169

Get real time updates directly on you device, subscribe now.

ಕವಿ ಕಾದಂಬರಿಕಾರ, ವಿದ್ಯುತ್ ಕ್ಷೇತ್ರದ ತಜ್ಞ ಡಾ.ಗಜಾನನ ಶರ್ಮ ಅವರು ವಿದ್ಯುತ್ ಇಲಾಖೆಯಲ್ಲಿಯೇ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರು. ಪ್ರಧಾನಿ ಮೋದಿಯವರು ಇಂದು ರಾತ್ರಿ 9ಕ್ಕೆ ವಿದ್ಯುತ್ ದೀಪ ಆರಿಸಿ ದೀಪ ಬೆಳಗಿಸಲು ನೀಡಿದ ಕರೆಯ ಹಿನ್ನಲೆಯಲ್ಲಿ ದೇಶಾದ್ಯಂತ ವಿದ್ಯುತ್ ಗ್ರಿಡ್ ನ ಕುರಿತು ಸಾಕಷ್ಟು ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ತಜ್ಞರ ಅಭಿಪ್ರಾಯ ಇಲ್ಲಿದೆ.

ವಿದ್ಯುತ್ ಜಾಲವೊಂದು ತನ್ನ ನಿಶ್ಚಿತ ವೋಲ್ಟೇಜ್ ಮತ್ತು ಫ್ರೀಕ್ವೆನ್ಸಿ ಮಿತಿಯಲ್ಲಿ ಸುಗಮವಾಗಿ ನಡೆಯುತ್ತಿದ್ದಾಗ ಹಠಾತ್ ಲೋಡ್ ಕುಸಿಯುವ ಅಥವಾ ಹೆಚ್ಚಳವಾಗುವ ಸಂದರ್ಭದಲ್ಲಿ ಅದು ಇಡೀ ಜಾಲಕ್ಕೆ ಹಾನಿಯೊಡ್ಡದಂತೆ ಉಸ್ತುವಾರಿ ಕಾರ್ಯನಿರ್ವಹಿಸುವುದು ಸಹಜ ಪ್ರಕ್ರಿಯೆ. ಅಕಸ್ಮಾತ್ ಸಣ್ಣಪುಟ್ಟ ವ್ಯತ್ಯಯಗಳು ಉಂಟಾದರೂ ಅದು ಗ್ರಾಹಕನ ಪ್ರಾಂಗಣವನ್ನು ತಲುಪುವ ಮೊದಲು ಅದನ್ನು ಪೂರ್ವಸ್ಥಿತಿಗೆ ತರಲಾಗುತ್ತದೆ.
ಪ್ರತಿಯೊಂದು ದೇಶದ ವಿದ್ಯುತ್ ಜಾಲವೂ, ರಾಷ್ಟ್ರಮಟ್ಟದಲ್ಲಿ ಒಂದು ವಿದ್ಯುತ್ ರವಾನೆ ಕೇಂದ್ರವನ್ನೂ, ಪ್ರತಿ ವಲಯಕ್ಕೊಂದರಂತೆ ದೇಶದ ವಿವಿಧ ವಲಯದಲ್ಲಿ (ನಮ್ಮ ದೇಶದಲ್ಲಿ ಐದು ) ಪ್ರಾದೇಶಿಕ (ರೀಜನಲ್) ವಿದ್ಯುತ್ ರವಾನೆ ಕೇಂದ್ರಗಳನ್ನೂ, ಪ್ರತಿಯೊಂದು ರಾಜ್ಯವು ರಾಜ್ಯ ವಿದ್ಯುತ್ ರವಾನೆ ಕೇಂದ್ರವನ್ನೂ ಅದರಡಿಯಲ್ಲಿ ಕೆಲವು ಪ್ರಾಂತ್ಯ ವಿದ್ಯುತ್ ರವಾನೆ ಕೇಂದ್ರಗಳನ್ನೂ ಹೊಂದಿರುತ್ತವೆ. ಈ ರವಾನೆ ಕೇಂದ್ರಗಳ ಜವಾಬ್ಧಾರಿಗಳು ಏನೆಂದರೆ, ಅವು ತಮ‌್ಮ ತಮ್ಮ ವ್ಯಾಪ್ತಿ ಮತ್ತು ಮಿತಿಯಲ್ಲಿ ಒಟ್ಟಾರೆ ಇಡೀ ದೇಶದ ವಿದ್ಯುತ್ ಜಾಲವು ತನ್ನ ನಿಶ್ಚಿತ ಫ್ರೀಕ್ವೆನ್ಸಿ ಮತ್ತು ವೋಲ್ಟೇಜಿನ ಪರಿಮಿತಿಯಲ್ಲಿ ದೇಶದ ಗ್ರಾಹಕರಿಗೆ ನಿರಂತರವಾಗಿ ವಿದ್ಯುತ್ ಒದಗಿಸುವ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು. ಭಾರತದಂತಹ ವಿಶಾಲ ಭೂಪ್ರದೇಶ ಮತ್ತು ಬೃಹತ್ ಸಂಖ್ಯೆಯ ವಿದ್ಯುತ್ ಗ್ರಾಹಕರನ್ನು ಹೊಂದಿರುವ ದೇಶದಲ್ಲಿ ವಿದ್ಯುತ್ ಜಾಲದ ಸಮರ್ಥ ನಿರ್ವಹಣೆ ಒಂದು ಸವಾಲಿನ ಕೆಲಸ. ವಿದ್ಯುತ್ ಜಾಲವೆಂದರೆ ಅದೊಂದು ಅತ್ಯಂತ ಚಲನಶೀಲ ವ್ಯವಸ್ಥೆ. ಪ್ರತಿಕ್ಷಣವೂ ಕೋಟ್ಯಂತರ ದೀಪಗಳು ಹೊತ್ತಿಸಲ್ಪಡುತ್ತಿರುತ್ತವೆ, ಆರಿಸಲ್ಪಡುತ್ತಿರುತ್ತವೆ. ಕೋಟ್ಯಂತರ ಪಂಪ್ ಸೆಟ್ಟುಗಳು ಆನ್ ಅಥವಾ ಆಫ್ ಆಗುತ್ತಿರುತ್ತವೆ. ಕಛೇರಿ, ಮೆಟ್ರೋ, ಕೈಗಾರಿಕೆ, ಆಸ್ಪತ್ರೆ, ವಿಮಾನ ನಿಲ್ದಾಣ.. ಎಲ್ಲವೂ ವಿದ್ಯುತ್ ಬೇಕೆಂದಾಗ ಬಳಸುತ್ತ ಬೇಡವೆಂದಾಗ ಸ್ಥಗಿತಗೊಳಿಸುತ್ತಿರುತ್ತವೆ. ದೇಶಾದ ಸಾವಿರ ಸಾವಿರ ಸಂಖ್ಯೆಯ ಜಲ, ಅಣು, ಉಷ್ಣ, ಡೀಸೆಲ್ , ಸೌರ, ಇಷ್ಟೇ ಅಲ್ಲದೆ ಬಯೋಮಾಸ್, ಗ್ಯಾಸ್ ಟರ್ಬೈನ್.. ಹೀಗಿ ಹಲವು ಬಗೆಯ ವಿದ್ಯುತ್ ಘಟಕಗಳು ತಮ್ಮ ತಮ್ಮ ಸಾಮರ್ಥ್ಯಕ್ಕೆ ಒಳಪಟ್ಟು ವಿದ್ಯುತ್ ಉತ್ಪಾದಿಸುತ್ತಿರುತ್ತವೆ ಮತ್ತು ತಮ್ಮದೇ ಆದ ಕಾರಣಗಳಿಂದ ( ನೀರಿನ ಕೊರತೆ, ಕಲ್ಲಿದ್ದಲಿನ ಕೊರತೆ, ಆರ್ಥಿಕ ಸಮಸ್ಯೆ, ತಾಂತ್ರಿಕ ಸಮಸ್ಯೆಗಳಿಂದಾಗಿ) ಸ್ಥಗಿತಗೊಳ್ಳುತ್ತಿರುತ್ತವೆ.
ಇನ್ನು ವಿದ್ಯುತ್ ಪ್ರಸರಣಮಾರ್ಗಗಳದಂತೂ ಅತಿದೊಡ್ಡ ಜಾಲ. ಅವುಗಳಂತೂ ದೇಹದ ರಕ್ತಪರಿಚಲನೆ ನಡೆಸುವ ರಕ್ತನಾಳಗಳಂತೆ ಇಡೀ ದೇಶದ ಉದ್ದಗಲಕ್ಕೂ ವಿವಿಧ ವೋಲ್ಟೇಜ್ ಮಟ್ಟದಲ್ಲಿ, 750 KV, 400KV, 220 KV, 110 KV, 66KV, 33 KV ಮಟ್ಟದಲ್ಲಿ ಎ ಸಿ ವಿದ್ಯುತ್ ಮಾರ್ಗಗಳು ಮತ್ತು 500, 800 KV ಮಟ್ಟದಲ್ಲಿ ಡಿ ಸಿ ವಿದ್ಯುತ್ ಮಾರ್ಗಗಳೂ ಸೇರಿ ಒಟ್ಟು ಲಕ್ಷಾಂತರ ಕಿಲೋಮೀಟರುಗಳ ಉದ್ದಕ್ಕೆ ಹಬ್ಬಿ ವಿದ್ಯುತ್ ಉತ್ಪಾದನಾ ಸ್ಥಾವರಗಳಿಂದ ಉಪಸ್ಥಾವರಗಳಿಗೆ ವಿದ್ಯುತ್ ಪ್ರಸರಣೆ ಮಾಡುತ್ತಿರುತ್ತವೆ. ಅಲ್ಲಿಂದ ವಿತರಣಾ ಮಾರ್ಗಗಳು 11 KV ಮತ್ತು 400 ವೋಲ್ಟ್ಸ್ ಸೆಕೆಂಡರಿ ಮಾರ್ಗಗಳಲ್ಲಿ ಬೀದಿ ಬೀದಿಗಳಿಗೆ ಮನೆ ಮನೆಗಳಿಗೆ ವಿದ್ಯುತ್ ಹರಿಸುತ್ತಿರುತ್ತವೆ..
ಆದರೆ ಪ್ರತಿದಿನ, ಪ್ರತಿಕ್ಷಣ ನಮ್ಮ ದೇಹದಲ್ಲಿ ನಿರಂತರ ರಕ್ತಪರಿಚಲನೆ ನಡೆಯುತ್ತಿರುವಂತೆ ದೇಶದ ವಿದ್ಯುತ್ ಜಾಲವೂ ಕೂಡ ಅನುಕ್ಷಣ ಚಾಲನೆಯಲ್ಲೇ ಇರುತ್ತದೆ, ಇರಲೇಬೇಕು. (ಗ್ರಾಹಕರಿಗೆ ಮಧ್ಯೆ ಮಧ್ಯೆ ವಿದ್ಯುತ್ ಅಡಚಣೆ ಆಗುತ್ತಿರುತ್ತದೆ. ಅದು ಭಾಗಶಃ ಆಯಾ ಪ್ರದೇಶಗಳಲ್ಲಿ ಸ್ಥಗಿತಗೊಳ್ಳುವ/ ಸ್ಥಗಿತಗೊಳಿಸುವ ಕಾರಣದಿಂದಲೇ ಹೊರತು ಒಟ್ಟೂ ವಿದ್ಯುತ್ ಜಾಲ ಕುಸಿದ ಉದಾಹರಣೆಗಳು ಇತ್ತೀಚೆಗೆ ಅಪರೂಪ) ಕಳೆದ ಹಲವು ವರ್ಷಗಳಿಂದಲಂತೂ ನಮ್ಮ ರಾಷ್ಟ್ರೀಯ ವಿದ್ಯುತ್ ಜಾಲ ಕುಸಿದ ಉದಾಹರಣೆಗಳೇ ಇಲ್ಲ. ಅದರಲ್ಲೂ 2013 ರಲ್ಲಿ ರಾಯಚೂರು ಸೋಲಾಪುರ್ 750 ಕೆ ವಿ ಪ್ರಸರಣ ಮಾರ್ಗದ ಚಾಲನೆಯೊಂದಿಗೆ ‘ರಾಷ್ಟ್ರೀಯ ವಿದ್ಯುತ್ ಜಾಲ’ (One Nation One grid) ಶುಭಾರಂಭಗೊಂಡ ನಂತರವಂತೂ ದೇಶದ ವಿದ್ಯುತ್ ಜಾಲ ಸರ್ವಸುಭದ್ರವಾಗಿದೆ. ಜೊತೆಗೆ ಬಹುತೇಕ ರಾಜ್ಯ, ವಲಯ ಮತ್ತು ರಾಷ್ಟ್ರೀಯ ವಿದ್ಯುತ್ ರವಾನೆ ಕೇಂದ್ರಗಳೂ, ನೂತನ ‘ ಸ್ಕಾಡಾ’ ( SCADA), DSM ಮುಂತಾದ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಮುಂದುವರೆದ ದೇಶಗಳ ವ್ಯವಸ್ಥೆಗೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿದೆ.

ಇಂದುರಾತ್ರಿ ಒಂಬತ್ತು ಗಂಟೆಗೆ ಒಟ್ಟಿಗೇ ದೀಪ ಆರಿಸಿದರೆ
ವಿದ್ಯುತ್ ಜಾಲ ಏನಾಗಬಹುದು?

ಇಂದು ರಾತ್ರಿ ಏನಾಗಬಹುದು ಎಂದು ವಿಶ್ಲೇಷಿಸುವ ಮೊದಲು ನಮ್ಮ ದೇಶದ ವಿದ್ಯುತ್ ಸಾಮರ್ಥ್ಯದ ಕುರಿತು ಗಮನಹರಿಸೋಣ. ಸೌರ ಮತ್ತು ಪವನ ವಿದ್ಯುತ್ ಸ್ಥಾವರಗಳೂ ಸೇರಿದಂತೆ ನಮ್ಮ ದೇಶದ ವಿದ್ಯುತ್ ಸ್ಥಾಪಿತ ಸಾಮರ್ಥ್ಯ 3,68,960 ಮೆ ವಾಟ್. ನಮ್ಮ ದೇಶದ ಒಟ್ಟೂ ಗೃಹಬಳಕೆ ಗ್ರಾಹಕರ ಸಂಖ್ಯೆ ಗ್ರಾಮೀಣ: 171364502, ನಗರ : 43108539. ಅಂದರೆ ಒಟ್ಟು ಇಪ್ಪತ್ತೊಂದು ಕೋಟಿ ನಲವತ್ನಾಲ್ಕು ಲಕ್ಷದ ಎಪ್ಪತ್ಮೂರು ಸಾವಿರದ ನಲವತ್ತೊಂದು. ಈ ಎಲ್ಲ ಗ್ರಾಹಕರು ಬಳಸುವ ಒಟ್ಟು ಲೈಟಿಂಗ್ ಲೋಡ್ ಸುಮಾರು 12,879 M W ಗಳು.
ಕಳೆದ ಭಾನುವಾರ ಅಂದರೆ ಮಾರ್ಚ್ 29ರ ಭಾನುವಾರ ನಮ್ಮ ರಾಷ್ಟ್ರೀಯ ವಿದ್ಯುತ್ ಜಾಲದ ಒಟ್ಟು ಬೇಡಿಕೆ, (ಈಗ ಕೊರೋನಾ ಕಾರಣದಿಂದ ಲಾಕ್ ಡೌನ್ ಜಾರಿಯಾದ ಕಾರಣದಿಂದ) ಸಂಜೆ ಆರಕ್ಕೆ 1,01,207 ಮೆಗಾವಾಟ್ ಇದ್ದದ್ದು ಅದು ರಾತ್ರಿ ಒಂಬತ್ತಕ್ಕೆ 1,12,551 ಮೆಗಾವಾಟಿಗೆ ಹೆಚ್ಚಳವಾಗಿತ್ತು. ಈಗ ನಮ್ಮ ದೇಶದ ದೀಪದ ಬಳಕೆ ವಿದ್ಯುತ್ತಿನ ಪ್ರಮಾಣವನ್ನು ಶೇಕಡ ಹತ್ತು ಎಂದು ಬಗೆದರೂ ( ಅಂತರಾಷ್ಟ್ರೀಯ ಮಟ್ಟ :ಶೇಕಡ ಹದಿಮೂರು. ಭಾರತದ ಸರಾಸರಿ : ಶೇಕಡಾ ಹದಿನೆಂಟು. ಆದರೆ ನಾಳೆ ಬೀದಿ ದೀಪ ಕಛೇರಿ ದೀಪಗಳನ್ನು ಆರಿಸುವ ಪ್ರಸ್ತಾಪ ಇಲ್ಲದೆ ಇರುವುದರಿಂದ ಶೇಕಡ ಹತ್ತರಷ್ಟು ಎಂದು ಭಾವಿಸಿದರೆ ಕುಸಿತ ಕೇವಲ ಹನ್ನೆರಡೂವರೆ ಸಾವಿರ ಮೆಗಾವಾಟುಗಳಷ್ಟೆ. ಇಷ್ಟು ಪ್ರಮಾಣದ ಹಠಾತ್ ಏರಿಕೆ ಮತ್ತು ಕುಸಿತವನ್ನು ತಡೆಯುವುದು ಭಾರತದಂತಹ ಬೃಹತ್ ವಿದ್ಯುತ್ ಜಾಲಕ್ಕೆ ದೊಡ್ಡ ಸವಾಲೇನಲ್ಲ.
ಹಾಗೆಯೇ ಕರ್ನಾಟಕ ವಿದ್ಯುತ್ ಜಾಲವನ್ನು ಗಮನಿಸಿದರೆ ಪ್ರಸ್ತುತ ನಮ್ಮ ಶೃಂಗಬೇಡಿಕೆಯೂ ಹತ್ತು ಸಾವಿರ ಮೆಗಾವಾಟಿನ ಆಸುಪಾಸಿನಲ್ಲಿದ್ದು, ಅದರ ಶೇಕಡಾ ಹತ್ತು ಭಾಗ ಎಂದರೆ ಒಂದು ಸಾವಿರ ಮೆಗಾವಾಟ್ ಏರಿಕೆ ಮತ್ತು ಕುಸಿತ ಉಂಟಾದೀತು( ಇದು ಅತಿ ಹೆಚ್ಚು ಪ್ರಮಾಣದ ಅಂದಾಜು).

ವೋಲ್ಟೇಜ್ ಮತ್ತು ಫ್ರೀಕ್ವೆನ್ಸಿ ಏರಿಳಿತ ತಡೆಯಲು
ಯಾವ ಮಾರ್ಗ ಅನುಸರಿಸಬೇಕು?

ವಿದ್ಯುತ್ ಜಾಲದಲ್ಲಿ ಇದ್ದಕ್ಕಿದ್ದಂತೆ ಹೊರೆ ಕುಸಿದರೆ, ಯಾವುದೋ ಪ್ರಮುಖ ಪ್ರಸರಣ ಮಾರ್ಗ ಸ್ಥಗಿತಗೊಂಡರೆ, ಯಾವುದೋ ಬೃಹತ್ ಉದ್ಯಮದಲ್ಲಿ ಆಂತರಿಕ ಕಾರಣದಿಂದ ಹಠಾತ್ ಹೊರೆ ಕಡಿಮೆಯಾದರೆ, ಅಥವಾ ಗಲಬೆ, ಆಕಸ್ಮಿಕಗಳ ಕಾರಣದಿಂದ ಒಂದಿಡೀ ನಗರ ಪಟ್ಟಣ ಅಥವಾ ಪ್ರಾಂತ್ಯದ ವಿದ್ಯುತ್ ಸ್ಥಗಿತಗೊಳಿಸಲು ಆಡಳಿತ ಆದೇಶ ನೀಡಿದರೆ, ಅಥವಾ ವಿದ್ಯುತ್ ಕೊರತೆ ಕಾರಣದಿಂದ ಲೋಡ್ ಶೆಡ್ಡಿಂಗ್ ಮಾಡಿದರೆ, ಅಂತಹ ಸಂದರ್ಭದಲ್ಲಿ ಜಾಲದ ಫ್ರೀಕ್ವೆನ್ಸಿ ಹೆಚ್ಚಾಗುತ್ತದೆ. ವೋಲ್ಟೇಜ್ ಕೂಡ ಏರಿಕೆಯಾಗುತ್ತದೆ. ಅದೇ ತರಹ ಶರಾವತಿ ಅಥವಾ ರಾಯಚೂರಿನಂತಹ ವಿದ್ಯುತ್ ಸ್ಥಾವರವೊಂದು ಇದ್ದಕ್ಕಿದ್ದಂತೆ ಸ್ಥಗಿತಗೊಂಡರೆ, ಅಥವಾ ವಾತಾವರಣ ಹಠಾತ್ ಏರಿಳಿತದಿಂದ ಗಾಳಿ ಹೆಚ್ಚಾಗಿ ಬೀಸತೊಡಗಿ ಎಲ್ಲ ಪವನ ವಿದ್ಯುತ್ ಸ್ಥಾವರಗಳೂ ಒಟ್ಟಿಗೇ ಉತ್ಪಾದನೆ ಆರಂಭಿಸಿದರೆ ವಿದ್ಯುತ್ ವೋಲ್ಟೇಜ್ ಮತ್ತು ಫ್ರೀಕ್ವೆನ್ಸಿಗಳು ಏರ ತೊಡಗುತ್ತವೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಜಾಲ ನಿರ್ವಹಣೆಯ ನಿರಂತರ ಉಸ್ತುವಾರಿಯಲ್ಲಿರುವ ರಾಜ್ಯ ವಿದ್ಯುತ್ ರವಾನೆ ಕೇಂದ್ರ, ವಲಯ ವಿದ್ಯುತ್ ರವಾನೆ ಕೇಂದ್ರ ಮತ್ತು ರಾಷ್ಟ್ರೀಯ ವಿದ್ಯುತ್ ರವಾನೆ ಕೇಂದ್ರಗಳು ವೋಲ್ಟೇಜ್ ಮತ್ತು ಫ್ರೀಕ್ವೆನ್ಸಿಗಳನ್ನು ನಿಶ್ಚಿತ ಮಿತಿಯಲ್ಲಿಡಲು ಕಾರ್ಯಾಚರಣೆಗಿಳಿಯುತ್ತವೆ. ಅವು ಕೆಪಾಸಿಟರ್ ಬ್ಯಾಂಕ್ ಸ್ಥಗಿತಗೊಳಿಸುವ, ಬಸ್ ರಿಯಾಕ್ಟರ್ ಗಳನ್ನು ಚಾಲನೆಗೊಳಿಸುವ, ಗ್ಯಾಸ್ ಟರ್ಬೈನ್ ಮತ್ತು ಜಲವಿದ್ಯುತ್ ಘಟಕಗಳ ಉತ್ಪಾದನೆ ತಗ್ಗಿಸುವುದೇ ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಒಂದು ವೇಳೆ ಅವರು ಕರ್ತವ್ಯಕ್ಕೆ ಮುಂದಾಗಲು ತುಸು ತಡಮಾಡಿದರೂ ವಿದ್ಯುತ್ ಜಾಲ ಸುರಕ್ಷತೆಯ ಸಂರಕ್ಷಣಾ ಕಾರ್ಯಕ್ಕೆಂದೇ ಅಳವಡಿಸಲ್ಪಟ್ಟ ಡಿಎಫ್ ಬೈ ಡಿ ಟಿ ಮುಂತಾದ ರಿಲೇಗಳು , ಓವರ್ ವೋಲ್ಟೇಜ್ ರಿಲೇಗಳು ಫ್ರೀಕ್ವೆನ್ಸಿ ಮತ್ತು ವೋಲ್ಟೇಜ್ ಹೆಚ್ಚಳವನ್ನು ನಿಯಂತ್ರಿಸುತ್ತವೆ. ಪ್ರತಿ ವಿದ್ಯುತ್ ಘಟಕಕ್ಕೂ ಫ್ರೀಕ್ವೆನ್ಸಿ ಹೆಚ್ಚಾಗುತ್ತಿದ್ದಂತೆ ಸ್ವತಹ ತಾನೇ ಸ್ಥಗಿತಗೊಳ್ಳುವ ಡಿ ಎಫ್ ಬೈ ಡಿ ಟಿ ಎಂಬ ರಿಲೇಗಳನ್ನು ಅಳವಡಿಸಿರುತ್ತಾರೆ. ಇದಲ್ಲದೆ ಕೆಲವು ವಿದ್ಯುತ್ ಘಟಕಗಳನ್ನು (ವಿಶೇಷವಾಗಿ ಜಲವಿದ್ಯುತ್ ಘಟಕಗಳನ್ನು) ಫ್ರೀ ಗವರ್ನರ್ ಮೋಡಿನಲ್ಲಿಟ್ಟು ಇದ್ದಕ್ಕಿದ್ದಂತೆ ಉಂಟಾಗುವ ಲೋಡ್ ವ್ಯತ್ಯಯವನ್ನು ಸ್ವೀಕರಿಸುವ ತುರ್ತುವ್ಯವಸ್ಥೆ ಮಾಡಲಾಗಿರುತ್ತದೆ. ಇದನ್ನೆಲ್ಲ ನಿರ್ವಹಿಸಲೆಂದೇ ಭಾರತ ಸರ್ಕಾರದ ಅಡಿಯಲ್ಲಿ ಪೊಸೊಕೋ ಎಂಬ ನಿಗಮವಿದ್ದು ಅದು ಭಾರತದ ವಿದ್ಯುತ್ ಜಾಲದ ನಿರ್ವಹಣೆಯನ್ನು ಸಮರ್ಥವಾಗಿ ಮಾಡುತ್ತ ಬಂದಿದೆ. ಹಾಗಾಗಿ ಪ್ರಸ್ತುತ ಸುಮಾರು ಒಂದು ಲಕ್ಷದ ಹನ್ನೆರಡು ಸಾವಿರ ಮೆಗಾವಾಟ್ ಶೃಂಗಬೇಡಿಕೆ ನಿರ್ವಹಿಸುತ್ತಿರುವ ಭಾರತದ ಸಧೃಢ ವಿದ್ಯುತ್ ಜಾಲ ಇಂದು ರಾತ್ರಿ ಇಡೀ ದೇಶದ ಮನೆಗಳಲ್ಲಿ ದೀಪ ಆರಿಸುವ ಕೇವಲ ಶೇಕಡ ಹತ್ತರಷ್ಟು ಅರ್ಥಾತ್ ಹತ್ತು ಹನ್ನೆರಡು ಸಾವಿರ ಮೆಗಾವಾಟುಗಳಷ್ಟು ವಿದ್ಯುತ್ ವ್ಯತ್ಯಯವನ್ನು ನಿಬಾಯಿಸಲು ಸಕಲ ಮುನ್ನೆಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನೂ ವಿದ್ಯೂತ್ ನಿಗಮ ಕೈಗೊಂಡಿರುತ್ತದೆ. ಈಗಾಗಲೇ ಅವರು ಪ್ರತಿ ವಲಯ ಮತ್ತು ರಾಜ್ಯ ವಿದ್ಯುತ್ ರವಾನೆ ಕೇಂದ್ರಗಳಿಗೆ ಅಧ್ಯಯನ ವರದಿ ಮತ್ತು ಸೂಚನೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಅಗತ್ಯ ಬಿದ್ದರೆ ಎಂಟೂವರೆ ಗಂಟೆಯಿಂದ, ಫ್ರೀಕ್ವೆನ್ಸಿ ಮತ್ತು ವೋಲ್ಟೇಜ್ ನಿರ್ವಹಣೆಯ ದೃಷ್ಟಿಯಿಂದ ಒಂದೆರಡು ಮಾರ್ಗಗಳನ್ನು ಸ್ಥಗಿತಗೊಳಿಸಿಯಾರು. ಸಹಜವಾಗಿ ಅದರ ಅಗತ್ಯ ಕಂಡುಬರುವುದಿಲ್ಲ. ಅವಧಿ ಮುಗಿದ ನಂತರವೂ ಒಂದೆರಡು ಮಾರ್ಗಗಳನ್ನು ತುಸು ನಿಧಾನವಾಗಿ ಚಾಲನೆ ಮಾಡಿಯಾರು. ಮಾಡಬೇಕಾಗುತ್ತದೆ ಎಂದೇನಿಲ್ಲ. ಆದರೆ ವಿದ್ಯುತ್ ಜಾಲ ಅತ್ಯಂತ ಸೂಕ್ಷ್ಮ. ಎಲ್ಲೋ ಯಾರೂ ತುಸು ಏರು ಪೇರು ಮಾಡಿದರೂ ಇನ್ನೆಲ್ಲೋ ಸಣ್ಣ ವ್ಯತ್ಯಾಸ ಉಂಟಾಗಬಹುದು ಅಥವಾ ದುರದೃಷ್ಟವಶಾತ್ ಅದೇ ಸಂದರ್ಭದಲ್ಲಿ ಯಾವುದೋ ಪ್ರಮುಖ ಮಾರ್ಗದಲ್ಲಿ ಇನ್ಯಾವುದೋ ಹಠಾತ್ ದೋಷ ಉದ್ಭವಿಸಿಬಿಡಬಹುದು. ಆದರೆ ವಿದ್ಯುತ್ ಕ್ಷೇತ್ರದ ನನ್ನ ಮೂರೂವರೆ ದಶಕಗಳ ಅನುಭವದಲ್ಲಿ ಹೇಳುವುದಾದರೆ, ಅಂತಹ ಯಾವ ಪ್ರಸಂಗವೂ ಉದ್ಭವಿಸುವುದಿಲ್ಲ.

ಹಾಗಾದರೆ ಇವತ್ತು ನಾವೇನು ಮಾಡಬೇಕು?

1.ಪ್ರಧಾನ ಮಂತ್ರಿಗಳು ಹೇಳಿದ್ದು ವಿದ್ಯುತ್ ದೀಪಗಳನ್ನು ಮಾತ್ರ ಆರಿಸಿ, ನಾವು ಗುಂಪುಕಟ್ಟದೆ ಮಾಸ್ಕ್ ಧರಿಸಿ ಹೊರಬಂದು, ಇತರ ಬಗೆಯ ದೀಪ ಬೆಳಗಿಸಬೇಕೆಂದು. ಹಾಗಾಗಿ ನಾವು ಅವರು ಹೇಳಿದಷ್ಟೇ ಮಾಡಬೇಕು. ಆ ಸಂದರ್ಭದಲ್ಲಿ ಮನೆಯೊಳಗಿನ ಫ್ರಿಜ್, ಫ್ಯಾನ್ ಕಂಪ್ಯೂಟರ್, ಟಿ ವಿ ಮೊಬೈಲ್ ಚಾರ್ಜರ್ ಮುಂತಾದ ಸಾಧನಗಳು ಚಾಲನೆಯಲ್ಲಿರಲಿ. ಅಗತ್ಯವಿಲ್ಲದ ಫ್ಯಾನುಗಳನ್ನೂ ಹಾಕೋಣ. ಗ್ರಿಡ್ನ ಹಿತದೃಷ್ಟಿಯಿಂದ ಕಡ್ಡಾಯವಾಗಿ ಚಾಲನೆಯಲ್ಲಿ ಇಟ್ಟುಕೊಳ್ಳೋಣ.
2.ಮನೆಯಲ್ಲಿ ಬೋರ್ ವೆಲ್ ಇದ್ದವರು ಅಥವಾ ಸಂಪನಿಂದ ಟ್ಯಾಂಕಿಗೆ ನೀರೆತ್ತುವ ಪಂಪ್ ಇದ್ದವರು, ದೀಪ ಆರಿಸುವ ಸಮಯದಲ್ಲೇ ಅದನ್ನು ಚಾಲನೆಗೊಳಿಸೋಣ.

3. ದೇಶದ ಪ್ರಧಾನಿಗಳು ಹೇಳಿದ್ದು ಮನೆಯೊಳಗೇ ಇದ್ದು, ಜೊತೆಗೆ ಏರುತ್ತಿರುವ ಕರೋನಾ, ಅದರಿಂದ ದೇಶ ವಿದೇಶಗಳಲ್ಲಿ ಸಂಭವಿಸುತ್ತಿರುವ ಸಾವು-ನೋವುಗಳನ್ನು ನೋಡಿ ಮನೋಸ್ಥೈರ್ಯ ಕುಸಿಯುತ್ತಿರುವ ಈ ಸಂದರ್ಭದಲ್ಲಿ ನಾವ್ಯಾರೂ ಒಂಟಿಯಲ್ಲ. ನಮ್ಮೊಂದಿಗೆ ಇಡೀ ದೇಶದ ಪ್ರಜೆಗಳು ಜೊತೆಗಿದ್ದಾರೆ ಎಂಬ ಸದ್ಭಾವದೊಡನೆ, “ಜಗದ ಜಾಡ್ಯವೆಲ್ಲ ತೊಲಗಿ, ಎಲ್ಲರ ಜೀವನದಲ್ಲೂ ಜ್ಯೋತಿ ಬೆಳಗಲಿ” ಎಂಬ ಸದ್ಭಾವದೊಂದಿಗೆ ದೀಪ ಬೆಳಗಿಸೋಣ

4.ನೈತಿಕ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಇದೊಂದು ಭಾವ ಪೂಜೆಯೇ ವಿನಹ ಉತ್ಸವವಲ್ಲ. ಹಾಗಾಗಿ ದೀಪ ಬೆಳಗುತ್ತಿರುವುದು ಲೋಕಕ್ಕೆಲ್ಲ ಕಾಣಲೆಂದು ಒಟ್ಟಿಗೇ ಸೇರಿ ಕಿರಿಚುವುದು, ಹಾಡಿ ಕುಣಿಯುವುದು, ಚಪ್ಪಾಳೆ, ಗಂಟೆ ಜಾಗಟೆ ಬಾರಿಸುವುದು ಮಾಡದಿರೋಣ. ನಾವು ಮಾಡುತ್ತಿರುವುದು ನಮ್ಮ ಆತ್ಮೋನ್ನತಿಗೆ. ನಮ್ಮ ರಾಷ್ಟ್ರದ ಒಳಿತಿಗೆ. ಅದು ಲೋಕಕ್ಕೆಲ್ಲ ಪ್ರದರ್ಶನಗೊಳ್ಳಬೇಕಾದ ವಿಜೃಂಭಣೆಯಲ್ಲ.

5. ನಮ್ಮದು ಪ್ರಜಾಪ್ರಭುತ್ವ. ಯಾರಿಗೋ ಪ್ರಧಾನಿಯವರ ಮಾತಿನಂತೆ ನಡೆಯುವುದಕ್ಕೆ ಇಷ್ಟವಿಲ್ಲದೆ, ಅವರು ದೀಪ ಬೆಳಗಿಸದಿರಬಹುದು. ಅದಕ್ಕಾಗಿ ಅವರನ್ನು ನಿಂದಿಸುವುದು, ಅವರೊಡನೆ ವಾದಿಸುವುದು, ಜಗಳವಾಡುವುದು ಬೇಡ. “ಅವರವರ ಭಾವಕ್ಕೆ ಅವರವರ ಭಕ್ತಿಗೆ” ಎಂದು ನಾವು ನಮ್ಮ ಸದ್ಭಾವದಲ್ಲಿ ಮುಳುಗಿ ಸುಮ್ಮನಿರೋಣ.

6.ಒಂಬತ್ತು ನಿಮಿಷ ಮುಗಿಯುತ್ತಿದ್ದಂತೆ ಎಲ್ಲ ಲೈಟುಗಳನ್ನು ಒಟ್ಟಿಗೇ ಆನ್ ಮಾಡುವುದು ಬೇಡ. ಮೊಟ್ಟಮೊದಲು ಕೇವಲ ಒಂದು ಲೈಟ್ ಆನ್ ಮಾಡಿ, ಮೊದಲು ಪಂಪ್ ಮೋಟಾರುಗಳನ್ನು ಆಫ್ ಮಾಡೋಣ. ನಂತರ ಅಗತ್ಯವಿಲ್ಲದ ಫ್ಯಾನುಗಳನ್ನು ಆಫ್ ಮಾಡೋಣ. ನಂತರ ಒಂದೊಂದೇ ಲೈಟ್ ಆನ್ ಮಾಡೋಣ. ಎಲ್ಲರೂ ಒಂಬತ್ತು ಗಂಟೆ ಒಂಬತ್ತು ನಿಮಿಷಕ್ಕೇ ಒಳಗೆ ಹೋಗಿ ಲೈಟ್ ಆನ್ ಮಾಡಬೇಕಿಲ್ಲ. ಕೆಲವರು ನಿಧಾನವಾಗಿ, ಐದು ಹತ್ತು ನಿಮಿಷ ಕಾದು ಲೈಟ್ ಹಾಕೋಣ. ಒಟ್ಟಿಗೇ ಲೋಡ್ ಏರಿಕೆಯಾಗುವುದು ಬೇಡ.

7.ದೀಪ ಬೆಳಗಿಸುವಾಗ, ನಮ್ಮ ಬಟ್ಟೆಯ ಬಗ್ಗೆ, ಮಕ್ಕಳ ಬಗ್ಗೆ ಮುಂಜಾಗ್ರತೆ ವಹಿಸೋಣ. ದೇವರಿಗೆ ದೀಪ ಬೆಳಗಿಸುವ ಮುನ್ನ ಕೈಕಾಲು ತೊಳೆದು ಬೆಳಗಿಸುವಂತೆ ಇಂದು ಕೂಡ, ಕೈ ತೊಳೆದು ದೀಪ ಬೆಳಗಿಸೋಣ. ಅಪಾಯವಾಗದಂತೆ ಮುಂಜಾಗ್ರತೆಗೆ ಹೆಚ್ಚು ಗಮನವಿರಲಿ. ಆದಷ್ಟೂ ದೀಪೋಜ್ವಲನ ಕಾರ್ಯವನ್ನು ಮೌನವಾಗಿ, ಭಕ್ತಿಯಿಂದ ನಡೆಸೋಣ.

8.ಇದು ಜಾತಿ, ಮತ, ಧರ್ಮಗಳನ್ನು ಮೀರಿ, ಮಾನವತೆಯ ಕಲ್ಯಾಣಕ್ಕಾಗಿ ನಾವು ಶ್ರದ್ಧೆಯಿಂದ ಗೈಯ್ಯುವ ಭಾವಪೂಜೆ. ಇದಕ್ಕಾಗಿ, ಗದ್ದಲ ನಿಂದೆ, ಆರ್ಭಟ, ವಾದ- ವಿವಾದ ಬೇಡ.

Get real time updates directly on you device, subscribe now.

Comments are closed.

error: Content is protected !!