ಮೆಮು ರೈಲಿನಿಂದ ಪ್ರಯಾಣಿಕರಿಗೆ ಅನುಕೂಲ

ತುಮಕೂರು ಬೆಂಗಳೂರು ನಡುವೆ ಮೆಮು ರೈಲು ಸಂಚಾರಕ್ಕೆ ಜಿ.ಎಸ್.ಬಿ ಚಾಲನೆ

424

Get real time updates directly on you device, subscribe now.

ತುಮಕೂರು: ತುಮಕೂರು ನಗರದ ರೈಲು ನಿಲ್ದಾಣದಿಂದ ಪ್ರತಿನಿತ್ಯ ತುಮಕೂರು ಬೆಂಗಳೂರು ನಡುವೆ ಸಂಚರಿಸುವ ಮೆಮು ವಿಶೇಷ ರೈಲು ಸಂಚಾರಕ್ಕೆ ಸಂಸದ ಜಿ.ಎಸ್.ಬಸವರಾಜು ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈ ದಿನ ಈಡೇರಿದಂತಾಗಿದೆ, ತುಮಕೂರು ಮತ್ತು ಬೆಂಗಳೂರಿನ ಕೆ.ಎಸ್.ಆರ್ ರೈಲು ನಿಲ್ದಾಣದ ನಡುವೆ ಸಂಚರಿಸುವ ಈ ವಿದ್ಯುತ್ ಚಾಲಿತ ರೈಲು ಸೇವೆಯಿಂದ ಮುಖ್ಯವಾಗಿ ಕಾರ್ಮಿಕರು, ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬೆಂಗಳೂರು- ತುಮಕೂರು 8 ಭೋಗಿಗಳುಳ್ಳ ಡೆಮು ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ 16 ಭೋಗಿಗಳುಳ್ಳ ಮೆಮು ರೈಲನ್ನಾಗಿ ಪರಿವರ್ತಿಸಲಾಗಿದೆ, ಸುಮಾರು 20 ವರ್ಷಗಳ ಹೋರಾಟದ ಶ್ರಮದಿಂದ ಎರಡು ಪ್ರಮುಖ ನಗರಗಳ ನಡುವೆ ಸಂಚರಿಸುವ ಈ ಮೆಮು ರೈಲು ಸೇವೆ ಸಾಕಾರವಾಗಿದೆ ಎಂದರಲ್ಲದೆ, 2024 ರೊಳಗಾಗಿ ರಾಷ್ಟ್ರದ ಎಲ್ಲಾ ರೈಲು ಮಾರ್ಗಗಳು ಡೀಸೆಲ್ ಮುಕ್ತ ವಿದ್ಯುತ್ ಚಾಲಿತ ರೈಲು ಮಾರ್ಗಗಳಾಗಬೇಕೆಂದು ಪ್ರಧಾನಿ ಮೋದಿಯವರ ದೊಡ್ಡ ಕನಸಾಗಿದೆ, ಇದನ್ನು ನನಸಾಗಿಸಲು ಪ್ರಯಾಣಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದರು.
ತುಮಕೂರು ರೈಲು ನಿಲ್ದಾಣದ ಮೂಲಕ ಪ್ರತಿದಿನ ಸುಮಾರು 30 ರೈಲು ಸಂಚರಿಸುತ್ತಿದ್ದರೂ ಪ್ರಯಾಣಿಕರಿಂದ ಹೆಚ್ಚುವರಿ ರೈಲು ಸಂಚಾರ ಸೌಲಭ್ಯಕ್ಕಾಗಿ ಮನವಿಗಳು ಬರುತ್ತಲೇ ಇರುವುದರಿಂದ ತುಮಕೂರು- ಬೆಂಗಳೂರು ನಡುವೆ ಪ್ರತಿ 1 ಗಂಟೆಗೊಮ್ಮೆ ಪ್ರತ್ಯೇಕ ರೈಲು ಸಂಚಾರಕ್ಕೆ ಕೇಂದ್ರದ ರೈಲ್ವೆ ಸಚಿವರಲ್ಲಿ ಮನವಿ ಮಾಡಿದಾಗ ಅವರು ಶಾಶ್ವತ ರೈಲು ಸಂಚಾರಕ್ಕೆ ಸಮ್ಮತಿ ಸೂಚಿಸಿದ್ದು, ಶೀಘ್ರದಲ್ಲಿ ಕಾರ್ಯಗತವಾಗಲಿದೆ ಎಂದು ತಿಳಿಸಿದರು.
ನಗರದ ರೈಲು ನಿಲ್ದಾಣದ ದಕ್ಷಿಣ ಭಾಗದಲ್ಲಿ ಗೇಟ್ ತೆರೆಯಬೇಕೆಂದು ಸಾರ್ವಜನಿಕರಿಂದ ಮನವಿಗಳು ಬರುತ್ತಿದೆ. ಒಂದಕ್ಕಿಂತ ಹೆಚ್ಚು ಗೇಟ್ ಗಳನ್ನು ತೆರೆದಲ್ಲಿ ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣ ಮಾಡುವ ಸಾಧ್ಯತೆ ಇರುವುದರಿಂದ ರೈಲ್ವೆ ನಿಯಮಾವಳಿ ಪ್ರಕಾರ ಪ್ರಯಾಣಿಕರು ಹೋಗಿ ಬರಲು ಒಂದೇ ಕಡೆ ಗೇಟ್ ವ್ಯವಸ್ಥೆ ಮಾಡಲಾಗಿದೆ ಎಂದರು.
ನಗರದ ಹೊರವಲಯ ವಸಂತ ನರಸಾಪುರದ ಸುಮಾರು 13000 ಎಕರೆ ಕೈಗಾರಿಕಾ ಪ್ರದೇಶದ ಉದ್ಯಮಿಗಳು ಹಾಗೂ ಕಾರ್ಮಿಕರ ಅನುಕೂಲಕ್ಕಾಗಿ ಮೆಟ್ರೋ ರೈಲು ಸಂಚಾರಕ್ಕೆ ಸರ್ಕಾರ ಮುಂದಾಗಿದೆ ಎಂದರಲ್ಲದೆ, ತುಮಕೂರು ನಗರ ರೈಲು ನಿಲ್ದಾಣವನ್ನು ಮೈಸೂರು, ಬೆಂಗಳೂರು ಮಾದರಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ನಗರ ರೈಲು ನಿಲ್ದಾಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ತುಮಕೂರು- ದಾವಣಗೆರೆ, ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಪ್ರಗತಿಯಲ್ಲಿದ್ದು, ತುಮಕೂರು- ಮಳವಳ್ಳಿ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಯೋಜನೆಗಳು ಪೂರ್ಣಗೊಂಡ ನಂತರ ತುಮಕೂರು ರೈಲು ನಿಲ್ದಾಣ ಜಂಕ್ಷನ್ ಆಗಿ ಪರಿವರ್ತನೆಯಾಗಲಿದೆ ಎಂದರು.
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮನ್ದೀಪ್ ಕಪೂರ್ ಮಾತನಾಡಿ, ಮೆಮು ರೈಲು ಸಂಚಾರವು ಪರಿಸರ ಸ್ನೇಹಿಯಾಗಿದ್ದು, ತುಮಕೂರಿನಿಂದ ಪ್ರತಿದಿನ ಬೆಳಗ್ಗೆ 11.15 ಗಂಟೆಗೆ ಹೊರಟು 13.25 ಗಂಟೆಗೆ ಬೆಂಗಳೂರು ತಲುಪಲಿದ್ದು, ಬೆಂಗಳೂರಿನಿಂದ ಮಧ್ಯಾಹ್ನ 13.50ಕ್ಕೆ ಹೊರಟು 15.40 ಗಂಟೆಗೆ ತುಮಕೂರು ತಲುಪಲಿದೆ. ತುಮಕೂರಿನಿಂದ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಈ ರೈಲು ಕ್ಯಾತ್ಸಂದ್ರ, ಹಿರೇಹಳ್ಳಿ, ಡಾಬಸ್ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಬೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣವರ, ಯಶವಂತಪುರ, ಮಲ್ಲೇಶ್ವರಂ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ. ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಯ ಒದಗಿಸಲು ಇಲಾಖೆ ಬದ್ಧವಾಗಿದ್ದು, ಪ್ರಯಾಣಿಕರು ಸಲಹೆಗಳನ್ನು ನೀಡಿದಲ್ಲಿ ಕಾರ್ಯ ರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ರೈಲ್ವೆ ಬಳಕೆದಾರರ ಸಮಾಲೋಚಕರ ಸಮಿತಿ ಸದಸ್ಯ ಡಿ.ಆರ್.ರಘೋತ್ತಮ್ ರಾವ್ ಮಾತನಾಡಿ, ಮೆಮು ರೈಲು ಓಡಾಟದಿಂದ ವಿಶೇಷವಾಗಿ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು, ಬೆಳೆದ ಬೆಳೆಯನ್ನು ಮಾರಾಟ ಮಾಡುವ ರೈತರಿಗೆ ಪ್ರಯೋಜನವಾಗಲಿದೆ ಎಂದರಲ್ಲದೆ, ರೈಲ್ವೆ ಇಲಾಖೆ ಹಾಗೂ ಕೆಎಸ್ಆರ್ಟಿಸಿ ಜಂಟಿ ಒಪ್ಪಂದದ ಮೇರೆಗೆ ನಗರ ರೈಲು ನಿಲ್ದಾಣದಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವುದರಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಂಸದರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹಾಗೂ ಕಾರ್ಯದರ್ಶಿ ಕರ್ಣಂ ರಮೇಶ್, ರೈಲ್ವೆ ಅಧಿಕಾರಿಗಳು ಹಾಜರಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಎಸ್ಬಿ, ಪ್ರಧಾನಿ ಮೋದಿ ಅವರು ಪ್ರಯಾಣಿಕರ ಅನುಕೂಲಕ್ಕಾಗಿ 2024 ರೊಳಗಾಗಿ ಹೈಸ್ಪೀಡ್ ರೈಲುಗಳ ಸಂಖ್ಯೆ ಹೆಚ್ಚಿಸುವ, ಸಣ್ಣ ರೈಲು ನಿಲ್ದಾಣಗಳಲ್ಲಿಯೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಆಶಯ ಹೊಂದಿದ್ದಾರೆ ಎಂದರಲ್ಲದೆ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಪ್ರಯತ್ನಿಸಲಾಗುವುದು, ನಗರ ರೈಲು ನಿಲ್ದಾಣದ ಬಳಿ ಒತ್ತುವರಿಯಾಗಿರುವ ರೈಲ್ವೆ ಇಲಾಖೆಯ 9 ಎಕರೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ವಸತಿಗಳನ್ನು ತೆರವುಗೊಳಿಸಿ ಬೇರೆ ಕಡೆ ಪುನರ್ವಸತಿ ಕಲ್ಪಿಸಿದಲ್ಲಿ ರೈಲು ನಿಲ್ದಾಣದ ವಿಸ್ತರಣೆ, ಹೆಚ್ಚುವರಿ ಪ್ಲಾಟ್Áರಂಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ತುಮಕೂರು- ರಾಯದುರ್ಗ, ತುಮಕೂರು- ದಾವಣಗೆರೆ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿರುವುದರಿಂದ ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ ಎಂದು ತಿಳಿಸಿದರಲ್ಲದೆ, ತುಮಕೂರು- ದಾವಣಗೆರೆ ರೈಲ್ವೆ ಯೋಜನೆಗಾಗಿ ಪ್ರಸಕ್ತ ವರ್ಷದ ಆಯವ್ಯಯದಲ್ಲಿ 50 ಕೋಟಿ ರೂ. ಮಂಡನೆ ಮಾಡಲಾಗಿದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!