ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ವೈಭವ

449

Get real time updates directly on you device, subscribe now.

ಕುಣಿಗಲ್: ತಾಲೂಕಿನ ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಎಡೆಯೂರು ಶ್ರೀಸಿದ್ದಲಿಂಗೇಶ್ವರ ಸ್ವಾಮಿಯವರು ಮಹಾ ರಥೊತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಸುಡುಬಿಸಿಲನ್ನು ಲೆಕ್ಕಿಸದೆ ರಾಜ್ಯದ ವಿವಿಧ ಮೂಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ಮಹಾ ರಥೋತ್ಸವದಲ್ಲಿ ಪಾಲ್ಗೊಂಡರು. ಕ್ಷೇತ್ರಕ್ಕೆ ಆಗಮಿಸುವ ರಸ್ತೆಯ ಇಕ್ಕೆಲಗಳಲ್ಲಿ ಭಕ್ತರ ದಾಹ ತಣಿಸಲು ನೀರು ಮಜ್ಜಿಗೆ, ಪಾನಕ, ಹೆಸರು ಬೇಳೆ ವಿತರಣೆ ಅರವಟ್ಟಿಗೆ ಸ್ಥಾಪಿಸಿ ವಿತರಣೆ ಮಾಡಲಾಯಿತು. ರಥೋತ್ಸವದ ನಂತರ ವಿವಿಧ ಭಕ್ತರು ಅನ್ನದಾಸೋಹ ನೆರವೇರಿಸಿದರು.
ಬೆಳಗ್ಗೆ ಶ್ರೀಕ್ಷೇತ್ರದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಶ್ರೀಬಾಲ ಮಂಜುನಾಥ ಸ್ವಾಮಿ ಪಾಲ್ಗೋಂಡರು. ಮಧ್ಯಹ್ನ ಅಭಿಜಿನ್ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಬೆಟ್ಟಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮಿಗಳು, ಬಾಳೆಹುನ್ನೂರು ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಶಾಸಕ ಡಾ.ರಂಗನಾಥ್ ಹಲವು ಸುತ್ತಿನ ಸಭೆ ನಡೆಸಿ ಯಾವುದೇ ಲೋಪವಾಗದಂತೆ ರಥೋತ್ಸವಕ್ಕೆ ಕ್ರಮಕೈಗೊಂಡಿದ್ದು, ಬೆಳಗಿನಿಂದಲೂ ರಥೋತ್ಸವ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಸಚಿವ ಮಾಧುಸ್ವಾಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರು ಮುಂದಿನ ಕುಣಿಗಲ್ ಕ್ಷೇತ್ರದ ಶಾಸಕರಾಗುವಂತೆ ಅವರ ಹೆಸರುಗಳನ್ನು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆಯುವ ಮೂಲಕ ಹರಕೆ ಹೊತ್ತಿದ್ದು ವಿಶೇಷವಾಗಿತ್ತು.
ಪ್ರಭಾರ ಆಡಳಿತಾಧಿಕಾರಿ ಉಪ ವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಾಬಲೇಶ್ವರ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು. ದೇವಾಲಯ ಆಡಳಿತದ ವತಿಯಿಂದ ಭಕ್ತರಿಗೆ ತೊಂದರೆಯಾಗದಂತೆ ಎಲ್ಲಾ ರೀತಿಯ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!