ಶಿರಾ: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಧರ್ಮ ಧರ್ಮಗಳ ಮಧ್ಯೆ ದ್ವೇಷ ಹುಟ್ಟು ಹಾಕುತ್ತಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ. ಇವುಗಳನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆ ಸೆಳೆಯಲು ಹಾಗೂ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕೋಮು ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡುತ್ತಿದ್ದಾರೆ ಅವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಸರಕಾರವು ಜನರ ಮನಸ್ಸಿನಲ್ಲಿ ಕೋಮು ಭಾವನೆ ಹುಟ್ಟು ಹಾಕಿ ಧರ್ಮ ಧರ್ಮಗಳ, ಜಾತಿ ಜಾತಿಗಳ ಮಧ್ಯೆ ಧ್ವೇಷ ಹುಟ್ಟು ಹಾಕುತ್ತಿದ್ದಾರೆ. ತಿನ್ನುವ ಅನ್ನದಿಂದ ಹಿಡಿದು ಎಲ್ಲರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ವಿದ್ಯಾಮಾನಗಳನ್ನು ನೋಡುತ್ತಿದ್ದರೆ ದುಃಖದಿಂದ ಹೇಳಬೇಕಾಗುತ್ತಿದೆ. ಶಾಸಕಾಂಗ ನ್ಯಾಯಾಂಗ ಕಾರ್ಯಾಂಗ ಎಲ್ಲದಕ್ಕೂ ಜಾತಿ-ಧರ್ಮಗಳ ಮಧ್ಯೆ ದ್ವೇಷ ಹುಟ್ಟು ಹಾಕಿ ವಿಜೃಂಭಿಸುತ್ತಿದ್ದಾರೆ. ತಿನ್ನುವ ಅನ್ನದಲ್ಲಿ ಕೇಸರೀಕರಣ ಮಾಡುತ್ತಿದ್ದಾರೆ. ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿ ಸಂವಿಧಾನಕ್ಕೆ ವಿರುದ್ಧವಾದ ಹೇಳಿಕೆಗಳನ್ನು ಕೊಡುತ್ತಾರೆ. ಒಬ್ಬ ಯುವಕನ ಸಾವಿಗೆ ಏನೇನೋ ಕಾರಣ ಕೊಡುತ್ತಾರೆ. ಗೃಹ ಮಂತ್ರಿ ಎಂದರೆ ಜವಾಬ್ದಾರಿ ಇರುವ ಹುದ್ದೆ. ಇವರಿಗೆ ಆಳುವ ಯೋಗ್ಯತೆ, ಶಕ್ತಿ ಇಲ್ಲ. ನೈತಿಕತೆ ಕಳೆದುಕೊಂಡಿದ್ದಾರೆ. ಇವರ ಮೇಲೆ ಕೇಸು ದಾಖಲಿಸಬೇಕು. ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಈ ದೇಶದ ನೆಲದ ಕಾನೂನುಗಳಿಗೆ ಅಪಚಾರ ಮಾಡುವ ಹೇಳಿಕೆ ಕೊಡುತ್ತಿದ್ದಾರೆ. ಇವರ ಮೇಲೆ ಪೊಲೀಸರಿಗೆ ದೂರು ಕೊಡುತ್ತಿದ್ದೇವೆ. ಪೊಲೀಸರು ಆಳುವವರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಸೂಡಾ ಮಾಜಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್, ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷರಾದ ಹೆಚ್.ಗುರುಮೂರ್ತಿ, ಮುಖಂಡ ಸೊರೆಕುಂಟೆ ಸತ್ಯನಾರಾಯಣ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾರೋಗೆರೆ ಮಹೇಶ್, ಡಿ.ಸಿ.ಅಶೋಕ್, ವಕೀಲರಾದ ರಘು, ನಗರಸಭಾ ಸದಸ್ಯರಾದ ಶಿವಶಂಕರ್, ಪೂಜಾ ಪೆದ್ದರಾಜು, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸುನಿಲ್, ಭಾನುಪ್ರಕಾಶ್, ನಗರ ಎಸ್ಟಿ ಘಟಕದ ಅಧ್ಯಕ್ಷ ಶರತ್ ಬಾಬು, ಸತ್ಯನಾರಾಯಣ್, ಶೇಷಾನಾಯ್ಕ, ದೊಡ್ಡಗುಳ ರಾಜಣ್ಣ, ನೂರುದ್ದೀನ್, ರಫಿವುಲ್ಲಾ, ಬಿಲಾಲ್, ಚೆನ್ನನಕುಂಟೆ ತಿಪ್ಪೇಶ್, ಲಕ್ಷ್ಮೀಸಾಗರ ಗ್ರಾ.ಪಂ.ಅಧ್ಯಕ್ಷ ಮಿಟ್ಯಾನಾಯ್ಕ, ಗಂಗನಹಳ್ಳಿ ಸೋಮಶೇಖರ್, ಸೊರೆಕುಂಟೆ ವಿನಯ್ ಸೇರಿದಂತೆ ಅನೇಕ ಭಾಗವಹಿಸಿದ್ದರು.
Get real time updates directly on you device, subscribe now.
Comments are closed.