ತುರುವೇಕೆರೆ: ನರೇಗಾ ಕಾಮಗಾರಿ ಹಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಾಲೂಕಿನ ತಾಳಕೆರೆ ಪಂಚಾಯಿತಿ ಕಚೇರಿಗೆ ಬೀಗ ಜಡಿದು ನರೇಗಾ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ನರೇಗಾ ಕಾಮಗಾರಿ ಹಣ ಬಿಡುಗೆ ವಿಚಾರವಾಗಿ ಪಂಚಾಯಿತಿ ಕಚೇರಿ ಬಳಿ ಬಂದ ಬಂಡಿ ಜಗದೀಶ್ ಮತ್ತಿತರು ಪಿಡಿಓ ನಾಗರಾಜ್ ಅವರೊಂದಿಗೆ ವಾಗ್ವಾದಕ್ಕಿಳಿದರು. ಪಿಡಿಓ ನಾಗರಾಜ್ ನಾನು ಹೊಸದಾಗಿ ಬಂದಿದ್ದು ತಾಂತ್ರಿಕ ಕಾರಣದಿಂದ ಹಣ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸಬೂಬು ಹೇಳಿದರು. ಕಾಮಗಾರಿ ಮುಗಿಸಿ ವರ್ಷ ಕಳೆದರೂ ನಿಮ್ಮಗಳ ನಿರ್ಲಕ್ಷ್ಯದಿಂದ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಿಡಿಓ ವಿರುದ್ಧ ತಿರುಗಿಬಿದ್ದ ಕಾರ್ಮಿಕರು ಪಿಡಿಓ ನಾಗರಾಜ್, ಕಾರ್ಯದರ್ಶಿ ಶಾರದಮ್ಮ ಹಾಗೂ ಸಿಬ್ಬಂದಿಯನ್ನು ಕಚೇರಿಯಲ್ಲಿ ಕೂಡಿ ಹಾಕಿ ಆಕ್ರೋಷ ವ್ಯಕ್ತಪಡಿಸಿದರು. ಕಾಮಗಾರಿ ಹಣ ಬಿಡುಗಡೆ ಮಾಡುವರೆಗೂ ಕಚೇರಿಯ ಬೀಗ ತೆಗೆಯುವುದಿಲ್ಲ ಎಂದು ಪಿಡಿಓ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾದರು.
ಗ್ರಾಮದ ಯುವಕ ಜಗದೀಶ್ ಮಾತನಾಡಿ ಉದ್ಯೋಗ ಭರವಸೆ ನೀಡುವ ನಿಟ್ಟಿನ ನರೇಗಾ ಆಶಯ ಪಿಡಿಓ ಮತ್ತಿತರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾದಿ ತಪ್ಪುತ್ತಿದೆ, ನರೇಗಾ ಹಣ ಪಡೆಯಲು ಇಂಜಿನಿಯರ್ ರುದ್ರೇಶ್ 40 ಪರ್ಸೆಂಟ್ ಕಮಿಷನ್ ಕೇಳುತ್ತಾರೆ, ಇಂಜಿನಿಯರ್ ಅವರಿಗೆ ಇಷ್ಟ ಬಂದವರ ಹೆಸರಿಗೆ ವೆಂಡರ್ ಬಿಲ್ ಹಾಕುವ ಮೂಲಕ ಹಣವನ್ನು ಕಾಮಗಾರಿ ನಿರ್ವಹಿಸಿದವರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಪಂಚಾಯಿತಿಗೆ ಮೂರು ತಿಂಗಳಿಗೊಬ್ಬರು ಪಿಡಿಓ ಬದಲಾಗುತ್ತಿದ್ದು ನಮ್ಮ ಹಣ ಪಡೆಯಲು ತೊಡಕಾಗಿದೆ ಎಂದು ದೂರಿದರು.
ತಾಳಕೆರೆ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ಇಓ ಸತೀಶ್ಕುಮಾರ್ ಸ್ಥಳಕ್ಕೆ ಆಗಮಿಸಿದರು. ಪ್ರತಿಭಟನಾಕಾರರೊಂದಿಗೆ ಸಮನ್ವಯದ ಮಾತನಾಡಿ ಕಚೇರಿಯ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ನರೇಗಾ ಹಣ ಬಿಡುಗಡೆ ಮಾಡಲು ತಾಂತ್ರಿಕ ತೊಂದರೆ ಎದುರಾಗಿತ್ತು, ಶೀಘ್ರ ನೂತನವಾಗಿ ಬಂದಿರುವ ಪಿಡಿಓ ಲಾಗಿನ್ ಆದ ನಂತರ ನರೇಗಾ ಕಾಮಗಾರಿ ಹಣ ಬಿಡುಗಡೆಗೊಳಿಸಲಾಗುವುದು ಎಂದು ಕಾರ್ಮಿಕರ ಮನವೊಲಿಸಿ ಪ್ರತಿಭಟನೆಗೆ ಅಂತ್ಯ ಹಾಡಿದರು. ಸಮನ್ವಯಕ್ಕೆ ಮುಂದಾದ ಇಓ ಅವರಿಗೆ ಸದಸ್ಯ ವಿನೋದ್, ಮುಖಂಡರಾದ ವೆಂಕಟೇಶ್, ನಂಜಪ್ಪ ಮತ್ತಿತರು ಸಾಥ್ ನೀಡಿದರು. ಪ್ರತಿಭಟನೆಯಲ್ಲಿ ಶಶಿಧರ್, ಚಂದ್ರಾಚೂಡ್, ಕೀರ್ತಿ, ಷಣ್ಮುಖ, ಗೌರೀಶ್, ಯೋಗೀಶ್ ಮತ್ತಿತರಿದ್ದರು.
ನರೇಗಾ ಹಣ ಬಿಡುಗಡೆಗಾಗಿ ಕಾರ್ಮಿಕರಿಂದ ಕಚೇರಿಗೆ ಬೀಗ
Get real time updates directly on you device, subscribe now.
Prev Post
Next Post
Comments are closed.