ರಸ್ತೆ ತಡೆದು ದಿಡೀರ್ ರೈತರ ಪ್ರತಿಭಟನೆ

ರಾಗಿ ಖರೀದಿಗೆ ಆನ್ ಲೈನ್ ನೋಂದಣಿ ಗೊಂದಲ

365

Get real time updates directly on you device, subscribe now.

ಕುಣಿಗಲ್: ರಾಗಿ ಖರೀದಿಗೆ ಆನ್ ಲೈನ್ ನೋಂದಣಿ ಸಮರ್ಪಕವಾಗಿ ನಡೆಸದ ಅಧಿಕಾರಿಗಳ ನಡೆ ಖಂಡಿಸಿದ ಸಾವಿರಾರು ರೈತರು ಸೋಮವಾರ ಆರ್ಎಂಸಿ ಯಾರ್ಡ್ ಮುಂಭಾಗದ ರಸ್ತೆ ತಡೆದು ದಿಡೀರ್ ಪ್ರತಿಭಟನೆ ನಡೆಸಿದರು.

ಎರಡನೇ ಹಂತದಲ್ಲಿ ರೈತರಿಂದ ರಾಗಿ ಖರೀದಿ ಮಾಡುವ ಬಗ್ಗೆ ಶಾಸಕ ಡಾ.ರಂಗನಾಥ್ ಸೇರಿದಂತೆ ತಾಲೂಕು ಆಡಳಿತ ಘೋಷಣೆ ಮಾಡಿದ್ದು, ಸೋಮವಾರ ನೋಂದಣಿ ಮಾಡಿಸುವಂತೆ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ರೈತರು ದಾಖಲೆಗಳೊಂದಿಗೆ ಸೋಮವಾರ ಬೆಳಗ್ಗೆ ಆರು ಗಂಟೆಯಿಂದಲೆ ಆರ್ಎಂಸಿಯಾರ್ಡ್ನ ನೋಂದಣಿ ಕೇಂದ್ರದ ಬಳಿ ಜಮಾವಣೆಗೊಂಡರು. ಹತ್ತು ಗಂಟೆಗೆ ಆಗಮಿಸಿದ ಅಧಿಕಾರಿಗಳು ನೋಂದಣಿ ಪ್ರಕ್ರಿಯೆಯನ್ನು ಎರಡು ಕೌಂಟರ್ ಮೂಲಕ ಆರಂಭಿಸಿದರೂ ಸರ್ವರ್ ತೊಂದರೆಯಿಂದ ನೋಂದಣಿ ನಡೆಯಲಿಲ್ಲ, ಹನ್ನೆರಡು ಗಂಟೆಯಾದರೂ ನೋಂದಣಿ ಕಾರ್ಯ ನಡೆಯದೆ ಇರುವುದನ್ನು ಗಮನಿಸಿದ ರೈತರು ಆಕ್ರೋಶಗೊಂಡು ಆರ್ಎಂಸಿ ಯಾರ್ಡ್ ಮುಂಭಾಗದ ಮುಖ್ಯ ರಸ್ತೆಗೆ ಕಲ್ಲು, ಮರದ ದಿಮ್ಮಿಗಳನ್ನಿಟ್ಟು ದಿಡೀರ್ ರಸ್ತೆ ತಡೆ ನಡೆಸಿದರು.
ಇದರಿಂದ ಮುಖ್ಯರಸ್ತೆಯಲ್ಲಿ ಸಂಚಾರ ವ್ಯತ್ಯಯವಾಯಿತು. ರೈತರು ಅಧಿಕಾರಿಗಳು, ಶಾಸಕರು ಸ್ಥಳಕ್ಕೆ ಆಗಮಿಸುವಂತೆ ಪಟ್ಟುಹಿಡಿದು ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡರ ಬಳಿ ಅಳಲು ತೋಡಿಕೊಂಡರು. ಸಣ್ಣ ರೈತರು, ದೊಡ್ಡರೈತರು ಎಂದು ತಾರತಮ್ಯ ಮಾಡುತ್ತಿರುವುದು ಸರಿಯಲ್ಲ, ರೈತರು ಎಂದರೆ ಎಲ್ಲಾ ಒಂದೆ ಎಲ್ಲರಿಂದ ರಾಗಿ ಖರೀದಿ ಮಾಡಬೇಕೆಂದು ಆಗ್ರಹಿಸಿ, ಸರ್ಕಾರದ ಧೋರಣೆ ಖಂಡಿಸಿದರು.
ಬಿರುಬಿಸಿಲಿನಲ್ಲಿ ಬಳಲಿದ್ದ ರೈತರಿಗೆ ಕುಡಿಯುವ ನೀರು ಸಿಗದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಕುಡಿಯುವ ನೀರು ವ್ಯವಸ್ಥೆಗೊಳಿಸಿ, ಮಧ್ಯಾಹ್ನದ ಭೋಜನಕ್ಕೂ ವ್ಯವಸ್ಥೆ ಮಾಡಿ, ಇಂದಿನ ಸಮಸ್ಯೆಗೆ ಶಾಸಕರು, ಅಧಿಕಾರಿಗಳ ನಡುವೆ ಸಂವಹನದ ಕೊರತೆ ಮುಖ್ಯ ಕಾರಣ, ಎರಡು ದಿನ ರಜೆ ಇದ್ದು, ಶಾಸಕರು ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆಗೆ ಸೂಚಿಸಬೇಕಿತ್ತು ಎಂದರು.
ತಹಶೀಲ್ದಾರ್ ಮಹಾಬಲೇಶ್ವರ್ ಸ್ಥಳಕ್ಕಾಗಮಿಸಿ ರೈತರನ್ನು ಸಮಾದಾನಗೊಳಿಸಿ, ರೈತರ ಸಮಸ್ಯೆ ಅರ್ಥವಾಗುತ್ತಿದೆ, ಆನ್ಲೈನ್ ವ್ಯವಸ್ಥೆಯ ಬಗ್ಗೆ ಸಂಬಂಧ ಪಟ್ಟವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ, ಈಗ ಬಂದಿರುವ ಎಲ್ಲಾ ರೈತರಿಂದ ಅರ್ಹ ದಾಖಲೆಗಳನ್ನು ಪಡೆದುಕೊಂಡು ಆನ್ಲೈನ್ ವ್ಯವಸ್ಥೆ ಸರಿ ಹೋದ ಮೇಲೆ ದಾಖಲೆಗಳ ಅಪ್ಲೋಡ್ ಮಾಡಲಾಗುವುದು. ರೈತರಿಗೆ ಅನುಕೂಲವಾಗಲು ಆರು ಹೋಬಳಿಗೂ ಸಂಬಂಧಿಸಿದಂತೆ ಆರು ಕೌಂಟರ್ ಗಳನ್ನು ತೆಗೆದು ದಾಖಲೆ ಸ್ವೀಕರಿಸಲಾಗುವುದು, ರೈತರು ಸಹಕರಿಸಬೇಕೆಂದು ಮನವಿ ಮಾಡಿ ಪರಿಸ್ಥಿತಿ ತಿಳಿಗೊಳಿಸಿ ಕಂದಾಯ ಇಲಾಖೆ ಸಿಬ್ಬಂದಿ ಮೂಲಕ ರೈತರಿಂದ ದಾಖಲೆ ಪಡೆಯಲು ವ್ಯವಸ್ಥೆಗೊಳಿಸಿದರು.
ನೋಂದಣಿ ಸ್ಥಳಕ್ಕೆ ಆಗಮಿಸಿದ ಶಾಸಕ ಡಾ.ರಂಗನಾಥ್, ತಾಲೂಕಿನ ಎಲ್ಲಾ ರೈತರಿಂದ ರಾಗಿ ಖರೀದಿ ಮಾಡಲು ಸಂಬಂಧ ಪಟ್ಟ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡುತ್ತಿಲ್ಲ, ಎಲ್ಲಾ ಅವ್ಯವಸ್ಥೆಗೆ ರಾಜ್ಯ ಬಿಜೆಪಿ ಸರ್ಕಾರವೇ ನೇರಹೊಣೆ, ಸದನದಲ್ಲಿ ತಾವು ರಾಗಿ ಖರೀದಿ ಮಾಡುವಂತೆ ಒತ್ತಾಯ ಹೇರಿದ್ದರಿಂದಲೆ 1.16 ಲಕ್ಷ ಟನ್ ರಾಗಿ ಖರೀದಿ ಮಾಡುತ್ತೇವೆ ಎನ್ನುತ್ತಾರೆ. ಯಾವ ತಾಲೂಕು, ಜಿಲ್ಲೆಯಿಂದ ಎಷ್ಟು ಅಂತ ಹೇಳುವುದಿಲ್ಲ, ಈಗ ನೋಡಿದರೆ ಆನ್ಲೈನ್ ನೋಂದಣಿ ಪ್ರಕ್ರಿಯೆ ಸರ್ವರ್ ತೊಂದರೆ ಎನ್ನುತ್ತಿದ್ದಾರೆ, ಸರ್ಕಾರದ ಈ ನಡೆ ಅನುಮಾನಕ್ಕೆ ಕಾರಣವಾಗಿದ್ದು, ರೈತರಿಂದ ರಾಗಿ ಖರೀದಿ ಮಾಡದೆ ಅನ್ಯಾಯ ಮಾಡಿದರೆ ತಾವೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

Get real time updates directly on you device, subscribe now.

Comments are closed.

error: Content is protected !!