ಅಧಿಕಾರ ಕೊಟ್ಟ ಪಕ್ಷಕ್ಕೆ ಬೆನ್ನಿಗೆ ಚೂರಿ

ಶಾಸಕ ಶ್ರೀನಿವಾಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

217

Get real time updates directly on you device, subscribe now.

ಗುಬ್ಬಿ: ನಮ್ಮ ಪಕ್ಷದಿಂದ ಯಾವುದೇ ಅನ್ಯಾಯ ಇಲ್ಲಿನ ಶಾಸಕರಿಗೆ ಮಾಡಿಲ್ಲ, ಅವರನ್ನು ಸಚಿವರಾಗಿ ಮಾಡಿದ್ದೇವೆ, ಆದರೆ ಅವರು ಪಕ್ಷದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಜನತಾ ಜಾಲಧಾರೆ ಕಾಯ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಮುಂದಿನ ಗುಬ್ಬಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು, ಇದರಲ್ಲಿ ಯಾವುದೇ ಅನುಮಾನ ಬೇಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯದ ನೀರಿನ ವಿಚಾರದಲ್ಲಿ ದೂರದೃಷ್ಟಿ ಇಟ್ಟುಕೊಂಡು ರಾಜ್ಯದ ಎಲ್ಲಾ ನದಿಗಳನ್ನು ಒಟ್ಟುಗೂಡಿಸಿ ರಾಜ್ಯದ ಜನರಿಗೆ ನೀರಾವರಿ ಹಾಗೂ ಕುಡಿಯುವ ನೀರು ಒದಗಿಸಿ ಕೊಡುವಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದ 184 ವಿಧಾನಸಭಾ ಕ್ಷೇತ್ರ ಹಾಗೂ 140 ಕೇಂದ್ರ ಸುತ್ತಿಕೊಂಡು ಗುಬ್ಬಿ ಕ್ಷೇತ್ರಕ್ಕೆ ರಥವು ಆಗಮಿಸಿದೆ, 75 ವರ್ಷಗಳ ಕಾಲ ಎರಡೂ ರಾಷ್ಟ್ರೀಯ ಪಕ್ಷಗಳು ಆಡಳಿತ ಮಾಡಿದ್ದರೂ ರಾಜ್ಯಕ್ಕೆ ಯಾವುದೇ ರೀತಿ ಅಭಿವೃದ್ಧಿ ಕೆಲಸ ಮಾಡಿಲ್ಲ, ಈ ಬಾರಿ 2023 ಕ್ಕೆ ಜೆಡಿಎಸ್ ಗೆ ಸಂಪೂರ್ಣ ಅಧಿಕಾರ ನೀಡಿದರೆ ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ತೆಗೆದುಕೊಂಡು ಹೋಗಲು ಈಗಾಗಲೇ ಪಂಚರತ್ನ ಯೋಜನೆ ಮಾಡಲಾಗಿದೆ, ತಾವೆಲ್ಲರೂ ಜೆಡಿಎಸ್ ಪಕ್ಷ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರ ಜಾತಿ, ಹಿಜಾಬ್, ಮಾಂಸದ ವಿಚಾರದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಬಿಟ್ಟರೆ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ, ಕಾಂಗ್ರೆಸ್ ಪಕ್ಷ ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ, ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆ ಮಾಡಲು ಡಿಪಿಆರ್ ಸಿದ್ಧಪಡಿಸಿದ್ದರು, ಆಗ ವಿರೋಧಿಸಿದವರು ಈಗ ಇದನ್ನು ಏಕೆ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ, ಬಿಜೆಪಿ ಸರಕಾರ ಶೇ.40 ಕಮಿಷನ್ ಪಡೆದು ಗುತ್ತಿಗೆದಾರರ ಆತ್ಮಹತ್ಯೆಗೆ ದಾರಿ ಮಾಡಿದರೆ, ಅದೇ ಸಾವಿನ ಮನೆಯಲ್ಲಿ ಕುಳಿತು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ, ರಾಜ್ಯ ಶಾಂತಿಯ ತೋಟವಾಗಬೇಕಿತ್ತು, ಆದರೆ ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರದ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಗುಬ್ಬಿ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ, ನಾವು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ಸಿ.ಎಸ್.ಪುರ ಕ್ಷೇತ್ರದಲ್ಲಿ 45 ಕೋಟಿ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದು, ರೈತರ ಪಕ್ಷವಾದ ಜೆಡಿಎಸ್ ಪಕ್ಷದಿಂದ ಕ್ಷೇತ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದು ತಾವೆಲ್ಲರೂ ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಗ್ರಾಮಾಂತರ ಭಾಗದಲ್ಲಿ ಓದಿರುವ ಲಕ್ಷಾಂತರ ವಿದ್ಯಾರ್ಥಿಗಳು ಕಷ್ಟಬಿದ್ದು ಪರೀಕ್ಷೆ ಬರೆಯಲು ಹೋದರೆ ಆ ಹುದ್ದೆಗಳನ್ನೇ ಮಾರಾಟ ಮಾಡಿರುವ ಭ್ರಷ್ಟ ಸರಕಾರ ಅಂದರೆ ಅದು ಬಿಜೆಪಿ ಸರಕಾರವಾಗಿದೆ, ರಾಮನ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ರಾಮನ ಆದರ್ಶವನ್ನು ಕಿಂಚಿತ್ತೂ ಇಟ್ಟುಕೊಂಡಿಲ್ಲ ಎಂದು ಕಿಡಿಕಾರಿದರು.
ಕಾರ್ಯಕ್ರಮಕ್ಕೂ ಮುನ್ನ ಗುಬ್ಬಿ ತಾಲೂಕಿನ ದೊಣೆ ಗಂಗಾ ಕ್ಷೇತ್ರದಿಂದ ಜಲಧಾರೆ ರಥಕ್ಕೆ ಚಾಲನೆ ನೀಡಲಾಯಿತು. ನಿಟ್ಟೂರಿನಿಂದ ಬೈಕ್ ಜಾಥಾಕ್ಕೆ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿ ಸಾಂಸ್ಕೃತಿಕ ಕಲಾ ತಂಡದೊಂದಿಗೆ ವೇದಿಕೆಗೆ ಆಗಮಿಸಲಾಯಿತು .
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆಂಜನಪ್ಪ, ಎಂಎಲ್ಸಿ ತಿಪ್ಪೇಸ್ವಾಮಿ, ರಾಜ್ಯ ಸಂಚಾಲಕ ಬೆಳ್ಳಿ ಲೋಕೇಶ್, ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗಾಯಿತ್ರಿ ನಾಗರಾಜು, ಜೆಡಿಎಸ್ ಚುನಾವಣಾ ಅಧಿಕಾರಿ ದೇವರಾಜು, ಮುಖಂಡರಾದ ಸುರೇಶಗೌಡ, ಗಂಗಣ್ಣ, ಮಾವಿನಹಳ್ಳಿ ಕರಿಯಪ್ಪ, ಶಿವಲಿಂಗೇಗೌಡ, ಶಿವಣ್ಣ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!