ತುಮಕೂರು: ನಗರದ ಬಿ.ಹೆಚ್.ರಸ್ತೆಯಲ್ಲಿ ಕಳೆದ ೧೧ ವರ್ಷದಿಂದ ಬೆಳೆಸಿದ್ದ ಬೇವಿನ ಮರಗಳನ್ನು ಗುತ್ತಿಗೆದಾರರು ಮತ್ತೆ ಯಾವುದೇ ಅನುಮತಿ ಪಡೆಯದೆ ರಾತ್ರೋರಾತ್ರಿ ಕಡಿದು ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಿ.ಹೆಚ್.ರಸ್ತೆಯ ಮಧ್ಯ ಭಾಗದಲ್ಲಿ ಕಳೆದ ೧೧ ವರ್ಷಗಳಿಂದ ಮರಗಳನ್ನು ಬೆಳೆಸಲಾಗಿತ್ತು, ಈ ಪೈಕಿ ಬೇವಿನ ಮರಗಳು ಅತಿ ಹೆಚ್ಚಾಗಿದ್ದು, ಚೆನ್ನಾಗಿ ಬೆಳೆದು ನಿಂತಿದ್ದವು, ಆದರೆ ಪಾಲಿಕೆಯಿಂದ ಜಾಹೀರಾತು ನಾಮಫಲಕಗಳನ್ನು ಅಳವಡಿಸುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಪಾಲಿಕೆಯಿಂದಾಗಲಿ ಅಥವಾ ಅರಣ್ಯ ಇಲಾಖೆಯಿಂದಾಗಲಿ ಯಾವುದೇ ಅನುಮತಿ ಪಡೆಯದೇ ಏಕಾಏಕಿ ರಾತ್ರಿ ೧೧ ಬೇವಿನ ಮರಗಳ ಮಾರಣ ಹೋಮ ನಡೆಸಿದ್ದಾರೆ.
ಮರಗಳ ಕಡಿದಿರುವುದನ್ನು ಗಮನಿಸಿದ ನಡೆಸಿರುವುದನ್ನು ಬೆಳಗ್ಗೆ ನೋಡಿದ ಪರಿಸರ ಪ್ರೇಮಿಗಳು ತಕ್ಷಣ ರಸ್ತೆಗಿಳಿದು ಮರಗಳನ್ನು ಕಡಿದು ಹಾಕಿರುವ ಗುತ್ತಿಗೆದಾರ ಮತ್ತು ಸಿಬ್ಬಂದಿಯನ್ನು ಬಂಧಿಸಲೇಬೇಕು ಎಂದು ಆಗ್ರಹಿಸಿದರು. ಕಳೆದ ೩ ತಿಂಗಳ ಹಿಂದೆ ಸದರಿ ಗುತ್ತಿಗೆದಾರ ಇದೇ ರೀತಿಯ ಬಿ.ಹೆಚ್.ರಸ್ತೆಯಲ್ಲಿ ಮರಗಳನ್ನು ಕಡಿದು ಹಾಕಿದ್ದರು. ಇದುವರೆಗೂ ಆತನ ವಿರುದ್ಧ ಯಾವುದೇ ಕ್ರಮ ಆಗದಿರುವುದು ಮತ್ತೆ ಈಗ ಮರಗಳ ಮಾರಣ ಹೋಮಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಪ್ರೊ.ಸಿದ್ದಪ್ಪ ಮಾತನಾಡಿ, ಕಳೆದ ೧೧ ವರ್ಷದಿಂದ ಬೆಳೆಸಿದ ಸಾಲು ಬೇವಿನ ಮರಗಳನ್ನು ಜಾಹೀರಾತು ನಾಮಫಲಕ ಹಾಕುವ ಸಲುವಾಗಿ ಗುತ್ತಿಗೆದಾರ ರಾತ್ರೋರಾತ್ರಿ ಮರಗಳನ್ನು ಕಡಿಸಿ ಹಾಕಿದ್ದಾರೆ, ಮರ ಕಡಿದು ಹಾಕಿರುವ ಗುತ್ತಿಗೆದಾರ ಮತ್ತು ಸಿಬ್ಬಂದಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕರಾಜೇಂದ್ರ ಪರಿಶೀಲನೆ ನಡೆಸಿ, ರಸ್ತೆಯಲ್ಲಿದ್ದ ಅದ್ಭುತವಾದ ಮರಗಳನ್ನು ಕಡಿದಿರುವುದು ಅಕ್ಷಮ್ಯ ಅಪರಾಧ, ಹಿಂದೆಯೂ ೪ ಮರ ಕಡಿಯಲಾಗಿತ್ತು, ಈ ಮರಗಳನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ, ಹಾಗಾಗಿ ಮರ ಕಡಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಕಳೆದ ೩ ತಿಂಗಳ ಹಿಂದೆ ಗುತ್ತಿಗೆದಾರ ಇದೇ ರೀತಿ ಮರಗಳನ್ನು ಕಡಿಸಿದ್ದರು, ಆ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಅರಣ್ಯ ಇಲಾಖೆಗೆ ದೂರು ನೀಡಿದ್ದೆವು, ಆದರೆ ಇದುವರೆಗೂ ಯಾವುದೇ ಕ್ರಮ ಆದಂತೆ ಕಂಡು ಬಂದಿಲ್ಲ, ಈ ಬಾರಿ ಕಠಿಣ ಕ್ರಮಕೈಗೊಳ್ಳುವಂತೆ ಮತ್ತೊಮ್ಮೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಕಳೆದ ೨೦೨೦ ರಲ್ಲಿ ಪಾಲಿಕೆ ವತಿಯಿಂದ ಜಾಹೀರಾತು ನಾಮಫಲಗಳನ್ನು ಅಳವಡಿಸಲು ಟೆಂಡರ್ ಗುತ್ತಿಗೆ ನೀಡಲಾಗಿದೆ. ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಹೀರಾತು ನಾಮಫಲಕ ಅಳಪಡಿಸುವ ಗುತ್ತಿಗೆಯನ್ನು ಸುಮಾರು ೧೫ ಲಕ್ಷ ರೂ. ಗಳಿಗೆ ನೀಡಲಾಗಿದೆ, ಆದರೆ ಇವರಿಗೆ ಕಡಿಯಲು ಯಾರೂ ಅನುಮತಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮೇಯರ್ ಬಿ.ಜಿ.ಕೃಷ್ಣಪ್ಪ, ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯಾಜ್, ಧರಣೇಂದ್ರ ಕುಮಾರ್, ಪಾಲಿಕೆ ಸದಸ್ಯರಾದ ಎ.ಶ್ರೀನಿವಾಸ್, ಟಿ.ಕೆ.ನರಸಿಂಹಮೂರ್ತಿ, ಮಲ್ಲಿಕಾರ್ಜುನಯ್ಯ, ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್, ಎಸ್.ಜಿ.ಚಂದ್ರಮೌಳಿ ಸೇರಿದಂತೆ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಹಾಜರಿದ್ದು ತಕ್ಷಣ ಮರ ಕಡಿದವರನ್ನು ಬಂಧಿಸಲೇಬೇಕು ಎಂದು ಪಾಲಿಕೆಯ ಆಡಳಿತವನ್ನು ಒತ್ತಾಯಿಸಿದರು.
ಬಿ.ಹೆಚ್.ರಸ್ತೆಯಲ್ಲಿ ಮರಗಳ ಮಾರಣ ಹೋಮಕ್ಕೆ ಆಕ್ರೋಶ
Get real time updates directly on you device, subscribe now.
Next Post
Comments are closed.