ಅಲೆಮಾರಿಗಳ ಅಭಿವೃದ್ಧಿಗೆ ಒಕ್ಕೂಟ ಆರಂಭ: ಲೋಕೇಶ್ವರಪ್ಪ

256

Get real time updates directly on you device, subscribe now.

ತುಮಕೂರು: ಪ್ರವರ್ಗ- 1 ರಲ್ಲಿ ಹಿಂದುಳಿದಿರುವ ಪ್ರಮುಖ ಮತ್ತು ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಒಕ್ಕೂಟ ರಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವರ್ಗ- 1ರ ಜಾತಿಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವರ್ಗ 1ರ ಮಕ್ಕಳಿಗೆ ಆದಾಯ ಮಿತಿ ಇಲ್ಲದೆ, ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು, ಕಳೆದ ವರ್ಷದಿಂದ ವಿಶ್ವವಿದ್ಯಾಲಯ ಪ್ರವರ್ಗ 1ರ ಮೀಸಲಾತಿ ತೆಗೆದು ಇತರೆ ಹಿಂದುಳಿದ ವರ್ಗ ಎಂದು ಸೇರಿಸಿರುವುದರಿಂದ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಸರಕಾರ ಇದುವರೆಗೂ ಇದ್ದ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ತೆಗೆದು ಹಾಕಿದ ಪರಿಣಾಮ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಜನರೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ, ಪ್ರವರ್ಗ 1ಕ್ಕೆ ಮೀಸಲಾತಿ ನೀಡಬೇಕು, ಮೂರು ನಿಗಮಗಳಿದ್ದರೂ ಸೂಕ್ತ ಅನುದಾನ ನೀಡಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ತೊಂಭತ್ತು ವಿಧಾನಸಭೆ ಮತ್ತು ಐದು ಲೋಕಸಭಾ ಕ್ಷೇತ್ರದಲ್ಲಿ ಪ್ರವರ್ಗ 1ರ ಮತದಾರರೇ ನಿರ್ಣಾಯಕರಾಗಿದ್ದಾರೆ, ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರವರ್ಗ 1ರ ಜನಪ್ರತಿನಿಧಿಗಳಾದ ಪೂರ್ಣಿಮಾ, ಲಾಲಾಜೀ ಮಂಡಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒಕ್ಕೂಟದ ಒತ್ತಾಯವಾಗಿದೆ.ಪ್ರ್ರವರ್ಗ1ರ ಜಾತಿಗಳನ್ನು ಕಡೆಗಣಿಸಬಾರದು, ಒಗ್ಗೂಡಿರುವ ಪ್ರವರ್ಗ1ರ ಒಕ್ಕೂಟಕ್ಕೆ ಎಲ್ಲ ಸಮುದಾಯಗಳ ಸ್ವಾಮೀಜಿಗಳು,ಗಣ್ಯರು ಬೆಂಬಲ ಕೊಟ್ಟಿದ್ದಾರೆ,ಸಮುದಾಯ ಒಗ್ಗಟ್ಟಾಗಿ ಸಮುದಾಯದ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಶ್ರಮಿಸಲಾಗುವುದು ಎಂದ ಅವರು, ದಾವಣಗೆರೆ, ಬೆಂಗಳೂರು ವಿವಿಗಳಲ್ಲಿ ಪ್ರವರ್ಗ1ರ ಮೀಸಲಾತಿಯನ್ನು ಕೊಡದೇ ಇರುವ ಬಗ್ಗೆ ಗಮನ ನೀಡಿದ್ದು, ಹೋರಾಟ ಮಾಡಲಾಗುವುದು ಎಂದರು.
ಎಪ್ಪತ್ತೈದು ಕೆಜಿ ಇರುವವರ ಜೊತೆ ಇಪ್ಪತ್ತೈದು ಕೆಜಿ ಇರುವವರು ಮಲ್ಲಯುದ್ದದಲ್ಲಿ ಸಮಬಲದ ಹೋರಾಟ ಮಾಡಲು ಸಾಧ್ಯವೇ? ನಾವೇನು ಭಿಕ್ಷೆ ಕೇಳುತ್ತಿಲ್ಲ, ನಮ್ಮ ಹಕ್ಕು ಕೇಳುತ್ತಿದ್ದೇವೆ.ಎಲ್ಲ ಕಡೆ ಮೀಸಲಾತಿ ನೀಡಬೇಕು ಆಗ್ರಹಿಸಿ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಚೆಂಗಾವಿ ಕರಿಯಣ್ಣ ಮಾತನಾಡಿ,ಕುಲಶಾಸ್ತ್ರೀಯ ಅನ್ಯಾಯವಾಗಿರುವ ಜಾತಿಗಳನ್ನು ಎಸ್ಸಿ ಮತ್ತು ಎಸ್ಟಿ ಪಟ್ಟಿಗೆ ಸೇರಿಸಬೇಕು, ಪ್ರವರ್ಗ1ರ ಸಮುದಾಯಗಳಿಗೆ ವಂಚಿಸಿರುವ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕು ಎಂಬುದು ಒಕ್ಕೂಟದ ಒತ್ತಾಯವಾಗಿದೆ. ಪ್ರವರ್ಗ ಒಂದರ ವಿದ್ಯಾರ್ಥಿಗಳಿಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಬೇಕೆಂಬುದು ಒಕ್ಕೂಟದ ಆಗ್ರಹವಾಗಿದೆ. ಹಾಲಿ ಚಾಲ್ತಿಯಲ್ಲಿದ್ದ ನಿಯಮವನ್ನು ಬದಲಾಯಿಸಿ, ಸಾವಿರಾರು ವರ್ಷಗಳ ಶೋಷಣೆಯ ನಂತರ ಬದುಕು ಕಟ್ಟಿಕೊಳ್ಳುತ್ತಿದ್ದ ಸಮುದಾಯವನ್ನು ಮತ್ತೆ ಅಕ್ಷರ ವಂಚಿತರನ್ನಾಗಿಸುವ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವರ್ಗ 1ರ ಜಾತಿಗಳ ಒಕ್ಕೂಟ ಇದರ ತುಮಕೂರು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಜಿಲ್ಲಾಧ್ಯಕ್ಷರಾಗಿ ರೇಣುಕಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ದೊಡ್ಡಮನೆ, ಉಪಾಧ್ಯಕ್ಷರಾಗಿ ಕುಣಿಹಳ್ಳಿ ಮಂಜುನಾಥ್, ಜೈಪ್ರಕಾಶ್, ಶಿವಕುಮಾರ್, ಸತೀಶ್, ಜಯಲಕ್ಷ್ಮಮ್ಮ ಅವರು ಆಯ್ಕೆಯಾಗಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮಹಿಳಾ ಅಧ್ಯಕ್ಷೆ ಪೂರ್ಣಿಮಾ ಜೋಗಿ, ಕೆ.ಜಿ.ಹನುಮಂತರಾವ್, ಕುಣಿಹಳ್ಳಿ ಮಂಜುನಾಥ್, ಜಯಲಕ್ಷ್ಮಮ್ಮ, ರಾಜೇಶ್ ದೊಡ್ಡಮನೆ, ಸತೀಶ್, ಹೆಚ್.ಆರ್.ರೇಣುಕಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!