ಶಿವಕುಮಾರ ಶ್ರೀ ಎಂದಿಗೂ ಅಮರ

ಅನ್ನ, ಅಕ್ಷರ, ಆಶ್ರಯ ನೀಡಿದ ಶ್ರೀಗಳು ಆಧುನಿಕ ಯುಗದ ಬಸವಣ್ಣ: ಅಮಿತ್ ಶಾ

160

Get real time updates directly on you device, subscribe now.

ತುಮಕೂರು: ಆಧುನಿಕ ಯುಗದ ಬಸವಣ್ಣ, ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಕಾಯಕ ಯೋಗಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾ ಶಿವಯೋಗಿಗಳವರು, ತಮ್ಮ ಜೀವನದ ಅಂತಿಮ ಘಟ್ಟದವರೆಗೆ ಯಾರಲ್ಲಿಯೂ ಯಾವುದೇ ಪಕ್ಷಪಾತ ಮಾಡದೆ, ಸಾವಿರಾರು ಜನರಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಬದುಕು ಕಟ್ಟಿಕೊಟ್ಟು ಎಂದೆಂದಿಗೂ ಅಮರರಾಗಿದ್ದಾರೆ ಎಂದು ಕೇಂದ್ರದ ಗೃಹ ಹಾಗೂ ಸಹಕಾರ ಇಲಾಖೆ ಸಚಿವ ಅಮಿತ್ ಷಾ ತಿಳಿಸಿದರು.

ತುಮಕೂರಿನ ಸಿದ್ಧಗಂಗಾ ಕ್ಷೇತ್ರದಲ್ಲಿ ಪದ್ಮಭೂಷಣ, ಡಾ.ಶಿವಕುಮಾರ ಮಹಾ ಶಿವಯೋಗಿಗಳವರ 115ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಸಿದ್ಧಗಂಗಾ ಮಠಕ್ಕೆ ಇದು ತಮ್ಮ ಮೂರನೇ ಭೇಟಿಯಾಗಿದ್ದು, ಪ್ರತಿ ಬಾರಿ ಭೇಟಿ ನೀಡಿದಾಗಲೂ ಇಲ್ಲಿಂದ ಚೈತನ್ಯ, ಶಕ್ತಿ ಹಾಗೂ ಜೀವನೋತ್ಸವವನ್ನು ಮನದಲ್ಲಿ ತುಂಬಿಕೊಂಡು ಹೋಗಿದ್ದೇನೆ ಎಂದ ಅವರು, ಹಲವಾರು ವರ್ಷಗಳಿಂದ ಅನೇಕರಿಗೆ ಶಿಕ್ಷಣ, ಆರೋಗ್ಯ ಮತ್ತು ಆಶ್ರಯ ನೀಡುವ ಕಾಯಕದಿಂದ ಈ ಮಠ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದರು.
ಉತ್ತರದಲ್ಲಿ ಗಂಗೆ ಮತ್ತು ದಕ್ಷಿಣದಲ್ಲಿ ಸಿದ್ಧಗಂಗೆ ಎಂಬ ಮಾತು ಪ್ರತೀತಿಯಲ್ಲಿದೆ, ಉತ್ತರ ಗಂಗೆಯಲ್ಲಿ ಸ್ನಾನ ಮಾಡಿದಲ್ಲಿ ಮಾನವನ ಅನೇಕ ಜನ್ಮಗಳ ಪಾಪ ನಿರ್ಮೂಲನೆಯಾಗುತ್ತದೆ ಎಂಬ ನಂಬಿಕೆ ಹೇಗೆ ಪ್ರತೀತಿಯಲ್ಲಿದೆಯೋ ಹಾಗೆಯೇ ದಕ್ಷಿಣದ ಸಿದ್ಧಗಂಗೆಗೆ ಭೇಟಿ ನೀಡಿದಲ್ಲಿ ಅನೇಕ ಜನ್ಮಗಳ ಪುಣ್ಯ ಕಾರ್ಯಗಳ ಜಾಗೃತಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೊಗಳಿದರು.
ಜೀವನವನ್ನು ಉತ್ತಮ ರೀತಿಯಲ್ಲಿ ಹೇಗೆ ನಡೆಸಬೇಕು ಎಂಬುದಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಜೀವನವೇ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ, ತ್ರಿವಿಧ ದಾಸೋಹ ಸಿದ್ಧಾಂತವನ್ನು ಭೂಮಿಯ ಮೇಲೆ ತಂದು ಸಿದ್ಧಗಂಗಾ ಮಠದಲ್ಲಿ ಅನೇಕ ವರ್ಷಗಳ ಕಾಲ ಇದನ್ನು ಶ್ರೀಗಳು ಪಾಲಿಸಿದ್ದರು, ಶ್ರೀಮಠಕ್ಕೆ ಬಂದಂತಹ ಯಾರೂ ಸಹ ಇಲ್ಲಿಂದ ಉಪವಾಸ ಹೋಗುವುದಿಲ್ಲ, ಸಮಾಜದ ಎಲ್ಲಾ ವರ್ಗದ 10 ಸಾವಿರಕ್ಕೂ ಹೆಚ್ಚು ಮಕ್ಕಳು ಇಲ್ಲಿ ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ, ಇದೊಂದು ನಿಜಕ್ಕೂ ವಿಸ್ಮಯಕಾರಿ ಕಾಯಕವೇ ಸರಿ ಎಂದರು.
ಶ್ರೀಸಿದ್ಧಗಂಗಾ ಮಠದ ಅನ್ನ, ಅಕ್ಷರ, ಆಶ್ರಯ ಸಿದ್ಧಾಂತದ ಪ್ರೇರಣೆ ಮೇರೆಗೆ ಕೇಂದ್ರ ಸರ್ಕಾರ ಕೊರೊನಾ ಸಂದರ್ಭದಲ್ಲಿ 2 ವರ್ಷಗಳ ಕಾಲ ಸತತ 80 ಕೋಟಿ ಜನರಿಗೆ ಉಚಿತ ಆಹಾರ ಪದಾರ್ಥ ವಿತರಿಸಿದೆ, ಎಲ್ಲರೂ ತಮ್ಮ ಮಾತೃ ಭಾಷೆಯಲ್ಲಿ ವೈದ್ಯಕೀಯ, ತಾಂತ್ರಿಕ ಶಿಕ್ಷಣ ಪಡೆಯಲು ಅನುವಾಗುವಂತೆ ಶೈಕ್ಷಣಿಕ ಯೋಜನೆ ಜಾರಿಗೆ ತರಲಾಗಿದೆ ಮತ್ತು 3 ಕೋಟಿ ಜನರಿಗೆ ವಸತಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದರು.
ಶ್ರೀಸಿದ್ಧಗಂಗಾ ಮಠದ ಕಿರಿಯ ಸ್ವಾಮಿಗಳು ಶಿವಕುಮಾರ ಸ್ವಾಮೀಜಿಗಳ ಆದರ್ಶ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ, ಸ್ವಾಮೀಜಿಗಳ ಕಾಯಕದ ಸಂದೇಶವನ್ನು ನಾವು ಮುನ್ನೆಡೆಸಿಕೊಂಡು ಹೋಗೋಣ ಎಂದರು.
ಮಹಾನ್ ತಪಸ್ವಿಯ ತಪಸ್ಸಿನಿಂದ, ಕರ್ಮಯೋಗಿಯ ಕರ್ಮದಿಂದ ಮತ್ತು ಧಾರ್ಮಿಕ ಜೀವನ ನಡೆಸಿದ ಸಂತನಿಂದ ಇಂತಹ ಆಧ್ಯಾತ್ಮಿಕ ಸ್ಥಳ ನಿರ್ಮಾಣವಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ವೋದಯ ಅಂತ್ಯೋದಯ ಎಂಬ ಪರಿಕಲ್ಪನೆಯನ್ನು ನಿತ್ಯ ನಿರಂತರವಾಗಿ ಶ್ರೀ ಸಿದ್ಧಗಂಗಾ ಮಠದಲ್ಲಿ ಕಾಣಬಹುದಾಗಿದ್ದು, ಡಾ.ಶಿವಕುಮಾರ ಮಹಾ ಸ್ವಾಮೀಜಿ ಅವರು ನಡೆದಾಡಿದ ಈ ಪುಣ್ಯ ಭೂಮಿಯಲ್ಲಿ ಒಬ್ಬ ಭಕ್ತನಾಗಿ ಬಂದು ಅಳಿಲು ಸೇವೆ ಸಲ್ಲಿಸುತ್ತಿರುವುದು ನನ್ನ ಸೌಭಾಗ್ಯ ಎಂದರು.
ಮಧ್ಯಹ್ನದ ಬಿಸಿಯೂಟ ವ್ಯವಸ್ಥೆಗೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಇಡುವ ಸಂಬಂಧ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದ ಮುಖ್ಯಮಂತ್ರಿಗಳು, ಮಠದ ಹಲವಾರು ವರ್ಷದ ಇತಿಹಾಸದಲ್ಲಿ ನಡೆದುಬಂದಂತಹ ಒಲೆಯ ಕಿಚ್ಚು ಇಂದೂ ಸಹ ಮುಂದುವರೆದಿದೆ, ಬಡ ಮಕ್ಕಳ ಹೊಟ್ಟೆಯ ಹಸಿವಿನ ಕಿಚ್ಚು ತಣ್ಣಗಾಗಿದೆ, ಉತ್ತರ ಕರ್ನಾಟಕದ ಮಕ್ಕಳನ್ನು ಹಲವಾರು ವರ್ಷಗಳಿಂದ ಮಠ ಸಲಹುತ್ತಿದೆ ಎಂದರು.
ಶಿವಕುಮಾರ ಸ್ವಾಮೀಜಿ ಅವರು ದೈವ ಸ್ವರೂಪಿಯೇ ಆಗಿದ್ದಾರೆ, ಸ್ವಾಮಿ ವಿವೇಕಾನಂದರ ಮಾತಿನಂತೆ, ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಸಾಧಕರು ಎಲ್ಲರ ಹೃದಯಾಂತರಾಳದಲ್ಲಿ ಬದುಕುತ್ತಾರೆ, ಅದೇ ರೀತಿ ಶಿವಕುಮಾರ ಸ್ವಾಮಿಗಳು ತಾವು ಮಾಡಿದ ಜನಪರ ಕಾಯಕಗಳ ಮೂಲಕ ಅಮರರೆನಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕಿರಿಯ ಸ್ವಾಮೀಜಿ ಸಿದ್ಧಲಿಂಗ ಶ್ರೀ ಶ್ರೀಮಠದ ಪರಂಪರೆಯನ್ನು ಯೋಗ್ಯ ರೀತಿಯಲ್ಲಿ ಮುನ್ನೆಡೆಸುತ್ತಿದ್ದಾರೆ ಎಂದ ಮುಖ್ಯಮಂತ್ರಿಗಳು, ಅನ್ನ ಅಕ್ಷರ ಆಶ್ರಯವನ್ನು ಅಕ್ಷರಶಃ ಸಿದ್ಧಗಂಗಾ ಮಠದಲ್ಲಿ ಜಾರಿಗೊಳಿಸಿದ ದೇವರು ಡಾ.ಶಿವಕುಮಾರ ಸ್ವಾಮೀಜಿಗಳು ಎಂದರು.
ಶ್ರದ್ಧೆ, ನಿಷ್ಠೆ, ಪರಿಶ್ರಮ ಶಿವಕುಮಾರ ಸ್ವಾಮೀಜಿ ಅವರ ಧ್ಯೇಯವಾಗಿತ್ತು, ಜಾತಿ, ಕುಲ, ಮತದ ಬೇಧವಿಲ್ಲದೆ ಎಲ್ಲಾ ಸಮುದಾಯದ ಜನರನ್ನು ಅವರು ಪ್ರೀತಿಸುತ್ತಿದ್ದರು, ಅವರ ನಡೆ ನುಡಿ ಇಡೀ ನಾಡಿಗೆ ಪ್ರೇರಣೆಯಾಗಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸಿದ್ಧಗಂಗಾ ಫಾರ್ಮಸಿ ಕಾಲೇಜು ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಮಹಾನ್ ಜ್ಞಾನಿಯಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಈ ಜಗತ್ತು ಕಂಡಂತಹ ಒಂದು ಅಚ್ಚರಿಯೆನಿಸಿದ್ದಾರೆ, 8 ದಶಕಗಳ ಕಾಲ ಸಿದ್ಧಗಂಗಾ ಮಠದಲ್ಲಿ ದೇವರ ರೂಪದಲ್ಲಿದ್ದ ಅವರು, ಶೂನ್ಯದಿಂದ ಭವ್ಯವಾದ, ದಿವ್ಯವಾದ ಸೃಷ್ಟಿಯನ್ನು ನಿರ್ಮಾಣ ಮಾಡಿದ್ದಾರೆ, ಶ್ರೀಮಠದ ಅನ್ನ, ಅಕ್ಷರ ಆಶ್ರಯದ ಪ್ರೇರಣೆಯಿಂದ ಆಹಾರ ಭದ್ರತೆ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕಳೆದ 2 ವರ್ಷದಲ್ಲಿ ಕೋವಿಡ್-19ರ ಸಂದರ್ಭದಲ್ಲಿ 80 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಿದೆ ಎಂದರು.
ಕೇಂದ್ರ ಸಚಿವರಾದ ಭಗವಂತ ಖೂಬ ಮಾತನಾಡಿ, ಸಿದ್ಧಗಂಗೆ ವಿಜ್ಞಾನ, ಆಶ್ರಯ ಮತ್ತು ದಾಸೋಹದ ಗಂಗೆ ಎನಿಸಿದೆ ಎಂದು ಶ್ಲಾಸಿದರು.
ಮಠದ ಅಧ್ಯಕ್ಷ ಸಿದ್ಧಲಿಂಗಮಹಾಸ್ವಾಮಿ ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿದ್ದರು. ಸುತ್ತೂರು ವೀರ ಸಂಸ್ಥಾನ ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ ಸಾನಿಧ್ಯವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ, ಸಚಿವರಾ ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು, ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪಠ್ಯದಲ್ಲಿ ಶ್ರೀಗಳ ಜೀವನ ಚರಿತ್ರೆ ಅಳವಡಿಸಿ: ಬಿ.ಎಸ್.ವೈ
ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸುವಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದರು.
ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮೀಜಿ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿ ಕೊಡಲು ಪಠ್ಯದಲ್ಲಿ ಅಳವಡಿಸಬೇಕು ಎಂದು ಕೇಳಿಕೊಂಡರು.

Get real time updates directly on you device, subscribe now.

Comments are closed.

error: Content is protected !!