ಕಾಯಕ ಯೋಗಿಯ ಜನ್ಮ ಜಯಂತಿಗೆ ಸಕಲ ಸಿದ್ದತೆ

ಸಿದ್ದಗಂಗಾ ಮಠಕ್ಕೆ ಅಮಿತ್ ಶಾ ಆಗಮನ- ಕಾರ್ಯಕ್ರಮದ ಸಿದ್ಧತೆ ವೀಕ್ಷಿಸಿದ ಸಿಎಂ

156

Get real time updates directly on you device, subscribe now.

ತುಮಕೂರು: ಕಾಯಕ ಯೋಗಿ, ಆಧುನಿಕ ಬಸವಣ್ಣ, ತ್ರಿವಿಧ ದಾಸೋಹಿ, ನಾಡಿನ ಉದ್ದಗಲಕ್ಕೂ ನಡೆದಾಡುವ ದೇವರೆಂದೇ ಹೆಸರು ವಾಸಿಯಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ನಡೆದಿರುವ ಅಂತಿಮ ಹಂತದ ಸಿದ್ಧತೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿದರು.

ಶ್ರೀಗಳ 115ನೇ ಜಯಂತಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಪೂರ್ವ ಭದ್ರತಾ ಕಾರ್ಯ, ಶ್ರೀಗಳ ಗುರುವಂದನಾ ಮಹೋತ್ಸವಕ್ಕೆ ಸಿದ್ದಗೊಳ್ಳುತ್ತಿರುವ ಬೃಹತ್ ವೇದಿಕೆಯನ್ನು ಮುಖ್ಯಮಂತ್ರಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರಿಂದ ಮಾಹಿತಿ ಪಡೆದರು.
ನಗರದ ಸಿದ್ದಗಂಗಾ ಮಠಕ್ಕೆ ಸಚಿವರಾದ ಅರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ ಅವರೊಂದಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ಶ್ರೀಮಠದ ಆವರಣದಲ್ಲಿ ನಡೆದಿರುವ ಸಿದ್ಧತೆಗಳು, ವೇದಿಕೆ ನಿರ್ಮಾಣ, ಆಸನಗಳ ವ್ಯವಸ್ಥೆ ಹಾಗೂ ಕೈಗೊಂಡಿರುವ ಭದ್ರತಾ ವ್ಯವಸ್ಥೆಗಳನ್ನು ಖುದ್ದು ವೀಕ್ಷಿಸಿ ಗಣ್ಯರು ಹಾಗೂ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ 115ನೇ ಜನ್ಮ ಜಯಂತಿಯನ್ನು ಒಂದು ಉತ್ಸವದ ರೀತಿಯಲ್ಲಿ ಆಚರಿಸಬೇಕು, ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರೆ ತಪ್ಪಾಗಲಾರದು, ಶ್ರೀಗಳ ಜಯಂತಿ ಮತ್ತು ಗುರುವಂದನಾ ಸಮಾರಂಭಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಸುಮಾರು 2 ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.
ಶ್ರೀಮಠದ ಪರಂಪರೆ, ದಾಸೋಹ, ಶಿಕ್ಷಣ ಪದ್ಧತಿಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಸಲುವಾಗಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಏ.1 ರಂದು ಬೆಳಗ್ಗೆ ಬೆಳಿಗ್ಗೆ 10.45ಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸುವರು, 10.50ಕ್ಕೆ ಶ್ರೀಮಠಕ್ಕೆ ಆಗಮಿಸಲಿರುವ ಅಮಿತ್ ಶಾ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವರು, ನಂತರ 11 ಗಂಟೆಗೆ ಗುರುವಂದನಾ ಸಮಾರಂಭದ ವೇದಿಕೆಗೆ ಆಗಮಿಸಿ ಸುಮಾರು 2 ಗಂಟೆಗಳ ಕಾಲ ಉಪಸ್ಥಿತರಿರುವರು. ಮಧ್ಯಾಹ್ನ ಪ್ರಸಾದ ಸೇವಿಸಿದ ಬಳಿಕ ಅಮಿತ್ ಶಾ ಹೊರಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ, ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

ನಮ್ಮ ಸರ್ಕಾರ ಉತ್ತಮ ಕಾರ್ಯ ಮಾಡ್ತಿದೆ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಗಂಡಸುತನದ ಸವಾಲಿಸನ ಬಗ್ಗೆ ಸಿದ್ದಗಂಗಾ ಮಠದಲ್ಲಿ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಇಲ್ಲಿ ಗಂಡಸುತನದ ಸವಾಲು ಬರಲ್ಲ, ನಮ್ಮ ಸರ್ಕಾರ ಯಾವುದೇ ವಿಚಾರವನ್ನು ದಕ್ಷತೆಯಿಂದ ನಿಭಾಯಿಸಿದೆ, ಶಾಂತಿ ಸುವ್ಯವಸ್ಥೆ ಕಾಪಾಡುವುದು, ಸಾಮರಸ್ಯ ಮೂಡಿಸುವ ಕಾರ್ಯ ಮಾಡುತ್ತಿದೆ, ಸಮವಸ್ತ್ರ ವಿಚಾರದಲ್ಲೂ ದಿಟ್ಟ ಕ್ರಮ ಕೈಗೊಂಡು ಯಾವುದೇ ದೊಂದರೆಯಾಗದಂತೆ ಮುನ್ನಡೆಯುತ್ತಿದ್ದೇವೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!