ತುಮಕೂರು: ಸರ್ಕಾರಿ ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ಹೆಚ್ಚುವರಿ ಹುದ್ದೆಗಳನ್ನಾಗಿ ಗುರ್ತಿಸಿ ಸ್ಥಳಾಂತರ ಮಾಡುತ್ತಿರುವ ಪ್ರಕ್ರಿಯೆಯನ್ನು ಈ ಕೂಡಲೇ ಕೈಬಿಡಬೇಕು ಎಂದು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಚಿತ್ರಕಲಾ ಶಿಕ್ಷಕರು ಒತ್ತಾಯಿಸಿದ್ದಾರೆ.
ನಗರದಲ್ಲಿ ಡಿಡಿಪಿಐ ನಂಜಯ್ಯ ಅವರಿಗೆ ಮನವಿ ಸಲ್ಲಿಸಿ ಯಾವುದೇ ಕಾರಣಕ್ಕೂ ಚಿತ್ರಕಲಾ ಶಿಕ್ಷಕರನ್ನು ಹೆಚ್ಚುವರಿ ಹುದ್ದೆಗಳನ್ನಾಗಿ ಗುರ್ತಿಸಿ ಸ್ಥಳಾಂತರ ಮಾಡುವುದು ಬೇಡ, ಇದರಿಂದ ಶಿಕ್ಷಕರಿಗಷ್ಟೇ ಅಲ್ಲದೆ ಗ್ರಾಮೀಣ ಭಾಗದ ಮಕ್ಕಳಿಗೂ ತೀವ್ರ ತೊಂದರೆ ಆಗಲಿದೆ ಎಂದು ಶಿಕ್ಷಕರು ತಿಳಿಸಿದರು.
ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರು ಉತ್ತಮ ಗುಣಮಟ್ಟದ ಕಲಿಕೆ ಸಾಧಿಸುವ ನಿಟ್ಟಿನಲ್ಲಿ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಸಿಬ್ಬಂದಿ ಸ್ತರ ವಿನ್ಯಾಸಕ್ಕೆ ಅನುಗುಣವಾಗಿ ಒದಗಿಸುತ್ತಿರುವುದು ಚಿತ್ರಕಲಾ ಶಿಕ್ಷಕರಿಗೆ ತೊಂದರೆಯಾಗುತ್ತದೆ, ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ರವೀಶ್ ಮಾತನಾಡಿ, ಚಿತ್ರಕಲಾ ಶಿಕ್ಷಣವು ಪಠ್ಯವಸ್ತುವಿಗೆ ಪೂರಕವಾಗಿದೆ, ಮಕ್ಕಳಿಗೂ ಸಹ ಭಾವನಾತ್ಮಕ, ಕ್ರಿಯಾತ್ಮಕ, ಕೌಶಲ್ಯ ವೃದ್ಧಿಗೆ ಇದು ಪೂರಕವಾಗಿದೆ, ಅಲ್ಲದೆ ಎಸ್ಎಸ್ಎಲ್ಸಿ ಬೋರ್ಡ್ ನಡೆಸುವ ವಾರ್ಷಿಕ ಪರೀಕ್ಷೆಯಂತೆ ಪ್ರತಿವರ್ಷವೂ ಚಿತ್ರಕಲಾ ಶಿಕ್ಷಣಕ್ಕೆ ಪೂರಕವಾದ ಲೋಯರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆ ಬರೆಯುತ್ತಿರುವುದು ಇಲಾಖೆಗೂ ತಿಳಿದ ವಿಷಯವೇ ಆಗಿದೆ. ಇದಕ್ಕೆ ಚಿತ್ರಕಲಾ ಶಿಕ್ಷಕರ ಪರಿಶ್ರಮದ ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೌಶಲ್ಯಕ್ಕೆ ಸಂಬಂಧಿಸಿದ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದೆ, ಆದ್ದರಿಂದ ನಮ್ಮ ಮನವಿಯನ್ನು ಮಾನ್ಯಮಾಡಿ 3 ರಿಂದ 5 ವಿಭಾಗಗಳಿರುವ ಶಾಲೆಗಳಿಗೆ ಸಿಬ್ಬಂದಿ ಸ್ತರವಿನ್ಯಾಸ 1+7ನ್ನು ರದ್ದುಗೊಳಿಸಿ ವಿಶೇಷ ಶಿಕ್ಷಕರನ್ನೂ ಒಳಗೊಂಡಂತೆ ಸ್ತರ ವಿನ್ಯಾಸ 1+ 8 ಮಂಜೂರು ಮಾಡಿ ಚಿತ್ರಕಲಾ ಶಿಕ್ಷಕರನ್ನು ಹೆಚ್ಚುವರಿಯಾಗಿ ಸ್ಥಳಾಂತರಿಸುವುದನ್ನು ಕೈಬಿಟ್ಟು ಚಿತ್ರಕಲಾ ಶಿಕ್ಷಣವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಇಂದು ಪಟ್ಟಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಕ್ರೀಡೆ, ಸಂಗೀತ, ಚಿತ್ರಕಲೆ, ಕೌಶಲ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಕಷ್ಟು ಅವಕಾಶಗಳಿವೆ, ಆದರೆ ಗ್ರಾಮೀಣ ಮಕ್ಕಳಿಗೂ ಕೌಶಲ್ಯ ಅತ್ಯಗತ್ಯ, ಆ ನಿಟ್ಟಿನಲ್ಲಿ ಚಿತ್ರಕಲಾ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ, ಅಲ್ಲದೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ, ಇಂಥ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರನ್ನು ಸ್ಥಳಾಂತರಿಸಿದರೆ ಗ್ರಾಮೀಣ ವಿದ್ಯಾರ್ಥಿಗಳು ಲಲಿತಕಲಾ ಶಿಕ್ಷಣ ಮತ್ತು ವೃತ್ತಿ ಶಿಕ್ಷಣದಿಂದ ವಂಚಿತರಾಗುತ್ತಾರೆ, ಇದನ್ನು ಅರ್ಥ ಮಾಡಿಕೊಂಡು ಚಿತ್ರಕಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಿತ ಕಾಯುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಂಜುನಾಥ, ಖಜಾಂಚಿ ಜಗದೀಶ್, ಉಪಾಧ್ಯಕ್ಷ ರಂಗಸ್ವಾಮಯ್ಯ, ಹನುಮಾನ್ ಮೂರ್ತಿ, ಉಮಾಮಹೇಶ್ವರ್, ಆನಂದ್, ಇಂದ್ರ ಕುಮಾರ್, ಮಹೇಶ್, ಗಣೇಶ್ ಗುಡಿ, ಗೋವಿಂದರಾಜು, ಬಾನುಪ್ರಕಾಶ್, ಟಿ.ಹೆಚ್.ರವಿ, ಗೋಪಾಲ್ ಇತರರು ಹಾಜರಿದ್ದರು.
Get real time updates directly on you device, subscribe now.
Next Post
Comments are closed.