ಬಸವಣ್ಣ ಜಗತ್ತು ಕಂಡ ಮಹಾನ್ ದಾರ್ಶನಿಕ

ಮನುಷ್ಯ ಸಮಾಜದ ಋಣ ತೀರಿಸುವ ಕೆಲಸ ಮಾಡಲಿ: ಸೊಗಡು ಶಿವಣ್ಣ

109

Get real time updates directly on you device, subscribe now.

ತುಮಕೂರು: ಜಗತ್ತಿಗೆ ಬೇಕಾದ ಇಬ್ಬರು ಮಹಾನ್ ದಾರ್ಶನಿಕರು ಬಸವಣ್ಣ, ಸಿದ್ದರಾಮೇಶ್ವರರು, ಕೆರೆ ಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಯೋಜನೆ ಮಾಡಿದರು, ಅದೇ ಇಂದಿಗೂ ಮಾದರಿಯಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.

ನಗರದ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಿಂದ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವವೇಶ್ವರ ಮತ್ತು ಕಾಯಕಯೋಗಿ ಸಿದ್ದರಾಮೇಶ್ವರರ ಜಯಂತಿಯಲ್ಲಿ ಮಾತನಾಡಿ, ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಎಲ್ಲರು ಚಿಂತಿಸಬೇಕಿದೆ, ಇರುವುದರಲ್ಲಿಯೇ ಸಮಾಜಕ್ಕೆ ಒಳಿತನ್ನೇ ಮಾಡುವ ಮನೋಭಾವನೆ ರೂಢಿಸಿಕೊಂಡಾಗ ಮಾತ್ರ ಸಮುದಾಯ ಶಕ್ತವಾಗಲಿದೆ, ಸಮುದಾಯಕ್ಕೆ ಕೊಡುವ ನಿಟ್ಟಿನಲ್ಲಿ ಸಮುದಾಯ ಮುಖಂಡರು ಚಿಂತಿಸಬೇಕಿದೆ ಎಂದು ಹೇಳಿದರು.
ವೀರಶೈವ ಬ್ಯಾಂಕ್ ಮಾಜಿ ನಿರ್ದೇಶಕ ಹೆಚ್.ಜಿ.ಬಸವರಾಜು ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ದೇಶದ ಸಮಾನತೆಯ ಆಶಯಗಳು, ಭಗವಾನ್ ಬುದ್ಧ ವೈಚಾರಿಕ ವಿಚಾರಗಳನ್ನು ತಿಳಿಸಿದರೆ ಅಣ್ಣ ಬಸವಣ್ಣ ಅದಕ್ಕೆ ಸ್ಥಿತಪ್ರಜ್ಞೆ ಮೂಡಿಸಿದರು, ಅಂಬೇಡ್ಕರ್ ಅದಕ್ಕೊಂದು ಚೌಕಟ್ಟು ನೀಡಿದರು ಅದನ್ನು ಪಾಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕಿದೆ, ದೇಶ ಇರುವವರೆಗೆ ಬುದ್ಧ, ಬಸವ, ಅಂಬೇಡ್ಕರ್ ಪ್ರಾಂತಸ್ಮರಣೀಯರು ಎಂದು ಹೇಳಿದರು.
ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಪೋಷಕರ ಮೇಲಿದೆ, 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಕ್ರಾಂತಿ ಮಾಡಿದರು, ವಚನ ಎಂದರೆ ಮಾತು, ಮಾತಿಗೆ ಬೆಲೆ ಕಟ್ಟಲಾಗುವುದಿಲ್ಲ, ಜಾತಿಗೆ ಹೊರತಾದ ವ್ಯವಸ್ಥೆ ತುಮಕೂರಿನಲ್ಲಿದೆ, ಭಾವನಾತ್ಮಕ ಸಂಬಂಧ ಎಲ್ಲರೊಳಗೆ ಒಂದಾಗಿದೆ ಎಂದು ಹೇಳಿದರು.
ಕಾಯಕಯೋಗಿ ಸಿದ್ದರಾಮೇಶ್ವರರು ಕಾಯಕವನ್ನು ಮಾಡಲು ಉತ್ತೇಜಿಸಿದರು, ಬಸವಣ್ಣ ಅದರಲ್ಲಿಯೇ ಕೈಲಾಸ ಕಾಣುವಂತೆ ಹೇಳಿದರು, ಪ್ರಪಂಚದ ಎಲ್ಲಾ ದಾರ್ಶನಿಕರಲ್ಲಿಯೂ ಬಸವಣ್ಣನವರ ಕೊಡುಗೆಯೇ ಹೆಚ್ಚಿದೆ, ಅವರು ನಮ್ಮವರು ಎಂಬ ಹೆಮ್ಮೆ ಇದ್ದರಷ್ಟೇ ಸಾಲದು, ಅವರ ಆದರ್ಶಗಳನ್ನು ಪಾಲಿಸಬೇಕೆಂದು ಹೇಳಿದರು.
ಸಮಾಜ ಬದಲಾಗುತ್ತಿದೆ, ಆದರೆ ಮನಸ್ಸು ಬದಲಾಗುವುದು ಬೇಡ, ತುಮಕೂರು ವೀರಶೈವ ಸಮಾಜ ಇಡೀ ರಾಜ್ಯದಲ್ಲಿಯೇ ಉತ್ತಮ ಸೇವೆ ಮಾಡಿದೆ, ಡಾ.ಶಿವಕುಮಾರಸ್ವಾಮೀಜಿ ಪ್ರಭಾವದಿಂದ ಉತ್ತಮ ಸಂಸ್ಕಾರವನ್ನು ವೀರಶೈವ ಸಮಾಜ ಅಳವಡಿಸಿಕೊಂಡಿದೆ, ಸಮಾಜದ ಸೇವೆಯನ್ನು ನಿಷ್ಕಳಂಕದಿಂದ ಮಾಡುತ್ತಿರುವ ಬಾವಿಕಟ್ಟೆ ಮಂಜಣ್ಣ ಅವರ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸಿದರು.
ಟಿ.ಆರ್.ಲೋಕೇಶ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಹಣಕಾಸು ಸಂಸ್ಥೆಗಳನ್ನು ನಡೆಸುವುದು ಸುಲಭದ ವಿಚಾರವಲ್ಲ, ಹಣಕಾಸು ಸಂಸ್ಥೆಗಳು ದಾಸೋಹ, ಉತ್ಸವ ನಡೆಸುವುದರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ, ಸಮುದಾಯದಲ್ಲಿರುವ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವ ಮೂಲಕ ಸಮುದಾಯವನ್ನು ಬಲಿಷ್ಠಗೊಳಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಕಾರದಮಠದ ಸ್ವಾಮೀಜಿ, 12ನೇ ಶತಮಾನದಲ್ಲಿಯೇ ಎರಡು ಮಾತಿನಲ್ಲೇ ಬಸವಣ್ಣ ಸಮಾಜದ ಒಳಿತು, ಕೆಡತನ್ನು ಹೇಳಿದ್ದಾರೆ, ಒಳಿತನ್ನು ಪಾಲಿಸುವ ಸಂಕಲ್ಪವನ್ನು ಎಲ್ಲರು ಮಾಡಬೇಕಿದೆ, ದೀಪದಂತಹ ಭಾವೈಕ್ಯತೆಯನ್ನು ರೂಢಿಸಿಕೊಳ್ಳಬೇಕಿದೆ ಎಂದರು.
ಬಸವಣ್ಣ, ಡಾ.ಶಿವಕುಮಾರಸ್ವಾಮೀಜಿ ಹೇಳಿದ್ದು ದಾಸೋಹ ಮಾಡಿ ಎಂದರು, ಅವರು ಹೇಳಿದಂತೆ ದಾಸೋಹದ ನಗರಿ ತುಮಕೂರಿನಲ್ಲಿ ಎಲ್ಲೆಡೆ ದಾಸೋಹ ನಡೆಯುತ್ತಿದೆ, ಇದೇ ನಮ್ಮ ಸಮುದಾಯದ ಆಶಯ, ನಮ್ಮ ಸಂಸ್ಕಾರ ಎಂದು ಹೇಳಿದ ಅವರು, 889 ವರ್ಷಗಳಾದರೂ ಬಸವಣ್ಣನವರ ಜಯಂತಿ ಮಾಡುತ್ತಿದ್ದೇವೆ ಎಂದರೆ ಬಸವಣ್ಣನವರು ಸಮುದಾಯಕ್ಕೆ ನೀಡಿರುವುದು ಎಂತಹ ಕೊಡುಗೆ ಎಂಬುದನ್ನು ಸ್ಮರಿಸಬೇಕು ಎಂದು ಹೇಳಿದರು.
ಬಸವಣ್ಣನವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗುವ ನಿಟ್ಟಿನಲ್ಲಿ ಜಯಂತಿ ಮಾಡುತ್ತೇವೆ, ಜಯಂತಿಗಳನ್ನು ಮಾಡಿ, ದಾಸೋಹ ಮಾಡಿ ಸುಮ್ಮನಾಗದೆ ಅವರ ಪರಂಪರೆ ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಈ ವೇಳೆ ಮೈತ್ರಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಹೇಮಾ ಪಂಚಾಕ್ಷರಿ, ಸ್ನೇಹ ಸಂಗಮ ಸೌಹಾರ್ದ ಸಹಕಾರಿಯ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಉಪಾಧ್ಯಕ್ಷ ನಾಗೇಶ್, ಕೊಪ್ಪಳ್ ನಾಗರಾಜು, ಉಪಾಧ್ಯಕ್ಷ ನಾಗೇಶ್ ಹೆಚ್.ಆರ್, ನಿರ್ದೇಶಕರಾದ ನಳಿನಾ ಟಿ.ಎಸ್, ಮೃತ್ಯುಂಜಯ.ಟಿ.ಬಿ, ಶಾಂತಕುಮಾರಿ ಟಿ.ಎಸ್, ಹೆಚ್.ಎನ್.ಶಿವಕುಮಾರ್, ಪ್ರವೀಣ್ ಪ್ರಸಾದ್, ಪ್ರಭಾಕರ್, ಅರುಣ್ ಕುಮಾರ್, ಟಿ.ಎಸ್.ಚಿದಾನಂದ, ಲೋಕೇಶ್ ಕುಮಾರ್, ಜಗದೀಶ್ ಟಿ.ಎಸ್, ಸಿದ್ದರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!