ತುಮಕೂರು: ಮನುಷ್ಯನ ಆರೋಗ್ಯಕ್ಕೆ ದಂತ ಬಹಳ ಮುಖ್ಯ, ಹಾಗಾಗಿ ಪ್ರತಿಯೊಬ್ಬರೂ ದಂತದ ರಕ್ಷಣೆ ಬಗ್ಗೆ ಗಮನ ಹರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರಾಗೃಹ, ಶ್ರೀಸಿದ್ದಾರ್ಥ ದಂತ ವೈದ್ಯಕೀಯ ಕಾಲೇಜು ಮತ್ತು ಕಾನೂನು ಸೇವೆಗಳ ಕಾರ್ಯಪಡೆಯ ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ದಂತ ತಪಾಸಣೆ ಮತ್ತು ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಸದಾ ಲವಲವಿಕೆಯಿಂದ ಆರೋಗ್ಯದಿಂದಿರಲು ಹಾಗೂ ಬಾಹ್ಯ ಸೌಂದರ್ಯಕ್ಕೂ ಸಹ ದಂತ ಬಹು ಮುಖ್ಯ, ದಂತ ಆರೋಗ್ಯವಾಗಿದ್ದರೆ ಮನುಷ್ಯ ಸಂಪೂರ್ಣ ಆರೋಗ್ಯವಾಗಿದ್ದಂತೆ, ಇದನ್ನು ಗಮನದಲ್ಲಿಟ್ಟುಕೊಂಡು ದಂತ ರಕ್ಷಣೆಗೆ ಮುಂದಾಗಬೇಕು, ಯಾರೂ ಸಹ ದಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದರು.
ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಜಗಿದರೆ ಮಾತ್ರ ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ಆಹಾರ ಜಗಿಯಬೇಕಾದರೆ ದಂತ ಸದೃಢವಾಗಿರಬೇಕು, ಆದ್ದರಿಂದ ದಂತ ರಕ್ಷಣೆ ಬಹು ಮುಖ್ಯವಾಗಿದೆ, ನಿಮಗೆ ಯಾವುದೇ ಸಮಸ್ಯೆ ಇದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಖೈದಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮಾತನಾಡಿ, ನಮ್ಮ ಹಕ್ಕುಗಳನ್ನು ನಾವು ಸಂವಿಧನಾತ್ಮಕವಾಗಿ ಪಡೆಯಬೇಕೇ ಹೊರತು ಸಂವಿಧಾನದ ವಿರುದ್ಧವಾಗಿ ಅಲ್ಲ ಎಂದು ಸಲಹೆ ನೀಡಿ, ತಾವೆಲ್ಲರೂ ಇಲ್ಲಿಂದ ಹೋದ ಮೇಲೆ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಉತ್ತಮವಾಗಿ ಬಾಳಬೇಕು ಎಂದು ತಿಳಿಸಿದರು.
ದಂತ ವೈದ್ಯ ಡಾ.ಸಂಜಯ್ ನಾಯಕ್.ಟಿ.ಕೆ. ಮಾತನಾಡಿ, ಮನುಷ್ಯನ ಸೌಂದರ್ಯವಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಲ್ಲೂ ಹಲ್ಲಿನ ಪಾತ್ರ ಮುಖ್ಯ, ಹಲ್ಲಿನ ಸಮಸ್ಯೆ ದೇಹದ ಇತರೆ ಅಂಗಾಂಗಗಳ ಸಮಸ್ಯೆಗೂ ಗುರಿ ಮಾಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಮ್ಮ ಎಂ. ಮಾತನಾಡಿ, ಜಿಲ್ಲಾ ಕಾರಾಗೃಹದಲ್ಲಿ ಉಚಿತ ದಂತ ತಪಾಸಣೆ ಮತ್ತು ಕಾನೂನು ಅರಿವು ಶಿಬಿರ ಹಮ್ಮಿಕೊಂಡಿರುವುದು ತುಂಬಾ ಸಂತೋಷದಾಯಕವಾಗಿದೆ, ಈ ಕಾರ್ಯಕ್ರಮ ಹೆಚ್ಚು ಹಮ್ಮಿಕೊಳ್ಳುವುದರಿಂದ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಬಹುದು, ಮುಖ್ಯವಾಗಿ ನಮ್ಮ ದಂತವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ಜೈಲರ್ ಪಿ.ವಿ.ಕೋಪರ್ಡೆ, ಸಹಾಯಕ ಜೈಲರ್.ಕೆ.ಜಿ. ಭಾಂಡಾರೆ, ಬಿ.ವೈ.ಬಿಜ್ಜೂರ, ರಾಮಚಂದ್ರ, ಸಿದ್ದಾರ್ಥ ದಂತ ವೈದ್ಯಕೀಯ ಶಿಬಿರದ ನುರಿತ ವೈದ್ಯರಾದ ಡಾ.ಆನಂದ, ಡಾ.ಮೋಹನ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಹೇಮಾನಂದ್, ಕಾನೂನು ಸೇವಾ ಕಾರ್ಯಪಡೆಯ ಚಂದ್ರಕಲಾ, ಸದಾಶಿವಯ್ಯ, ಜಿಲ್ಲಾ ಕಾರಾಗೃಹ ಪ್ಯಾನಲ್ ವಕೀಲ ಕೆ. ಗಣೇಶ ಪ್ರಸಾದ್, ಸುಧಾ ಭಾಗವಹಿಸಿದ್ದರು.
ಮನುಷ್ಯನ ಆರೋಗ್ಯಕ್ಕೆ ದಂತ ರಕ್ಷಣೆ ಮುಖ್ಯ
Get real time updates directly on you device, subscribe now.
Prev Post
Next Post
Comments are closed.