ಚಿದಾನಂದ್ ರಿಂದ ಶಿರಾದಲ್ಲಿ ಶೈಕ್ಷಣಿಕ ಕ್ರಾಂತಿ

ಎಂ.ಎಲ್.ಸಿಯವರ ಕಚೇರಿ ಉದ್ಘಾಟಿಸಿದ ವೀರೇಶಾನಂದ ಶ್ರೀ

221

Get real time updates directly on you device, subscribe now.

ತುಮಕೂರು: ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಅವರ ನೂತನ ಕಚೇರಿ ಆರಂಭಿಸಲಾಯಿತು.

ಮಹಾನಗರ ಪಾಲಿಕೆ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾದ ವಿಧಾನ ಪರಿಷತ್ ಸದಸ್ಯರ ಕಚೇರಿ ಪೂಜೆ ಸಲ್ಲಿಸುವ ಮೂಲಕ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಆಶೀರ್ವಚನ ನೀಡಿದ ವೀರೇಶಾನಂದ ಸ್ವಾಮೀಜಿ, ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿರುವ ಚಿದಾನಂದ್ ಅವರು ಬರದ ನಾಡು ಶಿರಾದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ, ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗಿದ್ದ ಕಾಲದಲ್ಲಿ ಅಲ್ಲಿನ ಮಕ್ಕಳಿಗೆ ತುಮಕೂರು, ಬೆಂಗಳೂರು ಮಟ್ಟದಲ್ಲಿ ಶಿಕ್ಷಣ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಚಿದಾನಂದ್ ಅವರನ್ನು ಶಿಕ್ಷಣ ತಜ್ಞ ಎಂದರೆ ತಪ್ಪಾಗಲಾರದು, ವಿದ್ಯಾವಂತ, ಕ್ರಿಯಾಶೀಲ, ದೂರದರ್ಶಿತ್ವವುಳ್ಳ ಚಿದಾನಂದ ಗೌಡ ಅವರು ಜಿಲ್ಲಾ ಕೇಂದ್ರ ತುಮಕೂರಿನಲ್ಲಿ ಮೈಸೂರು ಮಹಾರಾಜರ ಕಾಲದ ವಿನ್ಯಾಸದಲ್ಲಿರುವ ಕಟ್ಟಡದಲ್ಲಿ ತಮ್ಮ ಕಚೇರಿ ಪ್ರಾರಂಭಿಸಿರುವುದು ಸಂತಸದ ವಿಚಾರ, ಇತಿಹಾಸವುಳ್ಳ ಈ ಭವ್ಯ ಕಟ್ಟಡ ಈ ಮೂಲಕ ತನ್ನ ಜೀವಂತಿಕೆ ಕಾಪಾಡಿಕೊಳ್ಳಲಿದೆ ಎಂದು ಹೇಳಿದರು.
ತಮ್ಮಗೆ ಪಾಠ ಹೇಳಿಕೊಟ್ಟಂತಹ ಈರಣ್ಣ ಮೇಸ್ಟ್ರು ಪುತ್ಥಳಿ ಅನಾವರಣ ಮಾಡುವ ಮೂಲಕ ಚಿದಾನಂದ್ ಅವರು ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ ಎಂದ ಅವರು, 6 ವರ್ಷದ ಅಮೂಲ್ಯವಾದ ಅವಧಿಯನ್ನು ಚಿದಾನಂದ್ ಅವರು ರಾಷ್ಟ್ರ ನೆನಪಿಟ್ಟುಕೊಳ್ಳುವಂತಹ ಸೇವೆ ನೀಡಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ವಿಧಾನ ಪರಿಷತ್ ಚಿದಾನಂದ್ ಅವರು ಸರ್ಕಾರಿ ಕಚೇರಿ ಪ್ರಾರಂಭ ಮಾಡಿರುವುದು ಉತ್ತಮ ಕಾರ್ಯ, ಈ ಕಚೇರಿಯಲ್ಲಿ ಸಮಾಜ ಕಟ್ಟುವ ಕೆಲಸ ಚೆನ್ನಾಗಿ ಆಗಬೇಕು, ಈ ನಿಟ್ಟಿನಲ್ಲಿ ಚಿದಾನಂದಗೌಡ ಅವರು ಕಾರ್ಯೋನ್ಮುಖರಾಗಲಿದ್ದಾರೆ ಎಂಬ ನಂಬಿಕೆ ಇದೆ, ನಾವೆಲ್ಲರೂ ಸೇರಿ ಸದೃಢ ದೇಶ, ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ರಾಜ್ಯ ಪಠ್ಯ ಕ್ರಮದಲ್ಲಿ ಭಗವದ್ಗೀತೆಯ ವಿಚಾರಗಳನ್ನು ಅಳವಡಿಸುವ ಕಾರ್ಯವನ್ನು ಅತ್ಯಂತ ವೇಗವಾಗಿ ಮಾಡಬೇಕು ಎಂದು ಶಿಕ್ಷಣ ಸಚಿವರನ್ನು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮಾತನಾಡಿ, ಚುನಾವಣೆಯಲ್ಲಿ ನಾನು ಗೆದ್ದ ತಕ್ಷಣ ಕಚೇರಿ ತೆರೆಯಬೇಕು ಎಂದು ನಿರ್ಧಸಿದ್ದೆ, ಕೆಲ ಕಾರಣಗಳಿಂದಾಗಿ ಕಚೇರಿ ಆರಂಭಿಸುವುದು ತಡವಾಯಿತು, ವಾರದಲ್ಲಿ ಒಂದು ಎರಡು ದಿವಸ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶ ಹೊಂದಿದ್ದೇನೆ, ಎಲ್ಲರೂ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ, ಹಾಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದರು.
ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು, ಅಹವಾಲು ಆಲಿಸುವ ಸಲುವಾಗಿ ಕಚೇರಿ ಆರಂಭಿಸಿದ್ದೇನೆ, ಇದರಿಂದ ಶಿಕ್ಷಕರು, ಪದವೀಧರರು ಹಾಗೂ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಶಿಕ್ಷಕರು, ಪದವೀಧರರ ಜತೆಗೆ ಜನಸಾಮಾನ್ಯರು ಸಹ ತಮ್ಮನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು, ನಾನು ಸಹ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದ ಅವರು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮೇಯರ್ ಬಿ.ಜಿ. ಕೃಷ್ಣಪ್ಪ, ಹನುಮಂತರಾಜು, ಶಿಕ್ಷಕ ವರ್ಗದವರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!