ಮುಸ್ಲಿಂ ಬಾಂಧವರಿಂದ ಪವಿತ್ರ ರಂಜಾನ್ ಆಚರಣೆ

249

Get real time updates directly on you device, subscribe now.

ತುಮಕೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಆರ್ಭಟದಿಂದಾಗಿ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ತಮ್ಮ ಮನೆಗಳಲ್ಲೇ ಆಚರಿಸಿದ್ದರು, ಆದರೆ ಈ ಬಾರಿ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ತಗ್ಗಿ, ಕಠಿಣ ಕ್ರಮಗಳನ್ನು ತೆರವುಗೊಳಿಸಿರುವುದರಿಂದ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಿದರು.
ಮಂಗಳವಾರ ಬೆಳಗ್ಗೆ 9.15ಕ್ಕೆ ನಗರದ ಮೆಳೇಕೋಟೆ ಸಮೀಪ ಇರುವ ಮಾಜಿ ಶಾಸಕ ಡಾ.ನಜೀರ್ ಅಹ್ಮದ್ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಮಾವೇಶಗೊಂಡು ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ನಂತರ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹೊಸ ಉಡುಪುಗಳನ್ನು ಧರಿಸಿ, ಒಬ್ಬರಿಗೊಬ್ಬರು ಆಲಿಂಗನ ಮಾಡಿ ಹಬ್ಬದ ಶುಭಾಶಯ ಕೋರಿದ್ದು ಕಂಡು ಬಂತು,
ಕಳೆದ 2 ವರ್ಷಗಳಿಂದ ಕೊರೊನಾ ಸೋಂಕಿನಿಂದಾಗಿ ರಂಜಾನ್ ಹಬ್ಬ ಕಳೆಗಟ್ಟಿರಲಿಲ್ಲ, ಆದರೆ ಈ ಬಾರಿ ರಂಜಾನ್ ಹಬ್ಬದ ಸಂಭ್ರಮದ ಹಿಂದೂ ಮತ್ತು ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾಗಿ ಮಾರ್ಪಟ್ಟಿದೆ.
ಈದ್ಗಾ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಉಪ ವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್ ಕುಮಾರ್, ಡಿವೈಎಸ್ಪಿ ಶ್ರೀನಿವಾಸ್ ಅವರು ಭೇಟಿ ನೀಡಿ ಮಾಜಿ ಶಾಸಕರಾದ ಎಸ್.ಷಫಿ ಅಹಮದ್, ಡಾ.ರಫೀಕ್ ಅಹಮದ್, ಇಕ್ಬಾಲ್ ಅಹಮದ್ ಸೇರಿದಂತೆ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು.
ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ.ರಫೀಕ್ ಅಹಮದ್ ಹಾಗೂ ಇಕ್ಬಾಲ್ ಅಹಮದ್ ಮಾತನಾಡಿ, ಪವಿತ್ರವಾದ ರಂಜಾನ್ ಹಬ್ಬವನ್ನು ಮುಸ್ಲಿಂ ಹಾಗೂ ಹಿಂದೂ ಬಾಂಧವರು ಸೇರಿ ಸಡಗರದಿಂದ ಆಚರಿಸಲಾಗುತ್ತಿದೆ, ಒಂದು ತಿಂಗಳ ಕಾಲ ಉಪವಾಸ ಇದ್ದು ಪವಿತ್ರವಾಗಿ ಹಬ್ಬ ಆಚರಣೆ ಮಾಡಲಾಗುತ್ತಿದೆ, ಬಸವ ಜಯಂತಿ ಹಾಗೂ ರಂಜಾನ್ ಎರಡೂ ಹಬ್ಬಗಳು ಒಂದೇ ದಿನ ಬಂದಿರುವುದು ಹಿಂದೂ ಮತ್ತು ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾಗಿದೆ ಎಂದರು.
ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!