ಸರ್ಕಾರಿ ನೌಕರರು ಜವಾಬ್ದಾರಿಯಿಂದ ಕೆಲಸ ಮಾಡಲಿ

ಸಾಧಕರಿಗೆ ಸರ್ವೋತ್ತಮ ಪ್ರಶಸ್ತಿ ಗೌರವ- ಕಾರ್ಯಕ್ರಮ ಯಶಸ್ಸಿಗೆ ನರಸಿಂಹರಾಜು ಶ್ರಮ

165

Get real time updates directly on you device, subscribe now.

ತುಮಕೂರು: ಸರಕಾರಿ ನೌಕರರು ತಮಗೆ ವಹಿಸಿರುವ ಜವಾಬ್ದಾರಿಯ ಬಗ್ಗೆ ನಿರ್ಲಕ್ಷ ಸಲ್ಲದು,ಯಾವುದೋ ಒತ್ತಡಕ್ಕೆ ಮಣಿದು, ಕಾನೂನಿನ ಪ್ರಕಾರ ತಪ್ಪು ಎಂದು ತಿಳಿದಿದ್ದರೂ ಅಂತಹ ತಪ್ಪು ಕೆಲಸ ಮಾಡುವುದು ಮುಂದೊಂದು ದಿನ ದೊಡ್ಡ ಅನಾಹುತಕ್ಕೆ ಕಾರಣವಾಗಬಲ್ಲದು ಎಂದು ಸಿಇಓ ಡಾ.ಕೆ.ವಿದ್ಯಾಕುಮಾರಿ ಎಚ್ಚರಿಸಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸರಕಾರಿ ನೌಕರರ ದಿನಾಚರಣೆ, ಸರ್ವೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಮಗೆ ವಹಿಸಿರುವ ಜವಾಬ್ದಾರಿಯ ಬಗ್ಗೆ ನಿರ್ಲಕ್ಷ ವಹಿಸುವುದರಿಂದ ಮತ್ತೊಬ್ಬ ವ್ಯಕ್ತಿಗೆ ತೊಂದರೆಯಾಗುವುದು ಸಹಜ, ಹೀಗಾಗಿ ಕಾನೂನಿನ ಅಡಿಯಲ್ಲಿ ತಮ್ಮ ಕೆಲಸ ನಿರ್ವಹಿಸಿ, ಅನಗತ್ಯ ಹೊರೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ, ಇದು ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನು ಹಾಳು ಮಾಡುತ್ತದೆ ಎಂದು ಕಿವಿಮಾತು ಹೇಳಿದರು.
ಸರಕಾರ ತನ್ನ ನೌಕರರಿಗಾಗಿಯೇ ಒಂದು ದಿನವನ್ನು ನಿಗದಿಪಡಿಸಿರುವುದು ಸಂತೋಷದ ವಿಚಾರ, ಇದರ ಜೊತೆಗೆ ದಕ್ಷತೆಯಿಂದ, ಇತರೆ ಸಿಬ್ಬಂದಿ ಹುರುದುಂಬಿಸಿ ಕೆಲಸ ಮಾಡಿದ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆ, ಉತ್ತಮ ಸಮಯ ಪಾಲನೆ, ಸೌಜನ್ಯಯುತ ನಡವಳಿಕೆ, ಸಮಸ್ಯೆ ಆಲಿಸುವ ಗುಣ, ಕಾನೂನಿನ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರನು ಒಂದಿಲೊಂದು ದಿನ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಬಹುದು ಎಂದು ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ಸ್ವೀಕರಿಸಿದ ತುಮಕೂರು ಉಪವಿಭಾಗಾಧಿಕಾರಿ ವಿ.ಅಜಯ್ ಮಾತನಾಡಿ, ನನಗೆ ಈ ಪ್ರಶಸ್ತಿ ಲಭಿಸುವುದರ ಹಿಂದೆ ನನ್ನ ಇಡೀ ಕಂದಾಯ ಇಲಾಖೆಯ ಶ್ರಮವಿದೆ, ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಅವರೆಲ್ಲರೂ ನನ್ನ ಜೊತೆ ನಿಂತು ಕೆಲಸ ಮಾಡಿದ್ದಾರೆ, ಹಾಗಾಗಿ ಈ ಪ್ರಶಸ್ತಿಯನ್ನು ಕಂದಾಯ ಇಲಾಖೆಯ ನೌಕರರಿಗೆ ಅರ್ಪಿಸುವುದಾಗಿ ತಿಳಿಸಿದರು.
ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ನರಸಿಂಹರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ನೌಕರರು ಅನಾಮೇಧೆಯರಿಂದ ಬರುತ್ತಿದ್ದ ದೂರಗಳನ್ನು ಎದುರಿಸುವುದು ಕಷ್ಟವಾಗಿತ್ತು, ಈ ಹಿನ್ನೆಲೆಯಲ್ಲಿ ಸಂಘ ನೌಕರರ ಬಗ್ಗೆ ಬರುವ ಅನಾಮೇಧೆಯ ದೂರುಗಳಿಗೆ ಮನ್ನಣೆ ನೀಡದಂತೆ ಮಾಡಿದ ಮನವಿಗೆ ಸರಕಾರ ಸ್ಪಂದಿಸಿ ಆದೇಶ ಹೊರಡಿಸಿದೆ, ಇದರಿಂದಾಗಿ ಅನಗತ್ಯ ಕಿರುಕುಳ ನೀಡುವ ಉದ್ದೇಶದಿಂದ ಬರುತ್ತಿದ್ದ ದೂರುಗಳ ಸಂಖ್ಯೆ ಇಳಿಮುವಾಗಿದೆ, ಅಲ್ಲದೆ ಸರಕಾರಿ ನೌಕರರ ಕುಟುಂಬ ವರ್ಗದವರಿಗೆ ಕ್ಯಾಸ್ಲೆಸ್ ಟ್ರೀಟ್ಮೆಂಟ್, ಆನ್ ಲೈನ್ ಸೇವಾ ವಹಿ ನಿರ್ವಹಣೆ ಸೇರಿದಂತೆ ಹಲವು ಮಾರ್ಪಾಡುಗಳನ್ನು ಮಾಡಿಸಲಾಗಿದೆ ಎಂದರು.
ಸರಕಾರಿ ನೌಕರರಲ್ಲಿ ಶೇ.40 ರಷ್ಟಿರುವ ಮಹಿಳೆಯರಿಗೆ ಅವಕಾಶ ನೀಡುವ ಉದ್ದೇಶದಿಂದ ಶಿವಮೊಗ್ಗ ನಂತರ ತುಮಕೂರಿನಲ್ಲಿ ಮಹಿಳಾ ಘಟಕವನ್ನು ತೆರೆಯಲಾಗುತ್ತಿದೆ, ಮೃತರಾದ ಕೊರೊನ ವಾರಿಯರ್ಸ್ಗಳಿಗೆ 35 ಲಕ್ಷ ರೂ. ಪರಿಹಾರವನ್ನು ಸರಕಾರದಿಂದ ಕೊಡಿಸಲಾಗುತ್ತಿದೆ, ಈ ವರ್ಷದ ನವೆಂಬರ್ ನಲ್ಲಿ ಸುಮಾರು 2.50 ಕೋಟಿ ರೂ. ಖರ್ಚು ಮಾಡಿ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟವನ್ನು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಸರಕಾರಿ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಒಂದು ಕೆಲಸ ನಿರ್ವಹಿಸಲು ಭೌತಿಕ ಶಕ್ತಿಯ ಜೊತೆಗೆ, ಹೃದಯವಂತಿಕೆಯೂ ಮುಖ್ಯ, ಆಗ ಮಾತ್ರ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಸಾಧ್ಯ, ಇಂದು ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ನೌಕರರು ತಮ್ಮ ವ್ಯಾಪ್ತಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ, ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಐಸಿಯು ನಿರ್ವಹಣೆ ಮಾಡಿದ ತಿಮ್ಮಯ್ಯನವರ ಕೆಲಸ ಅವಿಸ್ಮರಣೀಯ ಹಾಗೂ ಸಾಕು ಪ್ರಾಣಿಗಳ ಜೀವ ಉಳಿಸಲು ಹಗಲಿರುಳು ಶ್ರಮಿಸುತ್ತಿರುವ ಪಶು ವೈದ್ಯ ಡಾ.ಮಂಜುನಾಥ್, ಹಾಸ್ಟೆಲ್ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುವ ಅಡುಗೆಯವರಾದ ಬೆಟ್ಟೇಗೌಡ, ನರ್ಸ್ ಮಂಗಳಗೌರಮ್ಮ, ಇವರೆಲ್ಲರ ಸೇವೆಯನ್ನು ನಾವು ಮರೆಯುವಂತಿಲ್ಲ, ಇವರಿಗೆ ಪ್ರಶಸ್ತಿ ನೀಡುವ ಮೂಲಕ ಸರ್ವೋತ್ತಮ ಪ್ರಶಸ್ತಿ ತನ್ನ ಘನತೆ ಹೆಚ್ಚಿಸಿಕೊಂಡಿದೆ ಎಂದರು.
ರಾಜ್ಯದಲ್ಲಿರುವ ಸುಮಾರು 6 ಲಕ್ಷ ಸರಕಾರಿ ನೌಕರರಿಗಾಗಿ ಸರಕಾರ ಶೇ.16 ರಷ್ಟು ಅನುದಾನ ಮೀಸಲಿಡುತ್ತಿದೆ, ನಾವುಗಳು ಕೇವಲ ನಮ್ಮ ಹಕ್ಕುಗಳ ಬಗ್ಗೆ ಜಾಗೃತರಾದರೆ ಸಾಲದು, ಕರ್ತವ್ಯದ ಕಡೆಗೂ ಗಮನಹರಿಸಬೇಕಿದೆ, ಕುಟುಂಬದ ಒಳಗೆ ಮತ್ತು ಹೊರಗೆ ಜನರಿಗಾಗಿ ಕೆಲಸ ಮಾಡಬೇಕಿದೆ ಎಂದು ಎಡಿಸಿ ಕೆ.ಚನ್ನಬಸಪ್ಪ ನುಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಮೋಹನ್ ಕುಮಾರ್, ಡಿಡಿಪಿಐ ಸಿ.ನಂಜಯ್ಯ, ಬಿಇಓ ಹನುಮನಾಯ್ಕ್, ಜಿಲ್ಲಾ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಪರಶಿವಮೂರ್ತಿ, ಹೆಚ್.ಇ.ರಮೇಶ್, ವೆಂಕಟೇಶಯ್ಯ, ಕೆ.ವಿ.ನಾರಾಯಣ, ವಿ.ಎಂ.ಲಕ್ಷ್ಮೀಶ ಹೆಚ್.ಎಂ.ರುದ್ರೇಶ್, ಡಾ.ಕಿರಣ್.ಜಿ, ಪರಮೇಶ್ ಜೆ.ಪಿ, ಟಿ.ಎನ್.ಜಗದೀಶ್, ಜಿಲ್ಲಾ ಘಟಕ ಪದಾಧಿಕಾರಿಗಳಾದ ಲಕ್ಷ್ಮಿನರಸಿಂಹಯ್ಯ, ಹೆಚ್.ಕೆ.ನರಸಿಂಹಮೂರ್ತಿ, ವೆಂಕಟೇಶಯ್ಯ, ಹೆಚ್, ರೇಣುಕಾರಾಧ್ಯ, ಮುದ್ದುರಾಜು ಮತ್ತಿತರರು ಇದ್ದರು.
ಕಾರ್ಯಕ್ರಮದ ನಂತರ ಸರಕಾರಿ ನೌಕರರ ವಿವಿ‘ ತಂಡಗಳಿಂದ ನೃತ್ಯ, ಜಾನಪದ ಗೀತೆ, ರಂಗಗೀತೆಗಳ ಗಾಯನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ನರಸಿಂಹರಾಜು ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿ
ಸದಾ ಉತ್ಸಾಹದಿಂದ ಎಲ್ಲರಿಗೂ ಪ್ರೇರಣದಾಯಕವಾಗಿ ಕೆಲಸ ಮಾಡುವ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ನರಸಿಂಹರಾಜು ಸರಕಾರಿ ನೌಕರರ ದಿನಾಚರಣೆ, ಸರ್ವೋತ್ತಮ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ದೂರಿಯಾಗಿ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಸಾಧಕರನ್ನು ಗುರುತಿಸಿ ನೀಡಲಾಗುವ ಸರ್ವೋತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬಹಳ ಅಚ್ಚುಕಟ್ಟು ಮತ್ತು ಅದ್ದೂರಿಯಾಗಿ ನಡೆಯಬೇಕು ಎಂಬ ಆಶಯದಲ್ಲಿ ನರಸಿಂಹರಾಜು ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿದ್ದಾರೆ, ಕ್ರೀಡಾಪಟುವಾಗಿ, ಉತ್ತಮ ಸಂಘಟಕ ಎನಿಸಿಕೊಂಡಿರುವ ನರಸಿಂಹರಾಜು ಅವರ ಕಾರ್ಯ ಚಟುವಟಿಕೆ ಮತ್ತು ಸಮಾರಂಭ ಸಕ್ಸಸ್ ಆಗಿದ್ದರ ಹಿಂದಿನ ಶ್ರಮಕ್ಕೆ ಸರ್ಕಾರಿ ನೌಕರರು ಪ್ರಶಂಸೆ ವ್ಯಕ್ತಪಡಿಸಿ ನರಸಿಂಹರಾಜು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!