ಶಿರಾ: ಎತ್ತಿನಹೊಳೆ ಯೋಜನೆಯ ಮೂಲ ನಾಲಾ ಸರಪಳ ೧೯೭.೮ ಕಿ.ಮೀ. ಟೇಕ್ ಆಫ್ ಪಾಯಿಂಟನಿಂದ ಶಿರಾ ತಾಲೂಕಿಗೆ ನೀರು ಹರಿಸಿದರೆ ಕಳ್ಳಂಬೆಳ್ಳ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳಿಗೆ ಮಾತ್ರ ಅನುಕೂಲವಾಗುತ್ತದೆ. ಬದಲಿಗೆ ರಾಷ್ಟ್ರೀಯ ಹೆದ್ದಾರಿ ೪ರ ಬಲಭಾಗದಲ್ಲಿರುವ ಮುಖ್ಯನಾಲಾ ಸರಪಳಿ ೨೧೬.೯ ಕಿಲೋಮೀಟರ್ ನಿಂದ ಟೇಕ್ ಆಫ್ ಪಾಯಿಂಟ್ ವ್ಯವಸ್ಥೆ ಮಾಡಿ ಶಿರಾ ತಾಲೂಕಿಗೆ ನೀರು ಹರಿಸಿದರೆ ಆರ್ಥಿಕ ಹೊರೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲಿರುವ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ರೂಪಿಸಬಹುದಾಗಿದೆ ನಂತರ ಉಳಿದ ನೀರನ್ನು ಮದಲೂರು ಕೆರೆಯ ನಂತರದ ಗ್ರಾಮಗಳಿಗೆ ಹರಿಸಬಹುದು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ೪ರ ಬಲಭಾಗದಲ್ಲಿ ಬರುವ ಅನೇಕ ಗ್ರಾಮಗಳು ಕಡಿಮೆ ಮಳೆ ಬರುವ ಪ್ರದೇಶವಾಗಿದ್ದು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕೊಳವೆ ಬಾವಿ ನೀರು ಹೆಚ್ಚು ಹಾನಿಕರವಾದ ಲವಣಾಂಶಗಳಿಂದ ಕೂಡಿರುವುದರಿಂದ ಕೂಡಲೇ ಎತ್ತಿನಹೊಳೆ ನೀರನ್ನು ಆ ಭಾಗಗಳಿಗೆ ಹರಿಸುವುದು ಅತ್ಯವಶ್ಯಕವಾಗಿದೆ. ಇದರಿಂದ ಹಾಲ್ದೊಡ್ಡೇರಿ, ದಾಸರಳ್ಳಿ, ಸಲುಪರಹಳ್ಳಿ ,ಗಂಜಲಗುಂಟೆ, ತಾಳಗುಂದ,ಬೆಟ್ಟನಹಳ್ಳಿ, ಚನ್ನಪ್ಪನಹಳ್ಳಿ ,ಸೀಬಿ, ದೇವನಹಳ್ಳಿ, ಜೋಗಿಹಳ್ಳಿ, ಅಗ್ರಹಾರ, ತರೂರು, ಕಾಳೇನಹಳ್ಳಿ, ಗೊಲ್ಲರಟ್ಟಿ, ಬ್ರಹ್ಮಸಂದ್ರ, ಬಸವನಹಳ್ಳಿ, ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಅಂತರ್ಜಲ ಅಭಿವೃದ್ಧಿಗೂ ಅನುಕೂಲವಾಗುತ್ತದೆ ಎಂದರು.
ಎಲ್ಲಾ ಕೆರೆಗಳಿಗೆ ಶೇಕಡ ನೂರರಷ್ಟು ನೀರನ್ನು ತುಂಬಿಸ ಬೇಕಾಗಿದೆ. ಇಷ್ಟೆಲ್ಲಾ ಕೆರೆಗೆ ನೀರು ಹರಿಸ ಕೇವಲ ೦.೧ ಟಿಎಂಸಿ ಅಷ್ಟು ನೀರು ಮಾತ್ರ ವಿನಿಯೋಗವಾಗುತ್ತದೆ, ಉಳಿದ ೦.೪೧೪ ಟಿಎಂಸಿ ನೀರನ್ನು ಮದಲೂರು ಕೆರೆಯ ನಂತರದ ಉಳಿದ ಗ್ರಾಮಗಳಿಗೆ ಹರಿಸಬಹುದು, ಈ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್. ಮಂಜುನಾಥ್, ಗ್ರಾಮಾಂತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾರೋಗೆರೆ ಮಹೇಶ, ಡಿ.ಸಿ.ಅಶೋಕ್, ಸೋರೆಕುಂಟೆ ಸತ್ಯನಾರಾಯಣ, ಭೂವನಹಳ್ಳಿ ಸತ್ಯನಾರಾಯಣ, ರಾಕೇಶ್, ಗುರುಮೂರ್ತಿ, ಅಜಯ್ ಕುಮಾರ್ ಗಾಳಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಎತ್ತಿನಹೊಳೆ ಯೋಜನೆ ಆರ್ಥಿಕ ಹೊರೆ ಇಲ್ಲದೆ ನೀರು ಹರಿಸಿ
Get real time updates directly on you device, subscribe now.
Prev Post
Next Post
Comments are closed.