ಗೌಡರು ಇಲ್ಲದಿದ್ದರೆ ಹೇಮೆ ಜಲಾಶಯ ನಿರ್ಮಾಣವಾಗ್ತಿರಲಿಲ್ಲ

ದೇವೇಗೌಡರ ಬಗ್ಗೆ ಕಾಂಗ್ರೆಸ್, ಬಿಜೆಪಿ ಅಪಪ್ರಚಾರ ನಿಲ್ಲಿಸಲಿ: ಕುಮಾರಸ್ವಾಮಿ

177

Get real time updates directly on you device, subscribe now.

ಕುಣಿಗಲ್: ತುಮಕೂರಿಗೆ ಹೇಮಾವತಿ ನೀರು ಹರಿಸುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಮುಖಂಡರು ದೇವೇಗೌಡರ ಕುಟುಂಬದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ, ದೇವೇಗೌಡರು ಇಲ್ಲದೆ ಇದ್ದಲ್ಲಿ ಹೇಮಾವತಿ, ಯಗಚಿ ಸೇರಿದಂತೆ ಹಲವು ಜಲಾಶಯ ನಿರ್ಮಾಣವೆ ಆಗುತ್ತಿರಲಿಲ್ಲ ಎಂಬುದು ಅವರ ನೆನಪು ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಶನಿವಾರ ಪಟ್ಟಣದಲ್ಲಿ ತಾಲೂಕು ಜೆಡಿಎಸ್ ಹಮ್ಮಿಕೊಂಡಿದ್ದ ಜನತಾಜಲಧಾರೆ ಕಾರ್ಯಕ್ರಮದಲ್ಲಿ ಕುಣಿಗಲ್ ದೊಡ್ಡಕೆರೆಯಲ್ಲಿ ಸಂಗ್ರಹಿಸಿದ ಹೇಮಾವತಿ ನೀರಿನ ಕುಂಭ ಸ್ವೀಕರಿಸಿ ಮಾತನಾಡಿ, ಜನತಾ ಜಲಧಾರೆ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಕಂಡ ಮಹತ್ವದ ಯೋಜನೆಯಾಗಿದೆ, ಈ ನಿಟ್ಟಿನಲ್ಲಿ 2023ರಲ್ಲಿ ಹಂಗಿಲ್ಲದ ಸ್ವಂತ ಬಲದ ಮೇಲೆ ಜೆಡಿಎಸ್ ಅಧಿಕಾರಕ್ಕೆ ತಂದು ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ನೀರಾವರಿ ವಿಷಯದಲ್ಲಿ ರಾಜ್ಯ ಸ್ವಾವಲಂಬನೆ ಸಾಧಿಸಲು ಜನತೆಯಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮದ ಮೂಲಕ ಶ್ರಮಿಸಲಾಗುತ್ತಿದೆ ಎಂದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ತಮಿಳುನಾಡಿನ ನೀರಾವರಿ ವಿಷಯದಲ್ಲಿ ತೋರುವ ಉದಾರತೆ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನಕ್ಕೆ ತೋರುತ್ತಿಲ್ಲ, ಎರಡೂ ಪಕ್ಷಗಳ ಬದ್ಧತೆ ಕೊರತೆಯಿಂದ ರಾಜ್ಯದಲ್ಲಿ ನೀರಾವರಿ ಯೋಜನೆ ಕಳೆದ ಹಲವು ದಶಕಗಳಿಂದಲೂ ನೆನೆಗುದಿಗೆ ಬಿದ್ದಿದೆ, ತುಮಕೂರು ಜಿಲ್ಲೆಯ ಜನರ ಋಣವನ್ನು ನಮ್ಮ ಕುಟುಂಬ ಎಂದಿಗೂ ತೀರಿಸಲಾಗದು. ಜಿಲ್ಲೆಯ ನೀರಾವರಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ 2023ಕ್ಕೆ ಜೆಡಿಎಸ್ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರಲು ಶ್ರಮಿಸಬೇಕು, ಕೋಮು ದ್ವೇಷದ ತಳಹದಿ, 60 ಪರ್ಸೆಂಟ್ ಕಮಿಷನ್ ಹಣದ ಬಿಜೆಪಿ ಸರ್ಕಾರ, ಇದರಲ್ಲಿ ಪರೋಕ್ಷವಾಗಿ ಪಾಲ್ಗೊಂಡಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ತೆರಿಗೆ ಹಣ ಲೂಟಿ ಹೊಡೆಯುತ್ತಿವೆ, ಇಂತಹ ಜನವಿರೋಧಿ ಸರ್ಕಾರಗಳನ್ನು ತಿರಸ್ಕರಿಸಿ ರಾಜ್ಯದ ಪರವಾಗಿರುವ ಜೆಡಿಎಸ್ ಪಕ್ಷಕ್ಕೆ ಜನ ಆಶೀರ್ವಾದ ಮಾಡಬೇಕು ಎಂದರು.
ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಆಡಳಿತರೂಡ ಬಿಜೆಪಿ ಸರ್ಕಾರ ತನ್ನ ವೈಲ್ಯ ಮುಚ್ಚಿಟ್ಟಿಕೊಳ್ಳಲು ಧಾರ್ಮಿಕ ಸಂಘರ್ಷ ಸೃಷ್ಟಿಸುತ್ತಿದೆ, ಆದರೆ ಇದನ್ನು ಕಾಂಗ್ರೆಸ್ ಪಕ್ಷ ಖಂಡನೆ ಮಾಡದೆ ಒಂದು ವರ್ಗದ ಮತ ಕಳೆದುಕೊಳ್ಳುವ ಭೀತಿಯಿಂದ ಚಕಾರ ಎತ್ತಲಿಲ್ಲ, ಆದರೆ ಜೆಡಿಎಸ್ ಪಕ್ಷದ ವರಿಷ್ಠರು ಮಾತ್ರ ಸರ್ವ ಜನಾಂಗದ ಶಾಂತಿ ತೋಟವಾದ ಕರ್ನಾಟಕದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸುವ ನಿಟ್ಟಿನಲ್ಲಿ ಧ್ವನಿ ಎತ್ತಿದರು, ರಾಜ್ಯದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಬೇಕೆಂದರು.
ತಾಲೂಕು ಜೆಡಿಎಸ್ ವರಿಷ್ಠ, ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಹೇಮಾವತಿ ಯೋಜನೆ ಮೂಲಕ ತಾಲೂಕಿಗೆ ಸಮರ್ಪಕ ನೀರು ಹರಿಸಲಾಗದು, ತಾಲೂಕಿನ 208 ಕೆರೆಗಳಿಗೆ ಸಮಗ್ರ ನೀರಾವರಿ ಯೋಜನೆಗೆ ಒತ್ತು ನೀಡುವಂತೆ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿ, ತಾಲೂಕಿನಲ್ಲಿ ನೀರಾವರಿ, ರಸ್ತೆ, ಆಸ್ಪತ್ರೆ, ಶಿಕ್ಷಣ ಸೇರಿದಂತೆ ಸಮಗ್ರ ಅಭಿವೃದ್ಧಿ ಜೆಡಿಎಸ್ ಅಧಿಕಾರದ ಅವಧಿಯಲ್ಲಿ ಮಾತ್ರ ಅಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗಣ್ಯರನ್ನು ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಸುಡು ಬಿಸಿಲನ್ನು ಲೆಕ್ಕಿಸದೆ, ಹೂ ಮಳೆ ಸುರಿಸುತ್ತಾ ಪೂರ್ಣಕುಂಭದೊಂದಿಗೆ ವೇದಿಕೆಗೆ ಕರೆ ತಂದರು. ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ಪ್ರಾಸ್ತಾವಿಕ ಭಾಷಣ ಮಾಡಿದರು, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಎಂಎಲ್ಸಿ ತಿಪ್ಪೇಸ್ವಾಮಿ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಸುಧಾಕರಲಾಲ್, ಮುಖಂಡರಾದ ಅಂಜನಪ್ಪ, ಕೆ.ಎಲ್.ಹರೀಶ, ಹರೀಶನಾಯಕ, ಗಂಗಣ್ಣ, ತಮ್ಮಣ್ಣಗೌಡ, ವರದರಾಜು, ಸುರೇಶ, ದೀಪು, ಮನೋಜ, ಜೀಯಾವುಲ್ಲಾ, ಅನ್ಸರ್ ಪಾಶ, ಅಯಿಶಾಬೀ ಇತರರು ಇದ್ದರು

ಗೃಹ ಸಚಿವರ ಪಾತ್ರದ ದಾಖಲೆ ಬಹಿರಂಗಪಡಿಸಲಿ
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ನ ದಿನೇಶ್ ಗುಂಡುರಾವ್ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ.
ಅವರ ಬಳಿ ಪಿಎಸೈ ಹಗರಣದ ಬಗ್ಗೆ ಗೃಹ ಸಚಿವರ ಪಾತ್ರ ಇರುವ ಬಗ್ಗೆ ಮಾಹಿತಿ ಇದ್ದಲ್ಲಿ ಬಹಿರಂಗಪಡಿಸಲಿ, ಮೇಲ್ನೊಟಕ್ಕೆ ಇದು ಕೆಲ ಅಧಿಕಾರಿಗಳು, ದಲ್ಲಾಳಿಗಳು ಸೇರಿಕೊಂಡು ನಡೆಸಿರುವ ಹಗರಣ ಎಂದು ಕಂಡು ಬರುತ್ತಿದೆ, ಸಮಗ್ರ ತನಿಖೆ ನಡೆಸಲಿ ಎಂದರು.

Get real time updates directly on you device, subscribe now.

Comments are closed.

error: Content is protected !!