ತುರುವೇಕೆರೆ: ತಾಲೂಕಿನ ಚಿಕ್ಕಶೆಟ್ಟಿಕೆರೆ ಬಳಿ ಗುರುವಾರ ನಸುಕಿನಲ್ಲಿ ಲಾರಿ ಹಾಗೂ ಇನೋವಾ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವ ವರ ಹಾಗೂ ಚಾಲಕ ಸ್ಥಳದಲ್ಲೇ ಮೃತಪಟ್ಟು, ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ವರನ ಸಂಬಂಧಿ ಮೃತಪಟ್ಟಿದ್ದು, ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವ್ಯಕ್ತಿ ತೀವ್ರತರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಲ್ಲಿ ಅರಸೀಕೆರೆ ತಾಲೂಕಿನ ಕಾಮಲಾಪುರ ವಾಸಿ ನಂಜುಂಡಪ್ಪನ ಮಗ ಪ್ರಸನ್ನಕುಮಾರ (30), ಅದೇ ಗ್ರಾಮದ ಜಯರಾಮ್ ಮಗ ಸಂತೋಷ್(29) ಹಾಗೂ ಬೆಂಗಳೂರು ಮೂಲದ ಚಾಲಕ ಚಿನ್ನಪ್ಪ (30) ಮೃತಪಟ್ಟವರಾಗಿದ್ದಾರೆ.
ಘಟನೆ ವಿವರ: ಕಳೆದ ವಾರದ ಹಿಂದಷ್ಟೆ ಅರಸೀಕೆರೆ ತಾಲೂಕಿನ ಕಾಮಲಾಪುರದ ಪ್ರಸನ್ನಕುಮಾರ್ ಹಾಗೂ ಅದೇ ತಾಲೂಕಿನ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ (26) ವಿವಾಹವಾಗಿದ್ದರು. ಜೀವನಕ್ಕಾಗಿ ಬೆಂಗಳೂರು ಸೇರಿದ್ದ ದಂಪತಿ ಬಾಡಿಗೆ ಮನೆ ಮಾಡಿದ್ದರು. ಮನೆಗೆ ಅಗತ್ಯ ಸಾಮಾನು ಕೊಂಡೊಯ್ಯಲು ಕಾಮಲಾಪುರಕ್ಕೆ ಇನೋವಾ ಕಾರಿನಲ್ಲಿ ಬುಧವಾರ ರಾತ್ರಿ ಬಂದಿದ್ದರು, ಗುರುವಾರ ನಸುಕಿನಲ್ಲಿ ಅಗತ್ಯ ಸಾಮಾನುಗಳೊಂದಿಗೆ ಬೆಂಗಳೂರಿನತ್ತ ಮಾಯಸಂದ್ರ ಮಾರ್ಗವಾಗಿ ಸಂಬಂಧಿ ಸಂತೋಷ ಹಾಗೂ ಚಾಲಕ ಚಿನ್ನಪ್ಪನೊಂದಿಗೆ ಪ್ರಯಾಣ ಬೆಳೆಸಿದ್ದರು. ಗುರುವಾರ ನಸುಕಿನಲ್ಲಿ ಮಾಯಸಂದ್ರ ಬಳಿ ಚಿಕ್ಕಶೆಟ್ಟಿಕೆರೆ ಬಳಿ ಮೈಸೂರಿನಿಂದ ಬರುತ್ತಿದ್ದ ಲಾರಿಗೆ ಇನ್ನೋವಾ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿದ್ರೆಯ ಮಂಪರು ಅಪಘಾತಕ್ಕೆ ಕಾರಣವೆನ್ನಲಾಗುತ್ತಿದೆ.
ಮುಗಿಲು ಮುಟ್ಟಿದ ಆಕ್ರಂದನ: ದುರ್ಘಟನೆಯಲ್ಲಿ ಮೃತಪಟ್ಟ ನವ ವರ ಪ್ರಸನ್ನಕುಮಾರ್, ಸಂತೋಷ್, ಚಾಲಕ ಚಿನ್ನಪ್ಪ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನವ ಜೀವನ ಆರಂಭಿಸುವ ಕನಸು ಕಂಡಿದ್ದ ಪ್ರಸನ್ನಕುಮಾರ್ ಪತ್ನಿಯೊಂದಿಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಮೃತಪಟ್ಟಿದ್ದು, ಬದುಕುಳಿದಿರುವ ನವ ವಧು ಮಂದಾರ ಒಂಟಿ ಜೀವನ ನಡೆಸುವಂತಾಗಿದೆ ಎಂದು ಸಾರ್ವಜನಿಕರು ವಿಧಿಯನ್ನು ಶಪಿಸುತ್ತಿದ್ದರು.
ಘಟನೆಯ ಸ್ಥಳಕ್ಕೆ ಡಿವೈಎಸ್ಪಿ ರಮೇಶ್, ಸಿಪಿಐ ಗೊಪಾಲನಾಯ್ಕ, ಪಿಎಸ್ಐ ಕೇಶವಮೂರ್ತಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಪ್ರಸನ್ನಕುಮಾರ್ ಪತ್ನಿ ಮಂದಾರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ತುರುವೇಕೆರೆ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
Comments are closed.