ನವೀನ್ ಕಿಲಾರ್ಲಹಳ್ಳಿ
ಪಾವಗಡ: ಇತಿಹಾಸದ ಪುಟಗಳಲ್ಲಿ ಈ ಗ್ರಾಮದ ಹೆಸರು ರಾಜಮನೆತನ, ಪಾಳೆಯ ಪಟ್ಟುಗಳಿಂದ ರಾರಾಜಿಸುತ್ತಿದೆ, ಪಲ್ಲವರು, ಚಾಲುಕ್ಯರು, ವಿಜಯನಗರದ ಅರಸರು, ಪಾಳೇಗಾರರು ಹೀಗೆ ಹಲವಾರು ಸಾಮ್ರಾಜ್ಯಗಳು ಆಳ್ವಿಕೆ ನಡೆಸಿ ಕಂಗೊಳಿಸಿದ ಶೌರ್ಯ ಭೂಮಿ ಇಂದು ಅಭಿವೃದ್ಧಿ ಇಲ್ಲದೆ ಅವನತಿಯತ್ತ ಸಾಗುತ್ತಿದೆ.
ಗ್ರಾಮಕ್ಕೆ ಸಾರಿಗೆ ಸಂಪರ್ಕದ ವ್ಯವಸ್ಥೆಯಿಲ್ಲ, ಆರೋಗ್ಯ ಉಪ ಕೇಂದ್ರ, ನ್ಯಾಯಬೆಲೆ ಅಂಗಡಿ, ಸಮರ್ಪಕ ರಸ್ತೆಗೆ ಡಾಂಬರೆ ಕಾಣದೆ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತುಮಕೂರು ಜಿಲ್ಲಾ ಪಾವಗಡ ತಾಲ್ಲೂಕಿನ ನಿಡಗಲ್ ಎಂದರೆ ಅದು ಐತಿಹಾಸಿಕ ತಾಣ ಎಂದು ಎಲ್ಲರೂ ಹೇಳುತ್ತಾರೆ, ನಿಡಗಲ್ ಬೆಟ್ಟವನ್ನು ಒಮ್ಮೆ ನೋಡಬೇಕು ಎಂದು ಮಾತನಾಡುತ್ತಾರೆ, ಆದರೆ ಈ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ, ಇದು ಹೆಸರಿಗಷ್ಟೇ ನಿಡಗಲ್ ಹೋಬಳಿ ಕೇಂದ್ರ, ಇಲ್ಲಿ ಸುಮಾರು 70 ಕ್ಕೂ ಅಧಿಕ ಕುಟುಂಬ, ಸುಮಾರು 485 ಕ್ಕೂ ಅಧಿಕ ಜನಸಂಖ್ಯೆ ವಾಸವಾಗಿರುವ ನಿಡಗಲ್ ಗ್ರಾಮ ವಾಸ್ತವವಾಗಿ ಸರ್ಕಾರದ ಸವಲತ್ತು ಪಡೆಯದ ನತದೃಷ್ಟ ಗ್ರಾಮವಾಗಿ ಉಳಿದಿದೆ.
ಇನ್ನು ಗ್ರಾಮಕ್ಕೆ ಹೊಂದಿಕೊಂಡಿರುವ ದೇವರಾಯನ ರೊಪ್ಪದಲ್ಲಿ ಸುಮಾರು 130 ಕುಟುಂಬಗಳ ಪೈಕಿ ಸುಮಾರು 600 ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ, ನ್ಯಾಯದಗುಂಟೆ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಹೋಬಳಿ ಗ್ರಾಮ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮೂಲಭೂತ ಸೌಕರ್ಯಗಳಿಲ್ಲದೆ ಗ್ರಾಮಸ್ಥರು ಹಾಗೂ ಸುತ್ತಾಮುತ್ತಲ ಹಳ್ಳಿಗಳ ಜನರು ಪರದಾಡುವಂತಹ ಸ್ಥಿತಿ ಉದ್ಭವವಾಗಿದೆ.
ಸಾರಿಗೆ ವ್ಯವಸ್ಥೆ ಇಲ್ಲ
ಪ್ರವಾಸಿಗರಿಗೆ ಹೇಳಿ ಮಾಡಿಸಿದ ಪ್ರದೇಶ ನಿಡಗಲ್ ದುರ್ಗಕ್ಕೆ ಪ್ರತಿದಿನವೂ ನೂರಾರು ಚಾರಣಿಗರು ಬಂದು ಹೋಗುತ್ತಾರೆ, ಆದರೆ ಸಮರ್ಪಕ ಸಾರಿಗೆ ಇಲ್ಲದೆ ತುಂಬಾನೇ ಕಷ್ಟವೆನಿಸುತ್ತಿದೆ, ಈ ಗ್ರಾಮಗಳ ಜನತೆ ವ್ಯಾಪಾರ ವಹಿವಾಟು ನಡೆಸಲು 8 ಕಿ.ಮೀ ದೂರದಲ್ಲಿರುವ ಲಿಂಗದಹಳ್ಳಿ ಇಲ್ಲ, ಅರಸೀಕೆರೆ, 30 ಕಿ.ಮೀ ದೂರದ ಪಾವಗಡಕ್ಕೆ ಹೋಗಬೇಕು, ಆದರೆ ಸರಿಯಾದ ಸಮಯಕ್ಕೆ ತಲುಪಲು ಸಾರಿಗೆ ವ್ಯವಸ್ಥೆಯಿಲ್ಲದೆ ದಿನಾಲು ಯಾತನೆ ಅನುಭವಿಸುವಂತಾಗಿದೆ, ಇಲ್ಲ ಖಾಸಗಿ ಆಟೋಗಳನ್ನ ಗೊತ್ತು ಮಾಡಿಕೊಂಡು ದುಬಾರಿ ಬೆಲೆ ತೆತ್ತು ಬರಬೇಕಿದೆ.
ಈಗಾಗಲೇ ಸಾರಿಗೆ ಇಲಾಖಾಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದು ಎಷ್ಟೇ ಬಾರಿ ಮನವಿ ಮಾಡಿದರೂ ಪ್ರಯೋಜನವಾಗದೆ ನಿರ್ಲಕ್ಷ್ಯಕ್ಕೊಳಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದರು.
ಇನ್ನು ಗ್ರಾಮ, ನೆರೆ ಹೊರೆಯ ಗ್ರಾಮದ ಮಂದಿ ಕೂಲಿ ನಾಲಿ ಮಾಡಿ ಬದುಕು ದೂಡುತ್ತಿದ್ದಾರೆ, ಅದರ ನಡುವೆಯೂ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು ನ್ಯಾಯದಗುಂಟೆ, ಹೊಸಹಳ್ಳಿ, ಅರಸೀಕೆರೆ, ಲಿಂಗದಹಳ್ಳಿ, ಪಾವಗಡ ಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ಕಳುಹಿಸುತ್ತಿದ್ದಾರೆ, ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಆಟೋಗಳನ್ನೆ ಆಶ್ರಯಿಸಬೇಕಿದೆ, ದುರಾದೃಷ್ಟಕರ ಸಂಗತಿಯೆಂದರೆ ಡಿಸೇಲ್, ಪೆಟ್ರೋಲ್ ಬೆಲೆ ದುಪ್ಪಟ್ಟಾದ ಮೇಲೆ ಆಟೋಗಳು ಬರುವುದನ್ನೆ ನಿಲ್ಲಿಸಿವೆ, ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿ ಶಾಲೆಯನ್ನೇ ಬಿಡುವಂತ ಡೋಲಾಯಮಾನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಹಾಗೂ ನಿಡಗಲ್ ಗ್ರಾಮಸ್ಥರು ಅಲವತ್ತುಕೊಳ್ಳುತ್ತಿದ್ದಾರೆ.
ಹದಗೆಟ ರಸ್ತೆಗಳು
ನಿಡಗಲ್ನಿಂದ ಬೆಳ್ಳಿಬಟ್ಟಲು ಮೂಲಕ ಚಿತ್ರದುರ್ಗ ಮುಖ್ಯ ರಸ್ತೆಗೆ ಸಂಪರ್ಕ ನೀಡುವ ರಸ್ತೆ ಹದಗೆಟ್ಟು ಅನೇಕ ಅಪಘಾತ ಸಂಭವಿಸಿದ್ದವು, ಈಗ ಅದಕ್ಕೆ ಮುಹೂರ್ತ ಕೂಡಿ ಬಂದು ಡಾಂಬರು ಕಂಡಿದೆ, ಹಾಗೆಯೆ ನಿಡಗಲ್, ದೇವರಾಯನ ರೊಪ್ಪದಿಂದ ಎಸ್.ಆರ್.ಪಾಳ್ಯ, ಅರಸೀಕೆರೆಗೆ ಸಂಪರ್ಕ ಕೊಡುವ ರಸ್ತೆಯ ಡಾಂಬರು ಕಿತ್ತುಬಂದು ಜಲ್ಲಿ ಕಲ್ಲುಗಳು ತೇಲಿ ಬಂದಿವೆ. ಈ ಕಿತ್ತೋದ ರಸ್ತೆಯಲ್ಲಿ ಪ್ರಯಾಣಿಸುವ ಬಹಳಷ್ಟು ಮಂದಿ ಆಯಾತಪ್ಪಿ, ಚಕ್ರಕ್ಕೆ ಕಲ್ಲುಗಳು ಸಿಕ್ಕಿ ಹಾಕಿಕೊಂಡು ಬಿದ್ದಿರುವ ಘಟನೆಗಳು ಸಾಕಷ್ಟು ನಡೆದಿವೆ ಎನ್ನುತ್ತಾರೆ ಮುಖಂಡರಾದ ಮಹಾರಾಜು, ಶಿವಣ್ಣ.
ಚುನಾವಣೆ ಬಹಿಷ್ಕರಿಸಿದ ಘಟನೆ
2014 ರಲ್ಲಿ ನಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ನಿಡಗಲ್ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ಮತಹಾಕದೆ ಬಹಿಷ್ಕರಿಸಿದ ಘಟನೆ ನಡೆದಿತ್ತು, ಆಗ ಕೆಲವೊಂದಿಷ್ಟು ರಾಜಕಾರಣಿಗಳು ಅಭಿವೃದ್ಧಿಯ ಸಾಗರವನ್ನೇ ಹರಿಸಿ ಬಿಡ್ತೇವೆ ಎಂದು ಹೇಳಿದ ಮಾತುಗಳನ್ನು ನಂಬಿದ ಗ್ರಾಮಸ್ಥರು ಚುನಾವಣೆಯನ್ನು ಗೌರವಿಸಿದ್ದರು, ಆದರೆ ಇಂದಿಗೂ ಸಾರಿಗೆ, ಆಗೋಗ್ಯ ಕೇಂದ್ರ ಸೇರಿದಂತೆ ಹಲವು ಉಪಯುಕ್ತ ಯೋಜನೆಗಳೇ ಜಾರಿಯಾಗಿಲ್ಲ, ಭರವಸೆ ಕೊಟ್ಟು ಗೆದ್ದವರು ಇತ್ತ ತಿರುಗಿಯೂ ನೋಡುತ್ತಿಲ್ಲ.
Comments are closed.