ಸರ್ಕಾರ ಮನೆ, ಮನಸ್ಸು ಒಡೆಯುತ್ತಿದೆ

ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

234

Get real time updates directly on you device, subscribe now.

ತುಮಕೂರು: ಸರಕಾರಗಳು ಇರುವುದು ಜನರ ಮನಸ್ಸು ಮತ್ತು ಮನೆಗಳನ್ನು ಹೊಡೆಯುವುದಕಲ್ಲ, ಮನಸ್ಸು ಬೆಸೆಯಲು ಎಂಬುದನ್ನು ಈಗಿನ ಸರಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಲು ಹೊರಟಿದೆ, ಇದು ಆಡಳಿತ ನಡೆಸುವ ಸರ್ಕಾರಕ್ಕೆ ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಾಗಲಿ, ಅವರ ಮಕ್ಕಳಾದ ನಾವುಗಳಾಗಲಿ ನೀರಾವರಿ ಸೇರಿದಂತೆ ಯಾವುದೇ ವಿಚಾರದಲ್ಲಿ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿಲ್ಲ, ಹಾಸನ ಜಿಲ್ಲೆಗೆ 1.20 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಿದ್ದರೆ, ತುಮಕೂರು ಜಿಲ್ಲೆಯ 3.20 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ, ಇಂದಿನ ಹಾರಂಗಿ, ಕಬಿನಿ, ಹೇಮಾವತಿ, ಯಗಚಿ ಅಣೆಕಟ್ಟು ನಿರ್ಮಾಣ ಕ್ಕೆ 1969 ರಲ್ಲಿ ವಿಧಾನಸಭೆಯಲ್ಲಿ ನೀರಾವರಿಗೆ ಸಂಬಂಧಿಸಿದಂತೆ ಮಂಡಿಸಿದ ಖಾಸಗಿ ಮಸೂದೆಯೇ ಕಾರಣ ಎಂದರು.
ಕೃಷಿಗೆ, ಕುಡಿಯಲು ನೀರು, ಆರೋಗ್ಯ, ಮಕ್ಕಳಿಗೆ ಉಚಿತ ಶಿಕ್ಷಣ, ಎಲ್ಲರಿಗೂ ಉದ್ಯೋಗ ನೀಡುವುದು ಜೆಡಿಎಸ್ನ ಪಂಚರತ್ನ ಯೋಜನೆಗಳಾಗಿವೆ, 2023 ರ ಚುನಾವಣೆಯಲ್ಲಿ ಬಹುಮತ ನೀಡಿದರೆ ಈ ಎಲ್ಲಾ ಭರವಸೆ ಈಡೇರಿಸುತ್ತೇನೆ, ಇಲ್ಲವೆ ಜೆಡಿಎಸ್ ಪಕ್ಷ ವಿರ್ಸಜಿಸುತ್ತೇನೆ ಎಂದು ಸವಾಲು ಹಾಕಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಸಿ.ಗೌರಿಶಂಕರ್ ನಿಮ್ಮ ಮನೆ ಮಗನ ರೀತಿಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಡಿ.ಸಿ.ಗೌರಿಶಂಕರ ಗೆಲುವು ಸಾಧಿಸಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಅವರನ್ನು ಮಂತ್ರಿ ಮಾಡಿ ಇಡೀ ರಾಜ್ಯದ ಜವಾಬ್ದಾರಿ ನೀಡಲಾಗುವುದು, ಕ್ಷೇತ್ರದ ಜನತೆ ಡಿ.ಸಿ.ಗೌರಿಶಂಕರ ಅವರನ್ನು ಆಶೀರ್ವದಿಸಬೇಕೆಂದರು.
ಮುಂದಿನ ಜೂನ್ ತಿಂಗಳಲ್ಲಿ ಜೆಡಿಎಸ್ ಪಕ್ಷದ ಜನಪರ ಕಾರ್ಯಕ್ರಮ ಕುರಿತು ಕೈಪಿಡಿ ಬಿಡುಗಡೆ ಮಾಡಿ ರಾಜ್ಯದ ಪ್ರತಿ ಮನೆ ಮನೆಗೆ ತಲುಪುವಂತೆ ಮಾಡಿ, ಜನರಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರಾಜ್ಯಕ್ಕೆ ಮಾಡಿರುವ ಅನ್ಯಾಯ ತಿಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಶಾಸಕ ಡಿ.ಸಿ.ಗೌರಿಶಂಕರ್, ಈ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಪ್ರತಿ ಮನೆಗು ಕುಡಿಯುವ ನೀರು ಮತ್ತು ಪ್ರತಿ ಊರಿನ ಕೆರೆ ತುಂಬಿಸಬೇಕೆಂಬುದು ಜೆಡಿಎಸ್ ಪಕ್ಷದ ಆಶಯವಾಗಿದೆ, ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅರಿವು ಇರುವ ಹೆಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದ ಮಾತ್ರ ಈ ಬೃಹತ್ ಕಾರ್ಯ ಸಾಧ್ಯ, ಹಾಗಾಗಿ ಜನತೆ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ನಾಗವಲ್ಲಿ ಗ್ರಾಮದ ಬಳಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಾವಿರಾರು ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಈ ಸಂದರ್ಭಲ್ಲಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಗಾತ್ರದ ಸೇಬಿನ ಹಾರ ಹಾಗೂ ಹೂ ಮಳೆ ಸುರಿಸಿ ಸಾವಿರಾರು ಮಂದಿ ಅದ್ದೂರಿಯಾಗಿ ಬರ ಮಾಡಿಕೊಂಡರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ ,ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜನಪ್ಪ, ಮುಖಂಡರಾದ ಸಿರಾಕ್ ರವೀಶ್, ದೇವರಾಜು, ನರಸೇಗೌಡ, ಬೆಳ್ಳಿಲೋಕೇಶ್, ಕೃಷ್ಣಮೂರ್ತಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!