ಶಿರಾ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಕಾಳಜಿಯಿಂದ ತುಂಬು ಗರ್ಭಿಣಿಯೊಬ್ಬರಿಗೆ ಸುಸೂತ್ರವಾಗಿ ಹೆರಿಗೆ ನಡೆದಿರುವ ಘಟನೆ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಮೇಣಿಗನಹಟ್ಟಿಯಲ್ಲಿ ಶನಿವಾರ ಜರುಗಿದೆ.
ಮೇಣಿಗನಹಟ್ಟಿಯ ಬಾಲಕೃಷ್ಣಪ್ಪನವರ ಮಗಳು ಸುಮಿತ್ರ ಎಂಬಾಕೆ ಹೆರಿಗೆ ನೋವಿನಿಂದ ಪರಿತಪಿಸಿ ಮೂರು ದಿನಗಳ ಹಿಂದೆ ಬುಕ್ಕಾಪಟ್ಟಣ ಪ್ರಾಥಮಿಕ ಸರ್ಕಾರಿ ಆಸ್ಪತ್ರೆ ವೈದ್ಯರ ಬಳಿಗೆ ಧಾವಿಸಿದ್ದರು. ಅಲ್ಲಿನ ವೈದ್ಯರು ಶಿರಾ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರು ಎನ್ನಲಾಗಿದೆ. ಕೊರೋನಾ ಭಯದಲ್ಲಿ ದೇಶವೇ ಲಾಕ್‌ಡೌನ್ ಆಗಿರುವಾಗ, ಇದೇ ತಿಂಗಳ ಮೂರನೇ ತಾರೀಕು ವಾಹನಗಳ ಅಲಭ್ಯತೆ ನಡುವೆಯೂ ಹೇಗೋ ಶಿರಾ ಆಸ್ಪತ್ರೆಗೆ ಬಂದಿದ್ದ ಸುಮಿತ್ರಾಗೆ ಬೆಡ್ ಇಲ್ಲವೆಂಬ ಕಾರಣದಿಂದ ಊರಿಗೆ ವಾಪಸ್ ಕಳುಹಿಸಲಾಗಿತ್ತು.
ಗ್ರಾಮಕ್ಕೆ ವಾಪಸ್ ಬಂದ ಮಾರನೇ ದಿನವೇ ಅಂದರೆ ಶನಿವಾರ ಆಕೆಗೆ ಮತ್ತೆ ಹೆರಿಗೆ ನೋವು ಉಲ್ಬಣಿಸಿದ್ದು, ಶಿರಾಕ್ಕೆ ಹೋಗುವುದು ಅನಿವಾರ್ಯವಾಗಿದೆ. 108ಕ್ಕೆ ಕರೆ ಮಾಡಿದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಇಲ್ಲಾ. ಇತ್ತ ಖಾಸಗಿ ವಾಹನಗಳಲ್ಲಿ ತೆರಳಲು ಪೊಲೀಸ್ ಭಯ. ಈ ವೇಳೆ ಸುಮಿತ್ರಮ್ಮಳ ತಂದೆ, ತಮ್ಮ ಸಂಬಂಧಿಕ ಗಿಡ್ಡಪ್ಪನವರ ಸಹಾಯ ಕೇಳಲಾಗಿ, ಗಿಡ್ಡಪ್ಪ ಗರ್ಭಿಣಿಯ ಪರಿಸ್ಥಿತಿಯನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಗಮನಕ್ಕೆ ತಂದು ಎರಡು ಜೀವ ಅಸಹಾಯಕ ಸ್ಥಿತಿಯಲ್ಲಿ ಇರುವುದನ್ನ ವಿವರಿಸಿದರು.
ಸಚಿವರಿಂದ ಶಿರಾ ತಹಸೀಲ್ದಾರರ ಗಮನಕ್ಕೆ ವಿಷಯ ತಲುಪಿ, 108ರ ಅಂಬುಲೆನ್ಸ್ ವಾಹನ ಕಾಯುವುದು ಬೇಡ. ನೀವೇ ಯಾವುದಾದರೂ ಖಾಸಗಿ ವಾಹನ ಮಾಡಿಕೊಂಡು ಬನ್ನಿ. ಅದರ ವೆಚ್ಚವನ್ನೂ ನಾವೇ ಕೊಡುತ್ತೇವೆ ಅನ್ನೋ ಭರವಸೆ ಗಿಡ್ಡಪ್ಪ ನವರಿಗೆ ದೊರೆಯಿತು. ಅದಕ್ಕೆ ಸರಿಯಾಗಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಗರ್ಭಿಣಿಯನ್ನು ಶಿರಾ ಆಸ್ಪತ್ರೆಗೆ ಕರೆ ತರಲಾಯಿತು.
ಕರ್ತವ್ಯ ನಿರತ ವೈದ್ಯರು, ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಸುಮಿತ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ತಾಯಿ ಮತ್ತು ಮಗು ಅರೋಗ್ಯದಿಂದಿರುವುದಾಗಿ ತಿಳಿದುಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲಾ ಸಚಿವರ ಕಾಳಜಿ ದುರಂತದಿಂದ ಪಾರಾದ ತುಂಬು ಗರ್ಭಿಣಿ!
Get real time updates directly on you device, subscribe now.
Prev Post
Next Post
Comments are closed.