ದಲಿತರ ಜೋಡಿ ಕೊಲೆ ಅಮಾನುಷ: ರಾಜೇಂದ್ರ ಆಕ್ರೋಶ

304

Get real time updates directly on you device, subscribe now.

ಗುಬ್ಬಿ: ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿರುವಂತಹ ದಲಿತರ ಜೋಡಿ ಕೊಲೆ ಅತ್ಯಂತ ಅಮಾನುಷವಾದುದು ಎಂದು ಎಂ.ಎಲ್.ಸಿ ಆರ್.ರಾಜೇಂದ್ರ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಗ್ರಾಮದ ಮೃತ ಗಿರೀಶ್ ಅವರ ಮನೆಗೆ ಭೇಟಿ ನೀಡಿ ಮಾತನಾಡಿ, ಇದುವರೆಗೂ ಮಂಚಲದೊರೆ ಗ್ರಾಮದ ಮೃತ ಗಿರೀಶ್ ಹಾಗೂ ಪೆದ್ದನಹಳ್ಳಿ ಗಿರೀಶ್ ಅವರ ಮನೆಗೆ ಯಾವುದೇ ರಾಜಕೀಯ ವ್ಯಕ್ತಿಗಳು ಭೇಟಿ ನೀಡಿಲ್ಲ, ಚುನಾವಣೆ ಸಮಯದಲ್ಲಿ ಗೆದ್ದಂತಹ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಸಮಾನತೆ ಸಾರುವ ನಾವುಗಳು ದಲಿತ ಕುಟುಂಬದಲ್ಲಿ ಇಂತಹ ಘಟನೆ ನಡೆದಿದ್ದರೂ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳದೆ ಇರುವುದು ದುರಂತದ ವಿಚಾರ ಎಂದರು.
ಸರಕಾರದಲ್ಲಿ ಗುರುತಿಸಿಕೊಂಡಿದ್ದರೆ ಇಡೀ ರಾಜ್ಯದ ಸಚಿವರು ಅವರ ಮನೆ ಬಾಗಿಲಿಗೆ ಹೋಗಿ ಸಾಂತ್ವನ ಕೇಳಿ ಪರಿಹಾರ ಘೋಷಣೆ ಮಾಡುತ್ತಿದ್ದರು, ಆದರೆ ದಲಿತ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ 3 ಜನ ಸಚಿವರಿದ್ದರೂ ಇದುವರೆಗೂ ಒಬ್ಬ ಸಚಿವರು ಬಂದಿಲ್ಲ, ರಾಜ್ಯದ ಕಾನೂನು, ಗೃಹ ಆಡಳಿತ ನೋಡುವ ಇಬ್ಬರು ಪ್ರಮುಖ ಸಚಿವರಿದ್ದರು ಇಲ್ಲಿಗೆ ಬಂದು ಇಲ್ಲಿನ ಸಮಸ್ಯೆ ಕೇಳದೆ ಇರುವುದು ಇವರ ಆಡಳಿತದ ಕೈಕನ್ನಡಿಯಾಗಿದೆ ಎಂದು ಸರಕಾರದ ವಿರುದ್ಧ ಕಿಡಿಕಾರಿದರು.
ಕೂಡಲೇ ಈ ಕುಟುಂಬಕ್ಕೆ ಸರಕಾರ 25 ಲಕ್ಷ ಹಣ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದ ಅವರು ಗ್ರಾಮದಲ್ಲಿರುವ ದಲಿತ ಕುಟುಂಬಗಳು ಸಹ ಈ ಮನೆಯವರನ್ನು ಮಾತನಾಡಿಸಲು ಹೆದರುತ್ತಿದ್ದಾರೆ, ಸಾಕಷ್ಟು ಬೆದರಿಕೆಯ ದೂರವಾಣಿ ಕರೆಗಳು ಬಂದಿರುವುದು ನೋಡಿದಾಗ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು, ಪೊಲೀಸ್ ಇಲಾಖೆ ಇವರಿಗೆ ಹೆಚ್ಚಿನ ಭದ್ರತೆ ಸಹ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಸಹಕಾರ ಸಂಘದ ಜಿಲ್ಲಾ ನಿರ್ದೇಶಕ ಹಾರ್ನಳ್ಳಿ ಪ್ರಭಾಕರ್, ದಲಿತ ಮುಖಂಡ ಕೊಡಿಯಾಲ ಮಹಾದೇವ, ನರಸಿಂಹಮೂರ್ತಿ, ಚೇಳೂರು ಶಿವನಂಜಪ್ಪ, ಗ್ರಾಮ ಪಂಚಾಯತಿ ಸದಸ್ಯ ಯತೀಶ್, ದೇವರಾಜು, ಕೀರ್ತಿರಾಜ್ ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!