ತುಮಕೂರು: ಪ್ರಬಲ ಜಾತಿಗಳನ್ನು ಪ್ರವರ್ಗ-2ಕ್ಕೆ ಸೇರಿಸುವುದರಿಂದ ಹಿಂದುಳಿದ ವರ್ಗಗಳಿಗೆ ಸೇರಿದ 105 ಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ, ಇದರ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸವನ್ನು ಹಿಂದುಳಿದ ವರ್ಗಗಳ ಮುಖಂಡರು ಮಾಡಬೇಕಾಗಿದೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಹಿಂದುಳಿದ ವರ್ಗಗಳ ಹಿತರಕ್ಷಣಾ ಸಮಿತಿ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಚಿಕ್ಕನಾಯಕನಹಳ್ಳಿ ತಾಲೂಕು ಹಿಂದುಳಿದ ವರ್ಗಗಗಳ ಹಿತರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಭರಣಿಯಲ್ಲಿ ಮಾತನಾಡಿ, ಪ್ರಬಲ ಜಾತಿಗಳನ್ನು ಪ್ರವರ್ಗ-2ಎಗೆ ಸೇರಿಸುವುದರಿಂದ ಹಿಂದುಳಿದ ಜಾತಿಗಳಿಗೆ ಸರಕಾರಿ ನೌಕರಿ, ರಾಜಕೀಯ ಅಧಿಕಾರ ಮರೀಚಿಕೆಯಾಗಲಿದೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಕುಸಿಯುವುದಲ್ಲದೆ ಮುಂದಿನ ಯುವಜನತೆ ಸಾಕಷ್ಟು ಪಶ್ಚಾತಾಪ ಪಡಲಿದ್ದಾರೆ, ಹಾಗಾಗಿ ಸರಕಾರ ಪ್ರಬಲ ಜಾತಿಗಳನ್ನು ಹಿಂದುಳಿದ ವರ್ಗ ಎಗೆ ಸೇರಿಸುವ ಪ್ರಸ್ತಾಪ ಕೈಬಿಡಬೇಕೆಂಬುದು ನಮ್ಮ ಆಗ್ರಹವಾಗಿದೆ, ಅಲ್ಲದೆ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಚಾರ ಸಂಕಿರಣದಂತಹ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾ ಸಮಿತಿಯ ಮುಖಂಡರಿಗೆ ಮನವಿ ಮಾಡಿದರು.
ಸಮಿತಿಯ ಮತ್ತೊಬ್ಬ ಸಂಚಾಲಕ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಪಂಚಮಶಾಲಿ ಲಿಂಗಾಯಿತರನ್ನು ಪ್ರವರ್ಗ 2ಎ ಗೆ ಸೇರಿಸಲು ಸರಕಾರ ಮುಂದಾಗಿದೆ, ಇದು ಸಂವಿಧಾನಕ್ಕೆ ಮಾಡಿದ ಅಪಚಾರ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯವೆಂಬುದು ಈಗಾಗಲೇ ಮರೀಚಿಕೆಯಾಗಿದೆ, ಹಿಂದುಳಿದ ಸಮುದಾಯದಲ್ಲಿರುವ ಜಾತಿಗಳು ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೌಲಭ್ಯ ಸಿಗದೆ ತತ್ತರಿಸಿ ಹೋಗಿರುವಂತಹ ಹೊತ್ತಿನಲ್ಲಿ, ಪ್ರಬಲ ಜಾತಿಗಳನ್ನು ಪ್ರವರ್ಗ 2ಕ್ಕೆ ಸೇರಿಸುವುದರಿಂದ ಆ ಸಮುದಾಯಗಳಿಗೆ ಮತ್ತಷ್ಟು ಅನ್ಯಾಯ ಮಾಡಿದಂತಾಗುತ್ತದೆ, ಹಾಗಾಗಿ ಸರಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂಬುದು ಹಿಂದುಳಿದ ವರ್ಗಗಳ ಆಗ್ರಹವಾಗಿದೆ, ಒಂದು ವೇಳೆ ಸರಕಾರ ಸರಿಯಾದ ತೀರ್ಮಾನ ತೆಗೆದುಕೊಂಡು ಓಬಿಸಿಗಳ ಹಿತರಕ್ಷಿಸಿದಿದ್ದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ರೂಪಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದು, ಇದಕ್ಕೆ ಎಲ್ಲಾ ಹಿಂದುಳಿದ ವರ್ಗಗಳ ಸಮುದಾಯದವರು ಯಾವ ತ್ಯಾಗಕ್ಕಾದರೂ ಸಿದ್ಧರಾಗುವಂತೆ ಮನವಿ ಮಾಡಿದರು.
ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಧನಿಯಕುಮಾರ್ ಮಾತನಾಡಿ, ಪ್ರಬಲ ಜಾತಿಗಳನ್ನು ಹಿಂದುಳಿದ ವರ್ಗ ಬಿ ಗೆ ಸೇರಿಸಲು ಮುಂದಾಗಿರುವುದು ಖಂಡನೀಯ, ಒಂದು ವೇಳೆ ಸರಕಾರ ಈ ವಿಚಾರದಲ್ಲಿ ಹಿಂದುಳಿದ ಸಮುದಾಯಗಳ ವಿರುದ್ಧವಾಗಿ ಕೆಲಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಸಂಪೂರ್ಣವಾಗಿ ಹಿಂದುಳಿದ ಜಾತಿಗಳು ಬಿಜೆಪಿಗೆ ವಿರುದ್ಧವಾಗಿ ನಿಲ್ಲುತ್ತವೆ ಎಂಬ ಎಚ್ಚರಿಕೆ ನೀಡಿದರು.
ಹಿಂದುಳಿದ ವರ್ಗಗಳ ಯುವ ಜನರಿಗೆ ಸರಕಾರಿ ಕೆಲಸವೆಂಬುದು ಮರೀಚಿಕೆಯಾಗಿದೆ, ಶಿಕ್ಷಣ ಮತ್ತು ರಾಜಕೀಯದಲ್ಲಿಯೂ ಮೀಸಲಾತಿ ಬಹಳ ದೂರದ ಮಾತಾಗಿದೆ, ಇಂತಹ ವೇಳೆಯಲ್ಲಿ ಪ್ರಬಲ ಜಾತಿಗಳನ್ನು ಸೇರ್ಪಡೆ ಮಾಡುವುದು, ನಮ್ಮ ತಟ್ಟೆಯಲ್ಲಿರುವ ಅನ್ನವನ್ನು ಕಸಿದು ಬಲಾಢ್ಯರಿಗೆ ನೀಡಿದಂತಾಗುತ್ತದೆ, ಇದು ಎಸ್ಸಿ, ಎಸ್ಟಿ, ಓಬಿಸಿ ಸಮುದಾಯಗಳು ಮೀಸಲಾತಿ ಮೂಲಕ ಪಡೆಯುತ್ತಿರುವ ಸೌಲಭ್ಯಗಳಿಗೆ ಹಳ್ಳ ತೋಡಿದಂತಾಗುತ್ತದೆ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಶೀಘ್ರವೇ ವಿಚಾರ ಸಂಕಿರಣವೊಂದನ್ನು ಏರ್ಪಡಿಸಲಾಗುವುದು ಎಂದು ಧನಿಯಕುಮಾರ್ ತಿಳಿಸಿದರು.
ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಕೆಂಪರಾಜು ಮಾತನಾಡಿ, ಒಬಿಸಿಗಳ ಹಿತರಕ್ಷಣೆಗೆ ಧರಣಿ ಕೈಗೊಂಡಿರುವುದನ್ನು ಬೆಂಬಲಿಸಿ ಇಂದು ನಾವೂ ಕೂಡ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ, ಹಿಂದುಳಿದ ಸಮುದಾಯಗಳಿಗೆ ನೀಡುತ್ತಿರುವ ಅಲ್ಪಪ್ರಮಾಣದ ಸವಲತ್ತುಗಳು ಇನ್ನೂ ಕೆಲ ಸಣ್ಣ, ಅತಿ ಸಣ್ಣ ಜಾತಿಗಳಿಗೆ ತಲುಪಿಲ್ಲ, ಅಭಿವೃದ್ಧಿ ನಿಗಮಗಳಲ್ಲಿ ನಿಗದಿ ಪಡಿಸಿರುವ ಗುರಿಗಳಿಗೂ ಜನಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ, ಹೀಗಿರುವಾಗ ಪ್ರಬಲ ಜಾತಿಗಳನ್ನು ಸೇರಿಸುವುದರಿಂದ ಹೆಚ್ಚಿನ ತೊಂದರೆಯಾಗಲಿದೆ, ಈ ಬಗ್ಗೆ ಹಿಂದುಳಿದ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ತಾಲೂಕು, ಹೋಬಳಿ ಮಟ್ಟದಲ್ಲಿ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಬೃಹತ್ ಹೋರಾಟ ರೂಪಿಸಿ, ಪ್ರಬಲ ಜಾತಿಗಳನ್ನು ಪ್ರವರ್ಗ-2ಎಗೆ ಸೇರಿದಂತೆ ಒತ್ತಡ ತರಲಾಗುವುದು ಎಂದರು.
ಭರಣಿ ಸತ್ಯಾಗ್ರಹದಲ್ಲಿ ಮುಖಂಡರಾದ ಜಾಕೀರ್ ಹುಸೇನ್, ಶಿವಣ್ಣ, ರವಿಕುಮಾರ್, ಚಂದ್ರಶೇಖರ್ ಹುಳಿಯಾರು, ನಟರಾಜು, ಗುರುಪ್ರಸಾದ್, ರಾಜು ಹೊನ್ನೇಬಾಗಿ ಮುಂತಾದವರು ಭಾಗವಹಿಸಿದ್ದರು.
Get real time updates directly on you device, subscribe now.
Prev Post
Next Post
Comments are closed.