ಮಾ. 31ರಂದು ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ

212

Get real time updates directly on you device, subscribe now.

ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ 115ನೇ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 31 ರಂದು ಸಂಜೆ ಎಐಸಿಸಿ ಮಾಜಿ ಉಪಾಧ್ಯಕ್ಷ ಹಾಗೂ ಸಂಸದ ರಾಹುಲ್ಗಾಂಧಿ ಅವರು ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದು ನಂತರ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆಯಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಎಐಸಿಸಿ, ಕೆಪಿಸಿಸಿ ಸೂಚನೆ ಮೇರೆಗೆ ಜಿಲ್ಲಾ ಕಾಂಗ್ರೆಸ್ ಕಮಿಟಿಯಿಂದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ, ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಸೇರಿ ಪಕ್ಷದ ಅಣತಿಯಂತೆ ರಾಹುಲ್ಗಾಂಧಿಯವರ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿದೆ ಎಂದರು.
ಮಾರ್ಚ್ 31ರ ಸಂಜೆ 4 ಗಂಟೆಗೆ ಶ್ರೀಸಿದ್ದಗಂಗಾ ಮಠಕ್ಕೆ ಬರುವ ರಾಹುಲ್ಗಾಂಧಿ ಅವರು ಮೊದಲಿಗೆ ಹಿರಿಯ ಶ್ರೀಗಳ ಗದ್ದುಗೆ ತೆರಳಿ ಗೌರವ ಸಲ್ಲಿಸುವರು, ನಂತರ ಹಾಲಿ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಶ್ರೀಮಠದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಾಹುಲ್ಗಾಂಧಿ ಅವರು ಇರಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಡಿದೆ, ಇದುವರೆಗೂ ಯಾವುದೇ ಬಹಿರಂಗ ಸಭೆ ನಡೆಸುವ ಇಚ್ಚೆಯನ್ನು ರಾಹುಲ್ ಗಾಂಧಿಯವರ ವ್ಯಕ್ತಪಡಿಸಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ಅದಕ್ಕೆ ಬೇಕಾದ ಸಿದ್ಧತೆಯನ್ನು ಪಕ್ಷ ಮಾಡಲಿದೆ ಎಂದರು.
ಇದೊಂದು ರಾಜಕೀಯೇತರ ಭೇಟಿಯಾಗಿದ್ದು, ಅವರ ತಾಯಿ ಸೋನಿಯಾಗಾಂಧಿ ಅವರು ಸಹ ಈ ಹಿಂದೆ ಹಿರಿಯ ಶ್ರೀಗಳ ಸಮ್ಮುಖದಲ್ಲಿಯೇ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅವರ ಹಾದಿಯಲ್ಲಿಯೇ ಅವರ ಮಗನೂ ಶ್ರೀಗಳ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ, ಇದು ರಾಜಕೀಯ ಹೊರತಾದ ಭೇಟಿ ಎಂದರು.
ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ತಂತ್ರಗಾರಿಕೆ ನಡೆಸುವುದು ಸರ್ವೆ ಸಾಮಾನ್ಯ, ಆದರೆ ಶ್ರೀಮಠದ ಭೇಟಿ ಚುನಾವಣೆ ತಂತ್ರಗಾರಿಕೆಯ ಭಾಗವಲ್ಲ, ಶ್ರೀಮಠದ ಬಗ್ಗೆ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾಗಾಂಧಿ ಅವರಿಗೆ ಅಪಾರ ಗೌರವವಿದೆ, ಅದನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮಾಡುತ್ತಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಜಿಲ್ಲೆಯಲ್ಲಿ ಮಾಜಿ ಸಂಸದರಾದ ಮುದ್ದಹನುಮೇಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವ ನಾಯಕರನ್ನು ಪಕ್ಷ ಕಡೆಗಣಿಸಿಲ್ಲ, ಮುದ್ದಹನುಮೇಗೌಡರು ಕೃಷಿಯಲ್ಲಿ ತೊಡಗಿದ್ದಾರೆ, ಅವರು ವಕೀಲರಾಗಿ ಕೂಡ ಸಕ್ರಿಯರಾಗಿದ್ದಾರೆ, ಹಾಗಾಗಿ ಪಕ್ಷದ ವೇದಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ, ಮುಂದಿನ ದಿನಗಳಲ್ಲಿ ಪಕ್ಷದೊಂದಿಗೆ ಸಕ್ರಿಯರಾಗಲಿದ್ದಾರೆ ಎಂದರು.
ಸ್ವಾಮೀಜಿಗಳು ಧರಿಸುವ ವಸ್ತ್ರಗಳ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಸಿದ್ದರಾಮಯ್ಯ ವಸ್ತ್ರ ಧರಿಸುವಿಕೆ ವ್ಯಕ್ತಿ, ವ್ಯಕ್ತಿಗೆ ಹೇಗೆ ಭಿನ್ನವಾಗಿರುತ್ತದೆ ಎಂಬುದನ್ನು ಸ್ವಾಮೀಜಿಗಳ ಉದಾಹರಣೆ ನೀಡಿ ಹೇಳಿದ್ದಾರೆ, ಆದರೆ ಅದನ್ನೇ ಕೆಲ ಮಾಧ್ಯಮಗಳು ತಿರುಚಿ ಸ್ವಾಮೀಜಿಗಳಿಗೆ ಅವಮಾನ ಎಂದು ಬಿಂಬಿಸಲು ಹೊರಟಿವೆ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದರು.
ಈ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಡಾ.ಎಸ್.ರಫಿಕ್ ಅಹಮದ್, ಎಸ್.ಷಫಿ ಅಹಮದ್, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ವೆಂಕಟೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಮುಖಂಡರಾದ ಇಕ್ಬಾಲ್ ಅಹಮದ್, ಮೆಹಬೂಬ್ ಪಾಷ, ಚಂದ್ರಶೇಖರ್ ಗೌಡ ಮತ್ತಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!