ಮಾಸ್ಕಲ್ಲೇ ನಗ್ರಿ! ನಕ್ಕು ಹಗುರಾಗ್ರಿ!

292

Get real time updates directly on you device, subscribe now.

ನಗುವಿಗೂ ಏಪ್ರಿಲ್‌ಗೂ ನಿಕಟ ಸಂಬಂಧವಿದೆ. ಏಪ್ರಿಲ್ 1 ಬಂತೆಂದರೆ ಗಂಟು ಮು‌ಖಗಳು ಅರಳುತ್ತವೆ, ಸಡಿಲಗೊಂಡು ನಗು ಬಿರಿಯುತ್ತದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಮಾಸ್ಕ್ ನ ಹಿಂದೆ ನಗು ಮರೆಯಾಗಿದೆ!
ಆದರೆ ಏಪ್ರಿಲ್ ಬಂತಂದ್ರೆ ಒಂದಿಷ್ಟು ನಗುವಿಗೆ ಅವಕಾಶವಿದೆ. ಈ ಒಂದರಂದೇ ನಕ್ಕು, ನಗುವುದನ್ನು ಅವತ್ತೇ ಮರೆಯುತ್ತಿದ್ದಾರೆ. ಮತ್ತೆ ಹನ್ನೊಂದು ತಿಂಗಳು ಅದರತ್ತ ತಿರುಗಿಯೂ ನೋಡುವುದಿಲ್ಲ!
‘ನಗು’ ಯಾರಲ್ಲಿ ಇದೆ? ಎಲ್ಲಿ ಇಲ್ಲ? ಏನೆಲ್ಲ ಆಗಿದೆ ಎಂದು ವೀಕ್ಷಿಸಿದರೆ ಕೆಲವು ಸಂಗತಿಗಳು ರೀಲ್‌ನಂತೆ ಬಿಚ್ಚಿ ಕೋಳ್ಳುತ್ತಾ ಹೋಗುತ್ತೆ. ನಗರದಲ್ಲಿರೋ ನಗರಿಗರಿಗೆ ‘ನಗು’ ಅಂದ್ರೆ ಏನು? ಅದು ಹೇಗಿರುತ್ತೆ? ನಗುವುದು ಹೇಗೆ? ಹೇಗೆ ನಗಬೇಕು? ಯಾವುದಕ್ಕೆ ಎಷ್ಟು ನಗಬಹುದು? ಹೇಗೆ ಹೇಗೆಲ್ಲಾ ನಕ್ಕು ಆರೋಗ್ಯ ಕಾಪಾಡಿಕೊಳ್ಳಬಹುದು? ಎಂದು ನಗ್ಗೆ ಬುಗ್ಗೆಯ ಶಿಬಿರ ಏರ್ಪಡಿಸುತ್ತಾರೆ. ಆನಂತರ ಸಮಾರೋಪದ ದಿನ ಅಂದ್ರೆ ಏಪ್ರಿಲ್ ಒಂದರಂದು ಪ್ರ್ಯಾಕ್ಟಿಕಲ್ ಎಂಬಂತೆ ನಗಿಸಿ, ಕರೆಕ್ಟಾಗಿ ನಗುವುದು ಕಲಿತಿದ್ದಾರೆ ಅಂತಾ ಖಾತ್ರಿ ಪಡಿಸಿಕೊಂಡು ಕಳಿಸಬೇಕಾತ್ತೇನೋ?
ನಗ್ರೀ ಸ್ವಾಮೀ, ನಗೋದ್ರಿಂದ ಎಲ್ಲಾ ನರಗಳೂ ಹಿಗ್ಗಿ ‘ನರ’ ನ ಆರೋಗ್ಯ ಸುಧಾರಿಸುವಂತೆ ಮಾಡುತ್ತೆ. ನಗಬೇಕು ಆದ್ರೆ ಯಾರನ್ನಾದ್ರೂ ನಗೆಪಾಟಲಿಗೆ ಗುರಿಯಾಗಿಸಿ, ಮತ್ತೊಬ್ಬರನ್ನು ಚುಚ್ಚಿ, ನೋಯಿಸಿ ನಗಬಾರ್ದು! ಕೆಲವರೋ ಹಾಸ್ಯ ಮಾಡಲು ಹೋಗಿ ತಾವೇ ಹಾಸ್ಯಾಸ್ಪದರಾಗ್ತಾರೆ.
ಇನ್ನು ಸಂಸಾರದಲ್ಲಿ ನಗುವಿಗೆ ಯಾವ ಸ್ಥಾನ ಇರುತ್ತೆ ಅಂದ್ರೆ, ಗಂಡ ಅನ್ನೋ ಪ್ರಾಣಿ ಪಾಣಿಗ್ರಹಣ ಮಾಡಿದ ಹೆಂಡತಿ ಮುಂದೆ ನಗಲ್ಲ, ನಕ್ರೆ ಎಲ್ಲಿ ಸದರ ಆಗ್ತೀನೋ ಅಂತ ಮನೇಲಿ ಮುಖ ಗಂಟ್ಟಿಕ್ಜಿಕೊಂಡೇ ಇದ್ದು ಹೊರಗೆ ಹೋದಾಗ ಮಾತ್ರ ನಗುವ ಪ್ರಮೇಯವಿಲ್ಲದಿದ್ದರೂ ಪ್ರತಿ ವಿಷಯಕ್ಕೂ ಕಿಸಿಕಿಸಿ ಅಂತಾ ಕಿಸಿತಾನೆ!
ಆಫೀಸ್ನಲ್ಲೋ ಬಾಸ್ ಮುಂದೆ ನಗೋ ಹಾಗಿಲ್ಲಾ! ಹಲ್ಲು ಗಿಂಜ ಬೇಕಷ್ಟೆ.
ಆ ಬಾಸೋ ನಗುನಗುತ್ತಾ ಇರಲ್ಲಾ, ಹಾಗೇನಾದ್ರೂ ನಗ್ನಗ್ತಾ ಮಾತಾಡಿದ್ರೆ ಈ ಸ್ಟಾಫ್ ಅನ್ನೋ ಗೂಬೆಗಳು ಎಲ್ಲಿ ಬೋನಸ್ಗೆ ಏಟಾಕ್ತಾರೋ ಅಂತಾ ಮುಗುಂ ಆಗಿರ್ತ್ತಾನೆ!
ಇನ್ನು ಫ್ರೆಂಡ್ಗಳೋ ಒಬ್ಬರಿಗೊಬ್ಬರು ಹಾಸ್ಯ ಮಾಡ್ಕೊಳ್ತಾರೆ ಆದ್ರೆ ಟೈಮ್ ಇರಲ್ಲಾ, ವೀಕ್ ಡೇಸ್ ಆಫೀಸ್ ಕೆಲ್ಸ, ವೀಕೆಂಡ್ ಮನೆ, ಮಡದಿ ಮಕ್ಳು! ಈ ನಡುವೆ ಯಾವಾಗಾದ್ರೂ ಫೋನ್ನಲ್ಲಿ ಗತಕಾಲದ್ದನ್ನೇ ಮೆಲುಕುತ್ತಾ ಕುಲುಕಾಡಿ ನಕ್ಕು ಸುಮ್ನಾಗ್ತಾರೆ.
ಇದೆಲ್ಲಾ ಹೀಗಾದ್ರೆ ಮಕ್ಕಳಿಗೆ ಅಪ್ಪ-ಅಮ್ಮನ ಭಯ, ಸ್ಕೂಲಲ್ಲಿ ಪ್ರಿನ್ಸಿ, ಮ್ಯಾಮ್ಗಳ ಭಯ, ಟ್ಯೂಷನ್ನಲ್ಲಿ ಮತ್ತದೇ ಮ್ಯಾಮ್! ಎಲ್ಲೆಡೆ ಸೈಲೆನ್ಸ್, ಗಪ್ ಚುಪ್ ಹಾಗೂ ಯಾವಾಗಲಾದ್ರೂ ನಗಲೇಬೇಕದ್ರೆ ‘ಕಿಸಕ್’ ಎಂದು ಕಸೀಬಹುದು ಅಷ್ಟೇ. ಒಂದರೆಕ್ಷಣದಲ್ಲಿ ಸದ್ದಿಲ್ಲದೇ ಬಂದು ಹೋಗುವ ಮಿಂಚಂತೆ!
ಹಾಗಾದರೆ ನಗು ಎಲ್ಲಿದೆ? ಯಾಕ್ ಹೀಗೆಲ್ಲಾ ಬಿಗುಮಾನದಲ್ಲಿ, ಸೆಡುವಲ್ಲಿ ಜೀವನ ಸಾಗಿಸಬೇಕಿದೆ ಅನ್ನೋದೆ ತಿಳಿಯುತ್ತಿಲ್ಲಾ!
ಸಾಹಿತ್ಯ ಭಂಡಾರದಲ್ಲಿ ‘ಹಲ್ಮಡಿ ಶಾಸನ’ ಅನ್ನೋ ಪದ ಕೇಳಿದ ನೆನಪು! ಆ ಪದದಂತೆ ಇನ್ನೊಂದು ಪದ ಹೊಳೆಯುತ್ತೆ ‘ಹಲ್ಬಿಡಿ ಶಾಸನ’! ಈ ಶಾಸನವನ್ನು ಸರ್ಕಾರದವರು ಜಾರಿಗೆ ತರಬೇಕು! ಹಾಗಾದ್ರೂ ಜನ ಮುಕ್ತವಾಗಿ ನಗ್ತಾರೇನೋ? ಹಲ್ಬಿಡದಿದ್ದರೆ ಎಲ್ಲಿ ಫೈನ್ ಹಾಕ್ತಾರೋ ಎಂದು ಹಲ್ಬಿಡ್ತಾರೇನೋ? ನಗಬೇಕು ನಗ್ಲಿ, ಹಲ್ಬಿಡ್ಲಿ. ಆದ್ರೆ ಕುದುರೆ ಹಲ್ಬಿಟ್ಟು ಕೆನೆಯೋ ಥರ ನಗದಿದ್ರೆ ಸಾಕು!
ಎನಿ ಹೌ, ಫೂಲ್ ಡೇ ಯಲ್ಲಿ ಒಮ್ಮೆಯಾದ್ರೂ ಫೂಲ್ ಆಗಿ ಪರ್ವಾಗಿಲ್ಲಾ, ಫುಲ್ ಖುಷ್ ಆಗಿ ಎಂಜಾಯ್ ಮಾಡಿ. ಆದ್ರೆ ಇಯರ್ ಫುಲ್ ಫೂಲ್ ಎನಿಸಿಕೊಳ್ಳದೇ ಜಾಗೃತರಾಗಿರಿ.
ಚಾಪ್ಲಿನ್ ಹೇಳೋ ಥರ ತನ್ನನ್ನೇ ತಾನು ವ್ಯಂಗ್ಯ ಮಾಡಿಕೊಂಡು ಇತರರಿಗೆ ಹಾಸ್ಯ ರಸಾಯನ ಉಣಬಡಿಸಬೇಕು. ಅದರಿಂದ ತಾವೂ ಹರ್ಷಿಸಬೇಕು!
ನಗ್ರಿ, ನಗಿಸ್ರಿ, ನಗ್ತಾನೇ ಇರಿ, ಕಷ್ಟಗಳು ಎಲ್ಲರಿಗೂ ಎಂದೆಂದಿಗೂ ಬರುತ್ತೇ ಹೋಗುತ್ತೇ ಅದರ ಮಧ್ಯೆಯೂ ನಗುವನ್ನು ಹಾಸು ಹೊಕ್ಕಾಗಿಸಿಕೊಂಡು ಸುಖ ಕಂಡುಕೊಳ್ಳಿ.
ಮುಖವಾಡ ಹಾಕಿ ಬದುಕುವುದಕ್ಕಿಂತ ಮಾಸ್ಕ್ ಹಾಕಿ ಆರೋಗ್ಯದಿಂದ ಬದುಕಬಹುದು!
ಮಾಸ್ಕ್ ಹಾಕಿದ್ರೂ ಅದ್ರ ಒಳಗೇ ನಗ್ರಿ. ಆಗಲೂ ಆ ನಗು ಕಣ್ಣಲ್ಲಿ ಕಾಣುತ್ತೆ! ನಗಲು ಬೇಕಾದ್ದು ಬಾಯಿಯೂ ಅಲ್ಲಾ, ಮುವತ್ತೆರಡು ಹಲ್ಲೂ ಅಲ್ಲಾ. ನಗಲು ಬೇಕಾದ್ದು ಮುಕ್ತ ಮನಸ್ಸು!
-ಸಂಕೇತದತ್ತ!

Get real time updates directly on you device, subscribe now.

Comments are closed.

error: Content is protected !!