ರಾಷ್ಟ್ರೀಯ ಹೆದ್ದಾರಿ 206ಕ್ಕೆ ಶಿವಕುಮಾರ ಶ್ರೀ ಹೆಸರು

197

Get real time updates directly on you device, subscribe now.

ತುಮಕೂರು: ಕಾಯಕ ಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಸವಿನೆನಪಿಗಾಗಿ ನಗರದ ರಾಷ್ಟ್ರೀಯ ಹೆದ್ದಾರಿ-206 ರ ಬಟವಾಡಿ ಮಿರ್ಜಿ ಪೆಟ್ರೋಲ್ ಬಂಕ್ನಿಂದ ಗುಬ್ಬಿ ಗೇಟ್ ವರೆಗಿನ ರಸ್ತೆಗೆ ಮಹಾನಗರ ಪಾಲಿಕೆ ವತಿಯಿಂದ ಡಾ.ಶಿವಕುಮಾರ ಮಹಾ ಸ್ವಾಮಿಗಳ ರಸ್ತೆ ಎಂದು ನಾಮಕರಣ ಮಾಡಲಾಯಿತು.

ನಗರದ ಬಟವಾಡಿಯಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಸಾನಿಧ್ಯದಲ್ಲಿ ಮಹಾನಗರ ಪಾಲಿಕೆಯಿಂದ ಸಂಸದ ಜಿ.ಎಸ್.ಬಸವರಾಜು ಅವರು ಡಾ.ಶಿವಕುಮಾರ ಮಹಾಸ್ವಾಮಿಗಳ ರಸ್ತೆ ನಾಮಫಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಜಿ.ಎಸ್.ಬಸವರಾಜು, ಇಂದು ಸುದಿನ, ಶ್ರೀಗಳ 115ನೇ ವರ್ಷದ ಜಯಂತಿ ಸವಿನೆನಪಿಗಾಗಿ ಬಟವಾಡಿಯಿಂದ ಗುಬ್ಬಿಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿ-206ಕ್ಕೆ ಶ್ರೀಗಳ ಹೆಸರು ನಾಮಕರಣ ಮಾಡಲಾಗಿದೆ, ಈ ಹೆಸರು ಯಾವಾಗಲೂ ಚಿರಾಯು ಆಗಿರಬೇಕು ಎಂದರು.
ನಗರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಶ್ರೀಗಳ ಪುತ್ಥಳಿ ನೋಡಿಕೊಂಡೆ ತೆರಳುವಂತೆ ಮಾಡುವ ಸಲುವಾಗಿ ಬಟವಾಡಿ ಬಳಿಯೇ ಶ್ರೀಗಳ ಬೃಹತ್ ಪುತ್ಥಳಿ ನಿರ್ಮಾಣ ಮಾಡುವ ಸಂಬಂಧವೂ ಚಿಂತನೆಯಿದೆ, ಈ ಸಂಬಂಧ ಮಹಾನಗರ ಪಾಲಿಕೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಹಾನಗರ ಪಾಲಿಕೆ ವತಿಯಿಂದ ಬಿ.ಹೆಚ್.ರಸ್ತೆಗೆ ಪರಮ ಪೂಜ್ಯರ ಹೆಸರನ್ನು ಅಧಿಕೃತವಾಗಿ ಇಂದು ನಾಮಕರಣ ಮಾಡಲಾಗಿದೆ, ಈ ಕಾರ್ಯಕ್ಕೆ ಶಾಸಕರು, ಸಂಸದರು, ಮಹಾನಗರ ಪಾಲಿಕೆಯ ಮೇಯರ್, ಎಲ್ಲಾ ಸದಸ್ಯರು ಹಾಗೂ ಆಯುಕ್ತರ ಅಪಾರ ಶ್ರಮ ಇದೆ ಎಂದರು.
ನಗರಕ್ಕೆ ಆಗಮಿಸುವ ಪ್ರತಿಯೊಬ್ಬರ ಮನಸ್ಸಿನಲ್ಲೂ ಪರಮಪೂಜ್ಯರ ಹೆಸರು ಚಿರಾಯು ಆಗಿ ಉಳಿಯುವಂತಹ ಕೆಲಸ ಇದಾಗಿದೆ ಎಂದು ಹೇಳಿದರು.
ಶಾಸಕ ಜ್ಯೋತಿಗಣೇಶ್ ಮಾತನಾಡಿ, ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿಯವರ ಹೆಸರನ್ನು ಬಟವಾಡಿಯಿಂದ ಗುಬ್ಬಿಗೇಟ್ ವರೆಗಿನ ರಾಷ್ಟ್ರೀಯ ಹೆದ್ದಾರಿಗೆ ಶ್ರೀಗಳ ಹೆಸರು ನಾಮಕರಣ ಮಾಡಿ ನಾಮಫಲಕ ಉದ್ಘಾಟಿಸಲಾಗಿದೆ, ಅದೇ ರೀತಿ ತುಮಕೂರು ಪ್ರವೇಶಿಸುವ ಬಟವಾಡಿಯಲ್ಲೇ ಶ್ರೀಗಳ ಬೃಹತ್ ಪುತ್ಥಳಿ ನಿರ್ಮಾಣವಾದರೆ ಅದೊಂದು ಉತ್ತಮ ಕಾರ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಪಾಲಿಕೆ ಸದಸ್ಯರಾದ ಚಂದ್ರಕಲಾ ಪುಟ್ಟರಾಜು, ಗಿರಿಜಾ ಧನಿಯಕುಮಾರ್, ನಯಾಜ್ ಅಹಮದ್, ಮಹೇಶ್, ಆಯುಕ್ತೆ ರೇಣುಕಾ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!