅಪಘಾತಗಳು ಮತ್ತೊಮ್ಮೆ ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚೆಗಷ್ಟೇ ಪಾವಗಡ ತಾಲ್ಲೂಕು ಪಳವಳ್ಳಿಕಟ್ಟೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸತ್ತವರ ಸಂಖ್ಯೆ 7ಕ್ಕೆ ಏರಿದ್ದು, ಅಪಘಾತದಲ್ಲಿ ಸಾವನ್ನಪ್ಪಿರುವ ಹಾಗೂ ಗಾಯಗೊಂಡವರ ಕುಟುಂಬಗಳು ಕೇಳುವ ಪ್ರಶ್ನೆಗೆ ಉತ್ತರಿಸಲಾಗುತ್ತಿಲ್ಲ, ಅಪಘಾತದಲ್ಲಿ ಸತ್ತವರಿಗೆ ಪರಿಹಾರ ನೀಡುವುದಕ್ಕಿಂತ ಅಪಘಾತ ನಡೆಯದಂತೆ ಕ್ರಮ ಕೈಗೊಳ್ಳವುದೊಂದೆ ನಮಗಿರುವ ಮಾರ್ಗವೆಂದು ತಿಳಿಸಿದರು.
ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಗುರುತಿಸಿರುವ ಬ್ಲ್ಯಾಕ್ಸ್ಪಾಟ್ಗಳಲ್ಲಿ ರಸ್ತೆ ಅಗಲೀಕರಣ, ರಸ್ತೆ ತಿರುವು, ಅಗಲೀಕರಣಕ್ಕೆ ಅಗತ್ಯವಿರುವ ಭೂಸ್ವಾಧೀನ, ಸೈನ್ ಬೋರ್ಡ್ ಅಳವಡಿಕೆ, ಸ್ಕೈ ವಾಕ್ ಅಳವಡಿಕೆ ಸಮಸ್ಯೆಗಳಿದ್ದಲ್ಲಿ ಶೀಘ್ರವೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದ ಅವರು, ಅಪಘಾತಕ್ಕೆ ಕಾರಣವೆನ್ನಲಾದ ಪಳವಳ್ಳಿ ಬಳಿಯಿರುವ ರಸ್ತೆ ತಿರುವನ್ನು ಇನ್ನೊಂದು ವಾರದೊಳಗೆ ಸರಿಪಡಿಸಿ ವರದಿ ನೀಡಬೇಕು ಹಾಗೂ ಬ್ಲ್ಯಾಕ್ಸ್ಪಾಟ್ಗಳಿಗೆ ಸಂಬಂಧಿಸಿದಂತೆ ಅಪಘಾತ ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ಛಾಯಾಚಿತ್ರ ಸಹಿತ ವರದಿಯನ್ನು ಅಧಿಕಾರಿಗಳು ಸಮಿತಿಗೆ ಒದಗಿಸಬೇಕೆಂದು ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪೀಕ್ ಟೈಮ್ ನಲ್ಲಿ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಹಾಗೂ ಬಸ್ಸಿನ ಟಾಪ್ ಮೇಲೆ ಪ್ರಯಾಣಿಕರು ಕುಳಿತು ಪ್ರಯಾಣಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚಿತ್ರದುರ್ಗ ಹಾಗೂ ತುಮಕೂರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಸುಪ್ರೀಂಕೋರ್ಟ್ ನಿರ್ದೇಶನದನ್ವಯ ರಸ್ತೆ ಸುರಕ್ಷತಾ ಸಮಿತಿ ಸಭೆಯನ್ನು 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಬೇಕು. ಬರುವ ಏಪ್ರಿಲ್ 8ರ ನಂತರ ಮತ್ತೊಮ್ಮೆ ಸಭೆ ಕರೆಯಲಾಗುವುದು. ಈ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು, ಹಾಜರಾಗದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ಖಾಸಗಿ ಬಸ್ ಮಾಲೀಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆಎಸ್ಆರ್ಟಿಸಿ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!