ಮಡಿವಾಳ ಜನಾಂಗದ ಜನಜಾಗೃತಿ ಸಮಾವೇಶ ಮೇ 22ಕ್ಕೆ

238

Get real time updates directly on you device, subscribe now.

ತುಮಕೂರು: ಕರ್ನಾಟಕ ರಾಜ್ಯ ಮಡಿವಾಳರ ಸಂಘದ ವತಿಯಿಂದ ಮೇ 22 ರಂದು ತುಮಕೂರಿನಲ್ಲಿ ನಡೆಯುವ ಮಡಿವಾಳ ಜನಾಂಗದ ಬೃಹತ್ ಜನಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ಸಮ್ಮೇಳನದ ಪೋಸ್ಟರ್ ಬಿಡುಗಡೆ ಮಾಡಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಾಯಿತು.

ನಗರದ ಬಿ.ಹೆಚ್.ರಸ್ತೆಯ ಆರ್ಟಿಓ ಕಚೇರಿ ಆವರಣದಲ್ಲಿರುವ ವರಪ್ರದ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಲಕ್ಷ್ಮಣ್ ಪೋಸ್ಟರ್ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಅತ್ಯಂತ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಮಹತ್ವದ ಹೋರಾಟವನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ, ಆದರೆ ಸರಕಾರ ಇದುವರೆಗೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ, ದೇಶದ 17 ರಾಜ್ಯಗಳಲ್ಲಿ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ, ಕರ್ನಾಟಕದಲ್ಲಿಯೂ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆದು ಶಿಫಾರಸ್ಸು ಮಾಡಲಾಗಿದೆ ಎಂದರು.
ಅತ್ಯಂತ ಹಿಂದುಳಿದಿರುವ ಮಡಿವಾಳ ಸಮಾಜದ ಯುವಜನತೆ ಪ್ರಬಲ ಜಾತಿಗಳ ನಡುವೆ ಪೈಪೋಟಿ ನೀಡುವುದು ಕಷ್ಟವಾಗಿದೆ, ಈ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರು, ಕೂಡಲಸಂಗಮ, ಮೈಸೂರು, ಮಂಡ್ಯ ಹಾಗೂ ಚಿತ್ರದುರ್ಗದಲ್ಲಿ ನಡೆದ ಸಮಾವೇಶದ ರೀತಿಯೇ ತುಮಕೂರಿನಲ್ಲಿಯೂ ಮಡಿವಾಳರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಇದರ ಅಂಗವಾಗಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗಿದೆ ಎಂದು ಲಕ್ಷ್ಮಣ್ ತಿಳಿಸಿದರು.
ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಕೆಂಪನರಸಯ್ಯ ಮಾತನಾಡಿ, ಇದುವರೆಗೂ ನಡೆದ ಸಮಾವೇಶಗಳ ಫಲವಾಗಿ ಸರಕಾರ ಮಡಿವಾಳ ಮಾಚಿದೇವರ ಜನ್ಮಸ್ಥಳದ ಅಭಿವೃದ್ಧಿಗೆ 3 ಕೋಟಿ ರೂ. ನೀಡಿದೆ, ಜನಾಂಗದ ಅಭಿವೃದ್ಧಿಗೆ 60 ಕೋಟಿ ರೂ. ಬಿಡುಗಡೆ ಮಾಡಿದೆ, ಮಾಚಿದೇವರ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ಚಿತ್ರದುರ್ಗದ ಮಾಚಿದೇವ ಸಂಸ್ಥಾನ ಮಠದ ಅಭಿವೃದ್ಧಿಗೆ 1 ಕೋಟಿ ರೂ. ಹಾಗೂ ಸಮಾಜದ 8 ಜನರಿಗೆ ಪ್ರಮುಖ ಹುದ್ದೆಗಳನ್ನು ನೀಡಿದೆ, ಇವೆಲ್ಲವುಗಳಿಗಿಂತ ಮುಖ್ಯವಾಗಿರುವ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂಬುದು ನಮ್ಮ ಹೋರಾಟವಾಗಿದೆ, ಈ ವಿಚಾರವಾಗಿ ಸರಕಾರದ ಮೇಲೆ ಒತ್ತಡ ತರಲು ತಮಕೂರಿನ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಮೇ 22 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾವೇಶ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಶಾಂತಕುಮಾರ್, ಚಿಕ್ಕಣ್ಣ, ವೆಂಕಟರಾಮಯ್ಯ, ಕೃಷ್ಣಮೂರ್ತಿ, ಕೆಂಪರಾಮಯ್ಯ, ಎಂ.ಕೆ.ವೆಂಕಟಸ್ವಾಮಿ, ಶ್ರೀನಿವಾಸ್, ಅಂಬಿಕಾ, ಮಂಜುಳ, ಲೋಕೇಶ್, ಚನ್ನಬಸವಣ್ಣ, ಕೆಂಪಣ್ಣ, ಆನಂದಮೂರ್ತಿ, ಗೋವಿಂದರಾಜು, ಕರಿಯಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!