ತುಮಕೂರು: ಪಠ್ಯಕ್ರಮದಲ್ಲಿ ರಾಮಯಣ- ಭಗವದ್ಗೀತೆ ಅಳವಡಿಸುವ ಮಾತಿಲ್ಲ, ಅದರ ಬದಲಾಗಿ ನೈತಿಕ ಶಿಕ್ಷಣ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ತಾಲ್ಲೂಕಿನ ಕೋರಾದಲ್ಲಿ ಸರ್ವಮಂಗಳ ನಾಗಯ್ಯರವರ ಸ್ಮರಣಾರ್ಥ ಮಮತಾ ಹರ್ಷ ದಂಪತಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಅನ್ನ, ಅಕ್ಷರ ಮತ್ತು ಆರೋಗ್ಯ ದಾನ ಅತ್ಯಂತ ಮುಖ್ಯವಾದುದ್ದು,ಇಂತಹ ಹೊತ್ತಿನಲ್ಲಿ ಹರ್ಷ ದಂಪತಿ ತಮ್ಮ ತಾಯಿಯ ಹೆಸರಿನಲ್ಲಿ 20 ಸುಸಜ್ಜಿತ ಕೊಠಡಿಗಳನ್ನು ಒಳಗೊಂಡ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ, ಅದಕ್ಕಾಗಿ ನಾವೆಲ್ಲರೂ ಹರ್ಷ ಮತ್ತು ಕುಟುಂಬ ವರ್ಗದವರಿಗೆ ಧನ್ಯವಾದ ಸಲ್ಲಿಸಬೇಕಾಗಿದೆ ಎಂದರು.
ದಾನಿಗಳು ನಿರ್ಮಿಸಿಕೊಟ್ಟಿರುವ ಈ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನ್ಯಾಚುರಲ್ ಗ್ರೋಥ್ ಗೆ ಹೆಚ್ಚಿನ ಒತ್ತು ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದೇನೆ, ಇಲ್ಲಿ ಹೈಸ್ಕೂಲ್ ತೆರೆಯಲು ಅಗತ್ಯ ಮಕ್ಕಳ ಸಂಖ್ಯೆ ದೊರೆತರೆ ಕೂಡಲೇ ಅನುಮತಿ ನೀಡಲಾಗುವುದು ಎಂದರು.
ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಇದೊಂದು ಪುಣ್ಯದ ಕೆಲಸ, ಹರ್ಷ ಅವರು ತಮ್ಮ ತಾಯಿಯ ನೆನಪಿಗಾಗಿ ಇಂತಹದೊಂದು ಶಾಲೆ ಕಟ್ಟಡವನ್ನು ಕಟ್ಟಿಕೊಟ್ಟಿದ್ದಾರೆ, ಶಿಕ್ಷಣವೇ ಮರೀಚಿಕೆಯಾಗಿರುವ ದಿನಗಳಲ್ಲಿ ಮಕ್ಕಳಿಗೆ ಅನುಕೂಲಕ್ಕೆ ದಾನಿಗಳು ಮುಂದೆ ಬಂದಿರುವುದು ಸಂತೋಷದ ವಿಚಾರವಾಗಿದೆ, ಸ್ವಾತಂತ್ರ ಪೂರ್ವದಲ್ಲಿ ಶೇ.18 ರಷ್ಟಿದ್ದ ಸಾಕ್ಷರತೆ ಸಂಖ್ಯೆ ಇಂದು 80 ಕ್ಕೆ ತಲುಪಿರುವುದಕ್ಕೆ ಇಂತಹ ದಾನಿಗಳ ಸರಕಾರದೊಂದಿಗೆ ಕೈಜೋಡಿಸಿರುವುದೇ ಕಾರಣ, ಈ ದಾನಿಗಳ ಶ್ರಮ ಸಾರ್ಥಕವಾಗಬೇಕಾದರೆ ಈ ಶಾಲೆಯಲ್ಲಿ ಓದಿದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಾಗಿ ಬರಬೇಕು ಎಂದು ಸಲಹೆ ನೀಡಿದ ಅವರು, ನಮ್ಮ ಅನುದಾನದಲ್ಲಿ ಶಾಲೆಯ ಕಾಂಪೌಂಡ್ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕೋರ ಗ್ರಾಮಕ್ಕೆ ಸಮೀಪದಲ್ಲಿ ಸುಮಾರು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಇದ್ದು, ಇಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಕೌಶಲ್ಯ ಭರಿತ ಕಾರ್ಮಿಕರನ್ನು ಸೃಷ್ಟಿಸಲು ಕೋರದಲ್ಲಿ ಐಟಿಐ ಕಾಲೇಜು ಶೀಘ್ರದಲ್ಲಿಯೇ ಮಂಜೂರು ಮಾಡಿಕೊಡಲಾಗುವುದು, ಇದರಿಂದ ಸಾವಿರಾರು ಮಕ್ಕಳಿಗೆ ಉದ್ಯೋಗ ದೊರಕಿಸಿ ಕೊಟ್ಟಂತಾಗುತ್ತದೆ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪ್ರಧಾನಿ ನರೇಂದ್ರಮೋದಿ ದೇಶದ ಎಲ್ಲಾ ಹಳ್ಳಿಗಳ ಮಕ್ಕಳು ಶಿಕ್ಷಣ ಕಲಿಯಬೇಕು ಎಂಬ ಸದುದ್ದೇಶದಿಂದ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುತ್ತಿದ್ದಾರೆ. ಇದರ ಪರಿಣಾಮ ಗ್ರಾಮೀಣ ಭಾಗದ ಮಕ್ಕಳು ಸಹ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿ ಬರುತ್ತಿರುವುದು ಸಂತೋಷದ ವಿಚಾರವಾಗಿದೆ. ನಾನು ನನ್ನ ಎಂಪಿ ಗ್ರಾಂಟ್ನಿಂದ ಶಾಲೆಯ ಅಭಿವೃದ್ಧಿಗೆ 10 ಲಕ್ಷ ರೂ. ನೀಡಲಾಗುವುದು, ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ತುಂಬಿ ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕೆಂದು ಕರೆ ನೀಡಿದರು.
ದಾನಿಗಳಾದ ಹರ್ಷ ಮಾತನಾಡಿ, ನಮ್ಮ ತಾಯಿಯವರು ಹುಟ್ಟಿ ಬೆಳೆದ ಊರು ಇದು, ನಮ್ಮ ತಾಯಿಯ ನೆನಪಿನಲ್ಲಿ ಏನಾದರೂ ಒಂದು ಶಾಶ್ವತ ಕಾರ್ಯ ಮಾಡಬೇಕೆಂಬ ಇಚ್ಚೆಯಂತೆ ಇಲ್ಲಿನ ಗ್ರಾಮ ಪಂಚಾಯಿತಿಯನ್ನು ಭೇಟಿ ಮಾಡಿದಾಗ ಅಧ್ಯಕ್ಷರಾಗಿದ್ದ ನಜೀರ್ ಅಹಮದ್ ಅವರು ಎರಡು ಎಕರೆ ಸರಕಾರಿ ಜಾಗವಿದ್ದು, ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು, ಅವರ ಮನವಿಯನ್ನು ಪುರಸ್ಕರಿಸಿ ಈ ಕೆಲಸ ಮಾಡಲಾಗಿದೆ, ಇಲ್ಲಿ ಓದಿದ ಮಕ್ಕಳು ಸಹ ನಮ್ಮಂತೆಯೇ ಇತರರಿಗೆ ಸಹಾಯ ಮಾಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಇದೇ ವೇಳೆ ಊರಿನ ಮುಂಭಾಗದಿಂದ ಶಾಲೆಯವರೆಗೆ ದಾನಿಗಳಾದ ಮಮತಾ ಹರ್ಷ ದಂಪತಿಯನ್ನು ಬೆಳ್ಳಿರಥದಲ್ಲಿ ಕುಳ್ಳರಿಸಿ ಪೂರ್ಣಕುಂಬ ಸ್ವಾಗತ ಹಾಗೂ ವಿವಿಧ ಕಲಾ ತಂಡಗಳ ಮೂಲಕ ಶಾಲಾ ಆವರಣಕ್ಕೆ ತರಲಾಯಿತು. ಕಾರ್ಯಕ್ರಮದಲ್ಲಿ ಮಮತ, ಡಿಡಿಪಿಐ ಸಿ.ನಂಜಯ್ಯ, ಬಿಇಓ ಹನುಮಾನಾಯ್ಕ್, ಕೋರಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಲ್.ನಾಗರತ್ನ ಸೋಮಶೇಖರ್, ಉಪಾಧ್ಯಕ್ಷ ಬಿ.ಮಧು ನಂದೀಶ್, ಎಸ್ಡಿಎಂಸಿ ಅಧ್ಯಕ್ಷ ಶರತ್ಕುಮಾರ್, ಉಪಾದ್ಯಕ್ಷೆ ಯಶೋಧ ಗಂಗಯ್ಯ, ಹಳೆಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಎಲ್.ಕಾಮಯ್ಯ, ಉಪಾಧ್ಯಕ್ಷ ರವಿಶಂಕರ್, ಮುಖ್ಯ ಶಿಕ್ಷಕ ಕೆ.ವೆಂಕಟರಾಮಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ, ಆರ್.ಮಂಜಣ್ಣ, ಡಮರುಗ ಉಮೇಶ್, ನಜೀರ್ ಅಹಮದ್, ನರಸಿಂಹಮೂರ್ತಿ, ಶಿವರಾಜಯ್ಯ ಮತ್ತಿತರರು ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.