ತುಮಕೂರು: ಈ ನೆಲದ ಶೂದ್ರ ಧರ್ಮವನ್ನು ವಿಕಾರವಾಗಿ ಬಿಂಬಿಸುವ ಅನೇಕ ದುಷ್ಟ ಸಮೀಕರಣಗಳನ್ನು ಈಗ ಹಿಂದೂ ಧರ್ಮದ ಹೆಸರಿನಲ್ಲಿ ಮುನ್ನೆಲೆಗೆ ತರಲಾಗುತ್ತಿದೆ, ಇದರಿಂದಾಗಿ ಕೇವಲ ರಾಜ್ಯ, ರಾಷ್ಟ್ರವಷ್ಟೇ ಅಲ್ಲ ಇಡೀ ವಿಶ್ವಮಟ್ಟದಲ್ಲಿ ನಮ್ಮನ್ನು ಜನಾಂಗ ವಾದಿಗಳೆಂಬಂತೆ ತೋರಿಸಲಾಗುತ್ತಿದೆ ಎಂದು ಕರ್ನಾಟಕ ಶೂದ್ರ ದಲಿತ ಧರ್ಮ ವೇದಿಕೆ ಆತಂಕ ವ್ಯಕ್ತ ಪಡಿಸಿದೆ.
ತುಮಕೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಮುಖಂಡರು, ಈ ತಾಯಿ ಭೂಮಿಯು ಎಲ್ಲರಿಗೆ ಸೇರಿದ್ದು,ಇಲ್ಲಿ ಎಲ್ಲರಿಗೂ ಬಾಳುವ ಹಕ್ಕಿದೆ, ಯಾವ ಜೀವಿಯ ಬದುಕನ್ನೂ ಕಿತ್ತುಕೊಳ್ಳುವುದನ್ನು, ಇಲ್ಲಿಂದ ಆಚೆಗೆ ನೂಕುವುದನ್ನುಯಾವ ಧರ್ಮವೂ ಹೇಳುವುದಿಲ್ಲ, ಶೂದ್ರ ಧರ್ಮ ಅದನ್ನು ಎಂದೂಮಾಡಿಲ್ಲ, ಮುಂದೂ ಮಾಡಬಾರದು ಎಂದರು.
ಈ ನೆಲದಲ್ಲಿ ಬದುಕಿ ಬಾಳಿದ, ಬಾಳುತ್ತಿರುವ ಬೌದ್ಧ, ನಾಥ, ಸಿದ್ಧ, ವಚನ, ಅಚಲ, ಜೈನ, ಸೂಫಿ ಮುಂತಾದ ಅನೇಕ ಧರ್ಮ, ಪಂಥಗಳನ್ನು ಶೂದ್ರಧರ್ಮ ಬಾಳಿಸುತ್ತ ಬೆಳೆಸುತ್ತ ಬಂದಿದೆ, ಧರ್ಮದಕಾರಣಕ್ಕೆ, ವೃತ್ತಿಯ ಕಾರಣಕ್ಕೆ, ಜಾತಿಯ ಕಾರಣಕ್ಕೆ ಈ ನೆಲದ ಧರ್ಮವು ಯಾರ ಬದುಕನ್ನೂ ಕಿತ್ತುಕೊಂಡಿಲ್ಲ, ಕೆಲವು ಧರ್ಮಗಳನ್ನು ಈ ನೆಲ ವಿಶ್ವದ ಅನೇಕ ಭಾಗಗಳಿಗೆ ನೀಡಿದೆ ಎಂದು ಹೇಳಿದರು.
ಲಿಂಗಾಯಿತರು, ಒಕ್ಕಲಿಗರು, ಬೇಡರು, ಬೆಸ್ತರು, ದಲಿತರು, ಉಪ್ಪಾರರು, ಗಾಣಿಗರು, ಕುರುಬರು, ಲಂಬಾಣಿಗಳು, ಬಲಿಜಿಗರು, ನೇಕಾರರು, ಕೊರಮರು, ಕೊರಚರು, ಗೊಲ್ಲರು, ದಕ್ಕಲರು ಮುಂತಾದ ಈ ಎಲ್ಲಾ ಹದಿನೆಂಟು ಕೋಮಿನವರ ಧರ್ಮವೇ ಈ ನೆಲದಧರ್ಮ, ಇವುಗಳನ್ನು ಹಿಂದೂ ಧರ್ಮದ ಜಾತಿಗಳು ಎಂದು ಕೆಲವರು ಸುಮಾರು ಇನ್ನೂರು ವರುಷಗಳ ಹಿಂದೆ ಕರೆದುಕೊಂಡರು, ಅದಕ್ಕೆ ಮೊದಲು ಹಿಂದೂ ಎಂಬ ಹೆಸರಿನ ಯಾವ ಧರ್ಮವೂ ಇರಲಿಲ್ಲ, ಕೇವಲ ಜಾತಿಗಳು ಮಾತ್ರ ಇದ್ದವು, ಇವುಗಳಿಗೆ ಸಮಾನ ದೈವಗಳು, ಹಬ್ಬ ಹರಿ ದಿನಗಳು, ಆಹಾರ ಸಂಸ್ಕøತಿ ಇತ್ತು ಮತ್ತು ಈಗಲೂ ಇದೆ, ಈ ಎಲ್ಲ ಕೋಮಿನ ಜನರ ಧರ್ಮವೇ ಈ ನೆಲದಧರ್ಮ, ಈ ನೆಲದಲ್ಲಿ ಬ್ರಾಹ್ಮಣ ಧರ್ಮವೂ ಸಾವಿರಾರು ವರುಷಗಳಿಂದ ಇದೆ ಎಂದು ತಿಳಿಸಿದರು.
ಈ ನೆಲದ ಶೂದ್ರ ದಲಿತ ಧರ್ಮವು ಎಂದೂ ಬದುಕಿನ ಸಾಮರಸ್ಯ ಕೆಡಿಸುವ ದುಷ್ಟ ನಡೆಗಳನ್ನು ನಡೆದಿಲ್ಲ, ನಮ್ಮ ಶೂದ್ರ ದಲಿತ ಧರ್ಮಕ್ಕೆ ಇರುವ ಒಳ್ಳೆಯ ಹೆಸರನ್ನು ನಾವು ಕಾಪಾಡಿಕೊಳ್ಳಲೇಬೇಕಾದ ಅಗತ್ಯ ಇದೀಗ ನಮ್ಮ ಎದುರಿಗೆ ಬಂದಿದೆ, ಅನ್ನ ತಿನ್ನುವ ಎಲ್ಲಾ ಮನುಷ್ಯರ ವಿವೇಕ ಈಗ ಜಾಗೃತವಾಗಬೇಕಾಗಿದೆ ಎಂದರು.
ನಾವು ಬದುಕುತ್ತಿರುವ ಕಾಡಿಗೆ ಬೆಂಕಿ ಇಟ್ಟು ಅಲ್ಲಿಯೇ ಸುಖವಾಗಿ ಇರುತ್ತೇವೆಂಬುದು ಅವಿವೇಕ, ನಾವು ಎಲ್ಲರ ಜೊತೆಗೆ ಸಾಮರಸ್ಯದಿಂದ ಬದುಕಿದಾಗಲೇ ಎಲ್ಲರಿಗೂ ಒಳಿತಾಗುತ್ತದೆ ಎಂಬ ಸಂದೇಶವನ್ನುಜಗತ್ತಿಗೆ ಸಾರಬೇಕಾಗಿದೆ, ಬಸವ, ಅಲ್ಲಮ, ಅಕ್ಕ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಕಡಕೋಳ ಮಡಿವಾಳಪ್ಪ, ಕೈವಾರ ತಾತಯ್ಯ, ಶಿಶುನಾಳ ಶರೀಫ ಮುಂತಾದ ಸಂತರು, ಕುವೆಂಪು, ಬೇಂದ್ರೆ, ಮುಂತಾದ ಮಹಾನ್ ಲೇಖಕರು, ಬಿ.ಆರ್.ಅಂಬೇಡ್ಕರ್, ಲೋಹಿಯಾ, ನೆಹರೂ ಮುಂತಾದ ತಾತ್ವಿಕರು, ದೇವರಾಜ ಅರಸು, ಶಾಂತವೇರಿ ಗೋಪಾಲ ಗೌಡ ಮುಂತಾದ ರಾಜಕಾರಣಿಗಳು ಈ ಆದರ್ಶವನ್ನು ನಮ್ಮ ಮುಂದಿಟ್ಟಿದ್ದಾರೆ, ಅವರೆಲ್ಲರ ಆಶಯಗಳನ್ನು ಮಣ್ಣುಪಾಲು ಮಾಡಿ ನಮ್ಮನ್ನು ನಾವು ಅಪಮಾನಿಸಿಕೊಳ್ಳುತ್ತಿದ್ದೇವೆ, ಆದುದರಿಂದ ನಮಗೆ ಈ ಎಲ್ಲರ ಆದರ್ಶವನ್ನು ಪುನರ್ ಸ್ಥಾಪಿಸಬೇಕಾಗಿದೆ, ಈ ನೆಲವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ನಟರಾಜ ಬೂದಾಳು, ಕೆ.ದೊರೈರಾಜು, ಜಿ.ವಿ.ಆನಂದಮೂರ್ತಿ, ಡಾ.ಬಸವರಾಜು, ಎಸ್.ಗಂಗಾಧರಯ್ಯ, ನಟರಾಜ ಹೊನ್ನವಳ್ಳಿ, ಮನು ಚಕ್ರವರ್ತಿ, ಉಜ್ಜಜ್ಜಿ ರಾಜಣ್ಣ, ಕೊಟ್ಟಶಂಕರ್ ಇತರರು ಇದ್ದರು.
ಹಿಂದೂ ಧರ್ಮದ ಹೆಸರಿನಲ್ಲಿ ದುಷ್ಟ ಸಮೀಕರಣ ಬೇಡ
Get real time updates directly on you device, subscribe now.
Next Post
Comments are closed.