ಜನತಾ ಜಲಧಾರೆ ರಥಯಾತ್ರೆ ತುಮಕೂರಿಗೆ 27ಕ್ಕೆ ಆಗಮನ

255

Get real time updates directly on you device, subscribe now.

ತುಮಕೂರು: ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆ ಏಪ್ರಿಲ್ 27 ರಂದು ತುಮಕೂರು ನಗರಕ್ಕೆ ಆಗಮಿಸುತಿದ್ದು, ಗಾಜಿನ ಮನೆಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜೆಡಿಎಸ್ ಮುಖಂಡ ಎನ್.ಗೋವಿಂದರಾಜು ತಿಳಿಸಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 26 ರಂದು ಸಂಜೆ ಗುಬ್ಬಿ ತಾಲೂಕಿನಿಂದ ಆಗಮಿಸುವ ಜನತಾ ಜಲಧಾರೆ ರಥೆಯಾತ್ರೆಯನ್ನು ಗುಬ್ಬಿಗೇಟ್ನಲ್ಲಿ ಸ್ವಾಗತಿಸಿ, ಸಿದ್ದಗಂಗಾ ಮಠದಲ್ಲಿ ತಂಗಲು ವ್ಯವಸ್ಥೆ ಮಾಡಲಾಗುವುದು, ಏಪ್ರಿಲ್ 27ರ ಬೆಳಗ್ಗೆ 8 ಗಂಟೆಗೆ ಸಿದ್ದಗಂಗಾ ಮಠದ ಸಿದ್ದಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ, ಸಿದ್ದಗಂಗೆಯನ್ನು ನೀರನ್ನು ರಥಕ್ಕೆ ತುಂಬಿಸಿಕೊಂಡು ಹೊರಡುವ ರಥಯಾತ್ರೆಗೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು ಚಾಲನೆ ನೀಡಲಿದ್ದಾರೆ ಎಂದರು.
ಸಿದ್ದಗಂಗಾ ಮಠದಿಂದ ಹೊರಡುವ ರಥಯಾತ್ರೆ ಗುಬ್ಬಿಗೇಟ್ ತಲುಪಲಿದೆ, ಗುಬ್ಬಿಗೇಟ್ನಿಂದ ಬಿ.ಹೆಚ್.ರಸ್ತೆಯ ಮೂಲಕ ಆರಂಭವಾಗುವ ರಥಯಾತ್ರೆಯಲ್ಲಿ ಸೋಮನಕುಣಿತ, ವೀರಗಾಸೆ, ನಾಸಿಕ್ಡೋಲ್, ಡೊಳ್ಳು, ಪೂಜಾಕುಣಿತ, ನಾಗಸ್ವರವಾದನ, ತಮಟೆ ವಾದನ ಹಾಗೂ ಇನ್ನಿತರ ಕಲಾ ತಂಡಗಳ ಪ್ರದರ್ಶನದ ಮೂಲಕ, ಬಿ.ಜಿ.ಪಾಳ್ಯದಲ್ಲಿರುವ ಅರ್ಧನಾರೀಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿ ಟೌನ್ಹಾಲ್ ವೃತ್ತಕ್ಕೆ ಆಗಮಿಸಲಿದ್ದು, ಅಲ್ಲಿರುವ ನಾಗದೇವತೆ ದೇವಾಲಯ ಹಾಗೂ ದರ್ಗಾಕ್ಕೆ ನಮಸ್ಕರಿಸಿ ಮುನ್ನೆಡೆಯಲಿದೆ. ಈ ವೇಳೆ ಕೆಲ ಜಿಲ್ಲಾ ನಾಯಕರು ಸಹ ರಥಯಾತ್ರೆಗೆ ಸೇರಿಕೊಳ್ಳಲಿದ್ದಾರೆ, ಅಶೋಕ ರಸ್ತೆಯ ಮೂಲಕ ಜಿಲ್ಲಾ ಜೆಡಿಎಸ್ ಕಚೇರಿಗೆ ಆಗಮಿಸಿ, ಕೆಲಕಾಲ ವಿಶ್ರಾಂತಿ ಪಡೆಯಲಿದೆ, ನಂತರ ಚರ್ಚ್ನಲ್ಲಿ ರಥಯಾತ್ರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸುವರು, ಚರ್ಚ್ನಿಂದ ಹೊರಡುವ ಜನತಾ ಜಲಧಾರೆ ರಥಯಾತ್ರೆ ಕೋಡಿ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಹಿರಂಗ ಸಭೆ ನಡೆಯುವ ಗಾಜಿನಮನೆ ಪ್ರವೇಶಿಸಲಿದೆ ಎಂದು ಎನ್.ಗೋವಿಂದರಾಜು ವಿವರ ನೀಡಿದರು.
ಗಾಜಿನ ಮನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಜನರು ಸೇರುವ ಬಹಿರಂಗ ಸಭೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಿ, ಜನತಾ ಜಲಧಾರೆಯ ಉದ್ದೇಶ, ಪಕ್ಷದ ಸಂಕಲ್ಪ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಲಿದ್ದಾರೆ, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಯಕರ ಜೊತೆಗೆ, ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಬಹಿರಂಗ ಕಾರ್ಯಕ್ರಮದ ನಂತರ ಶಿರಾ ರಸ್ತೆಯ ಮೂಲಕ ಕಾಳಿದಾಸ ವೃತ್ತ ತಲುಪುವ ಜನತಾ ಜಲಧಾರೆ ಕಾಳಿದಾಸ ಮೂರ್ತಿಗೆ ಪೂಜೆ ಸಲ್ಲಿಸಿ, ಅಲ್ಲಿರುವ ಟಾಮ್ಲಿನ್ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ, ಬಟವಾಡಿ ತಲುಪಲಿದೆ, ಬಟವಾಡಿಯಿಂದ ಎಸ್.ಎಸ್.ಪುರಂ ಮೂಲಕ ಉಪ್ಪಾರಹಳ್ಳಿ ತಲುಪಿ, ಅಲ್ಲಿಂದ ಶಾಂತಿನಗರದ ಮೂಲಕ ಬನಶಂಕರಿ, ಕುಣಿಗಲ್ ರಸ್ತೆಯ ಮೂಲಕ ಗೂಳೂರು ಸರ್ಕಲ್ಗೆ ತರಳಲಿದೆ, ಗೂಳೂರು ಸರ್ಕಲ್ ಬಳಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಿಗೆ ಹಸ್ತಾಂತರವಾಗಲಿದೆ ಎಂದು ಎನ್.ಗೋವಿಂದರಾಜು ವಿವರ ನೀಡಿದರು.
ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥಯಾತ್ರೆ ಯಶಸ್ವಿಗೊಳಿಸಲು ಪಕ್ಷದ ಎಲ್ಲಾ ಮುಖಂಡರು ಹಗಲಿರುಳು ದುಡಿಯುತ್ತಿದ್ದು, ಪಾಲಿಕೆಯ ಸದಸ್ಯರು, ಪಕ್ಷದ ಮುಖಂಡರು, ಪಕ್ಷದ ವಿವಿಧ ಹುದ್ದೆಗಳಲ್ಲಿರುವ ಎಲ್ಲಾ ವಾರ್ಡ್ಗಳ ಮುಖಂಡರು ಇದರಲ್ಲಿ ಕೈಜೋಡಿಸಲಿದ್ದಾರೆ, ಎಲ್ಲರೂ ಒಗ್ಗೂಡಿ ಜೆಡಿಎಸ್ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರ ಅಧ್ಯಕ್ಷ ಬೆಳ್ಳಿಲೋಕೇಶ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಹೆಚ್.ಜಯರಾಮ್, ನರಸೇಗೌಡ, ರಂಗನಾಥ್, ವಕ್ತಾರ ಮಧು, ದೇವರಾಜು, ಶ್ರೀನಿವಾಸ್, ರವೀಶಯ್ಯ, ನರಸಿಂಹರಾಜು, ಇಸ್ಮಾಯಿಲ್, ಚಲುವರಾಜು, ಉಮೇಶ್, ಕೆಂಪರಾಜು, ಕೃಷ್ಣಮೂರ್ತಿ ಇದ್ದರು.

Get real time updates directly on you device, subscribe now.

Comments are closed.

error: Content is protected !!