ಕೊರಟಗೆರೆ: ನಾನು ವಿದೇಶದಲ್ಲಿ ವ್ಯಾಸಂಗ ಮಾಡಿದ್ದೀನಿ, ಭಾರತ ದೇಶದ ಅತ್ಯುನ್ನತ ಡಾಕ್ಟರೇಟ್ ಪದವಿ ಪಡೆದಿದ್ದೇನೆ, ಕೊರಟಗೆರೆ- ಮಧುಗಿರಿ ಕ್ಷೇತ್ರದ ಶಾಸಕನಾಗಿ, ರಾಜ್ಯದ ಸಚಿವ ಮತ್ತು ಡಿಸಿಎಂ ಆಗಿ ಸೇವೆ ಸಲ್ಲಿಸಿದ್ದೇನೆ, ಆದ್ರೆ ಈಗಲೂ ನನ್ನನ್ನು ದೇವಸ್ಥಾನದ ಒಳಗಡೆ ಸೇರಿಸಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದರು.
ಕೊರಟಗೆರೆ ತಾಲೂಕು ಆಡಳಿತ, ಸಮಾಜ ಕಲ್ಯಾಣ, ತಾಪಂ ಮತ್ತು ಪಪಂ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ರ ೧೩೧ನೇ ಜಯಂತಿ ಮತ್ತುಡಾ.ಬಾಬು ಜಗಜೀವನ ರಾಂರ ೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ದೇವಾಲಯದ ಒಳಗೆ ದೇವರಿಗೆ ಪೂಜೆ ಸಲ್ಲಿಸಲು ಹೋಗ್ತೀನಿ, ಆದ್ರೆ ಅರ್ಚಕರು ಬಾಗಿಲ ಬಳಿಯೇ ಬಂದು ಮಂಗಳಾರತಿ ಕೋಡ್ತಾರೆ, ನಾನು ಒಳಗೆ ಹೋದ್ರೆ ಮೈಲಿಗೆ ಆಗುತ್ತೆ ಎಂಬ ಭಯ ಮತ್ತು ಜಾತಿಯ ವ್ಯಾಮೋಹ ಪ್ರಸ್ತುತ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ, ಕುಡಿಯುವ ನೀರಿನಲ್ಲಿ ಸಹ ಜಾತಿಯ ಪ್ರತಿಬಿಂಬ ಇನ್ನೂ ನಮ್ಮಲ್ಲಿ ಕಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವಣ್ಣ ಹೇಳಿದ್ರು ಅಂತರ್ ಜಾತಿಯ ವಿವಾಹ ಆದ್ರೆ ಜಾತೀಯತೆ ಹೋಗುತ್ತೆ ಅಂತಾ, ಆದ್ರೆ ಈಗ ಅಂತರ್ ಜಾತಿಯ ವಿವಾಹ ಆದ್ರೆ ಸಮಾಜದಲ್ಲಿ ನೇಣಿಗೆ ಹಾಕ್ತಾರೆ, ಭಾರತ ದೇಶದಲ್ಲಿನ ಕೀಳು ಜಾತಿಯ ವ್ಯವಸ್ಥೆಯು ವಿಶ್ವದ ಯಾವುದೇ ದೇಶದಲ್ಲಿಯು ನಾನು ನೋಡಿಲ್ಲ, ಮೇಲು ಕೀಳು ಎಂಬ ಭಾವನೆ ಸಮಾಜದಲ್ಲಿ ರಕ್ತಗತವಾಗಿ ಬಂದಿದೆ, ಅಷ್ಟು ಸುಲಭವಾಗಿ ಅದು ನಮ್ಮಿಂದ ದೂರವಾಗಲ್ಲ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಂ ಯಾರೊಬ್ಬರ ಆಸ್ತಿಯಲ್ಲ, ರಾಷ್ಟ್ರೀಯ ಹಬ್ಬವನ್ನು ರಾಷ್ಟ್ರ ಮತ್ತು ರಾಜ್ಯ ಸರಕಾರ ಹಾಗೂ ಎಲ್ಲಾ ಸಮುದಾಯ ಸೇರಿ ಆಚರಣೆ ಮಾಡಬೇಕಿದೆ, ಮಹಾಭಾರತ, ರಾಮಾಯಣ, ಭಾಗವದ್ಗೀತೆಯ ಸಾರಂಶವನ್ನು ಯಾರೊಬ್ಬರು ಸಹ ಪಾಲನೆ ಮಾಡೋದಿಲ್ಲ, ಸ್ವಾಮಿ ವಿವೇಕಾನಂದ ಬಿಜೆಪಿ ಪಕ್ಷದವರ ಆಸ್ತಿಯಲ್ಲ ಎಂದು ಕಿಡಿಕಾರಿದರು.
ಕೊರಟಗೆರೆ ತಹಶೀಲ್ದಾರ್ ನಾಹೀದಾ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆದರ್ಶವೇ ನಮ್ಮೆಲ್ಲರಿಗೆ ದಾರಿದೀಪ, ಶಿಕ್ಷಣದಿಂದ ಮಾತ್ರ ಬಡತನ ಮತ್ತು ಜಾತೀಯತೆ ನಿವಾರಣೆ ಸಾಧ್ಯ, ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಿ ಶಿಕ್ಷಣಕ್ಕೆ ಆದ್ಯತೆ ನೀಡುವುದೆ ನಮ್ಮೆಲ್ಲರ ಪ್ರಮುಖ ಗುರಿಯಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಓ ದೊಡ್ಡಸಿದ್ದಯ್ಯ, ಬಿಇಓ ಸುಧಾಕರ್, ಪಪಂ ಮುಖ್ಯಾಧಿಕಾರಿ ಭಾಗ್ಯ, ಸಿಪಿಐ ಸಿದ್ದರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಉಮಾದೇವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಪಪಂ ಅಧ್ಯಕ್ಷೆ ಕಾವ್ಯರಮೇಶ್, ಉಪಾಧ್ಯಕ್ಷೆ ಭಾರತಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ನಟರಾಜ್, ಸದಸ್ಯ ಓಬಳರಾಜು ಇತರರು ಇದ್ದರು.
ಭಾರತದಲ್ಲಿ ಕೀಳು ಜಾತಿ ವ್ಯವಸ್ಥೆ ಇನ್ನೂ ಜೀವಂತವಿದೆ
ನಾನು ದೇವಾಲಯಕ್ಕೆ ಹೋದ್ರೆ ಅರ್ಚಕರೇ ಹೊರಗೆ ಬರ್ತಾರೆ: ಪರಂ
Get real time updates directly on you device, subscribe now.
Prev Post
Comments are closed.