ತುಮಕೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಪೂರ್ವ ಮುಂಗಾರು ಬೆಳೆಗೆ ಅಗತ್ಯವಾದ ಗುಣಮಟ್ಟದಿಂದ ಕೂಡಿರುವ ಬಿತ್ತನೆ ಬೀಜಗಳನ್ನು ಸಕಾಲಕ್ಕೆ ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ 2022ರ ಮುಂಗಾರು ಹಂಗಾಮು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಹಲಸಂದೆ ಬಿತ್ತನೆ ಬೀಜಗಳು ಗುಣಮಟ್ಟದಿಂದ ಕೂಡಿರುವ ಬಗ್ಗೆ ಖಾತರಿಪಡಿಸಿಕೊಂಡು ಜಿಲ್ಲೆಯ 50 ರೈತ ಸಂಪರ್ಕ ಕೇಂದ್ರಗಳಲ್ಲದೆ, ಹೆಚ್ಚುವರಿ 8 ಮಾರಾಟ ಕೇಂದ್ರಗಳಿಗೆ ಸರಬರಾಜು ಮಾಡುವಂತೆ ತಿಳಿಸಿದರು.
ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುವ ಬಿತ್ತನೆ ಬೀಜಗಳನ್ನು ಅರ್ಹ ರೈತ ಲಾನುಭವಿಗಳಿಗೆ ವಿತರಿಸಲಾಗುವುದಲ್ಲದೆ, ಹೆಸರು, ತೊಗರಿ, ಶೇಂಗಾ, ಬಿತ್ತನೆ ಬೀಜಗಳ ಕೊರತೆ ಕಂಡುಬಂದಲ್ಲಿ ಕರ್ನಾಟಕ ಸೀಡ್ ಫೇಡರೇಷನ್ ಕಾರ್ಪೊರೇಷನ್ ಅಗತ್ಯ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯದಿಂದ ಜಿಲ್ಲೆಗೆ ನಿಗದಿ ಪಡಿಸಿರುವ ರಸಗೊಬ್ಬರಗಳನ್ನು ಸಕಾಲಕ್ಕೆ ಪೂರೈಕೆ ಮಾಡುವಂತೆ ವಿವಿಧ ರಸಗೊಬ್ಬರಗಳ ಸರಬರಾಜು ಏಜೆನ್ಸಿಗಳಿಗೆ ಸೂಚಿಸಿದ ಅವರು ಮಾರಾಟಗಾರರು ಕಡ್ಡಾಯವಾಗಿ ಪೋಸ್ ಯಂತ್ರದ ಮುಖಾಂತರವೇ ರಸಗೊಬ್ಬರ ವಿತರಣೆ ಮಾಡಬೇಕು ಎಂದು ತಿಳಿಸಿದರು.
ರಸಗೊಬ್ಬರಗಳನ್ನು ಅನಾವಶ್ಯಕ ದಾಸ್ತಾನು ಹಾಗೂ ಎಂಆರ್ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದಲ್ಲಿ ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ಹಾಗೂ ಅಗತ್ಯ ವಸ್ತುಗಳ ಕಾಯ್ದೆ 1955ರ ಪ್ರಕಾರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಮಾತನಾಡಿ, ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು ಎಂದರಲ್ಲದೆ, ಬಿತ್ತನೆ ಬೀಜಗಳ ಕೊರತೆ ಉಂಟಾದಲ್ಲಿ ಕರ್ನಾಟಕ ಸೀಡ್ ಫೇಡರೇಷನ್ ಕಾರ್ಪೊರೇಷನ್ ಪೂರೈಸಬೇಕು ಎಂದರಲ್ಲದೆ ರಸಗೊಬ್ಬರಗಳ ಸರಬರಾಜು ಮಾಡುವ ಏಜೆನ್ಸಿಗಳಿಂದ ಕೃಷಿ ಇಲಾಖೆಗೆ ಆಗಾಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೃಷಿ ಸಹಾಯಕ ಅಧಿಕಾರಿಗಳು ಹಾಜರಿದ್ದರು.
ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಿ: ಡೀಸಿ
Get real time updates directly on you device, subscribe now.
Next Post
Comments are closed.