ತುಮಕೂರು: ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್ (54) ಅವರು ಹೃದಯಾಘಾತದಿಂದ ಶುಕ್ರವಾರ ಮಧ್ಯರಾತ್ರಿ 12 ಗಂಟೆಯಲ್ಲಿ ನಿಧನರಾದರು.
ಚಿತ್ರದುರ್ಗ ಜಿಲ್ಲೆ ಜಗಳೂರು ಹೋಬಳಿ ಚಿಕ್ಕೋಬನಹಳ್ಳಿ ಗ್ರಾಮದ ನಿವಾಸಿಯಾಗಿರುವ ಶಿವಕುಮಾರ್ ಕಳೆದ ಒಂದೂವರೆ ವರ್ಷದಿಂದ ತುಮಕೂರು ಜಿಲ್ಲೆಯ ಗುಪ್ತಚರ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶ್ರೀಯುತರು ಪತ್ನಿ ವಿಜಯಕುಮಾರಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಹಿಂಭಾಗದ ಪೊಲೀಸ್ ವಸತಿಗೃಹದಲ್ಲಿ ಡಿವೈಎಸ್ಪಿ ಶಿವಕುಮಾರ್ ಕುಟುಂಬ ವಾಸವಾಗಿದ್ದರು. ರಾತ್ರಿ ಮಲಗಿದ್ದ ಇವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ, ತಕ್ಷಣ ಎದ್ದಿರುವ ಶಿವಕುಮಾರ್ ಅವರು ಎದೆನೋವು ಎಂದು ಹೇಳಿದ್ದಾರೆ, ಇದಾದ ಕ್ಷಣಾಧರ್ದಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ಹೇಳಲಾಗಿದೆ.
ಶಿವಕುಮಾರ್ ಅವರು ಹೃದಯಾಘಾತದಿಂದ ಮೃತಪಡುತ್ತಿದ್ದಂತೆ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. 1994 ರ ಬ್ಯಾಚ್ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದ ಶಿವಕುಮಾರ್ ಅವರು ಬೆಂಗಳೂರು ನಗರದ ಸಂಪಿಗೆಹಳ್ಳಿ ಉಪವಿಭಾಗ, ಮಾರತ್ಹಳ್ಳಿ ಉಪವಿಭಾಗ, ಕರ್ನಾಟಕ ಲೋಕಾಯುಕ್ತ ಕಚೇರಿ ಹಾಗೂ ತುಮಕೂರಿನಲ್ಲೂ ಪೊಲೀಸ್ ಉಪಾಧೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇತ್ತೀಚೆಗಷ್ಟೆ ಸಚಿವ ಮಾಧುಸ್ವಾಮಿ ಅವರ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ಅವರು ಆಗಮಿಸಿದ್ದಾಗ ಅವರೊಂದಿಗೆ ಸ್ವತಃ ಡಿವೈಎಸ್ಪಿ ಶಿವಕುಮಾರ್ ಅವರೆ ಬಯಸಿ ಪತ್ರಿಕಾ ಛಾಯಾಗ್ರಾಹಕರನ್ನು ಕೇಳಿಕೊಂಡು ಫೋಟೋ ತೆಗೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಶ್ರೀಯುತರ ಅಂತ್ಯಕ್ರಿಯೆಯು ಅವರ ಹುಟ್ಟೂರಾದ ಚಿಕ್ಕೋಬನಹಳ್ಳಿ ಗ್ರಾಮದ ಶನಿವಾರ ಮಧ್ಯಾಹ್ನ ನೆರವೇರಿತು.
ಸಂತಾಪ: ಗುಪ್ತಚರ ವಿಭಾಗದ ಡಿವೈಎಸ್ಪಿ ಶಿವಕುಮಾರ್ ಅವರ ನಿಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ಸಂತಾಪ ಸೂಚಿಸಿದೆ.
Comments are closed.